ಸುದ್ದಿಬಿಂದು ಬ್ಯೂರೋ
SIRSI:ಶಿರಸಿ:- ಸಮಾಜದಲ್ಲಿ ಜನರಿಗೆ ಸೇವೆ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯದ ಕೆಲಸ, ಅದರಲ್ಲೂ ಸಮಾಜದ ಕಟ್ಟಕಡೆಯ ರೈತರಿಗೆ ಬೆನ್ನೆಲುಬಾಗಿ, ತನ್ನ ಜೀವ ಲೆಕ್ಕಿಸದೇ ಅಡಿಕೆಕೊನೆ ಕೊಯ್ಲು ಮಾಡುವ ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ ಕೊನೆಗೌಡರಿಗೆ 10ಲಕ್ಷ ರೂಪಾಯಿಗಳ ಜೀವವಿಮೆ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ರೈತರು ನಮ್ಮ ದೇಶದ ಬೆನ್ನೆಲುಬು, ಅಂತಹ ರೈತರ ವಾಣಿಜ್ಯ ಬೆಳೆಯಾದ ಅಡಿಕೆಯ ಕೊನೆ ಕೊಯ್ಲು ಮಾಡಿ, ಅವರಿಗೆ ನೆರವಾಗುವ ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ಸಿಕ್ಕಿದ್ದು, ನನ್ನ ಭಾಗ್ಯ. ಸಮಾಜದಲ್ಲಿ ಎಲ್ಲರೂ ಸುಖವಾಗಿರಲಿ ಎಂದು ನಾವೇ ವಿಮೆಯ ಕಂತನ್ನು ಪಾವತಿಸಿ, ಪಾಲಿಸಿ ಪ್ರಾರಂಭ ಮಾಡಿದ್ದೇವೆ,
ನನ್ನ ಆದಾಯದ ಒಂದು ಭಾಗ ಹಣವನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇನೆ. ಸಮಾಜದಲ್ಲಿ ಎಲ್ಲರೂ ಪ್ರೀತಿಯಿಂದ ಅನ್ಯೋನ್ಯವಾಗಿ ಸಹೋದರರಂತೆ ಬದುಕಬೇಕು. ಅನಾಹುತವಾದರೆ ಯಾವುದೇ ಕಾರಣಕ್ಕೂ ಕೊನೆ ಗೌಡರ ಕುಟುಂಬ ಬೀದಿಗೆ ಬರಬಾರದು, ಅವರಿಗೆ ಸಮಸ್ಯೆ ಆಗಬಾರದು. ಅವಘಡ ಆದಾಗ ಅಡಿಕೆ ತೋಟದ ಮಾಲೀಕರಿಗೂ ಕೂಡ ಕೊನೆ ಗೌಡರ ಜೀವನಾಂಶ ಕೊಡುವುದು ಕಷ್ಟವಾಗುತ್ತದೆ, ಅದಕ್ಕೆ ಯಾರಿಗೂ ಸಮಸ್ಯೆ ಬೇಡ ಅಂತ ಪೋಸ್ಟ್ ಆಫೀಸ್ ಮುಖಾಂತರ ಜೀವವಿಮೆ ಪ್ರಾರಂಭ ಮಾಡಿದ್ದೇನೆ.
ಈಗಾಗಲೇ ಜಿಲ್ಲೆಯ ಹಲವು ಸೊಸೈಟಿಯ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮಾಡಿ ಕೊನೆಗೌಡರಿಗೆ ಜೀವವಿಮೆ ಮಾಡಿಸಿ ಕೊಟ್ಟಿದ್ದೇವೆ. ಇದು ಎಲ್ಲಾ ಕೊನೆಗೌಡರಿಗೂ ಜೀವ ವಿಮೆ ಮಾಡಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಮುಂಡಗನಮನೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಮಾತನಾಡಿ, ಇದೊಂದು ಮಹತ್ವದ ಕಾರ್ಯ, ಇಂತಹ ಮಹತ್ವದ ಕಾರ್ಯ ಮಾಡುತ್ತಿರುವ ಅನಂತಮೂರ್ತಿ ಹೆಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಸಂಘದ ಸಲಹೆಗಾರ ವಿ.ಆರ್. ಹೆಗಡೆ, ಕಾರ್ಯದರ್ಶಿ ಕೇಶವ ಹೆಗಡೆ, ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ಸೇರಿದಂತೆ ನೂರಾರು ಕೊನೆಗೌಡರು ಉಪಸ್ಥಿತರಿದ್ದರು.
ಸಾಲ್ಕಣಿ ಹಾಗೂ ಉಂಚಳ್ಳಿಯಲ್ಲಿ ಕೊನೆಗೌಡರಿಗೆ 10 ಲಕ್ಷ ರೂ. ಜೀವವಿಮೆ ವಿತರಣೆ
ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಕೊನೆಗೌಡರಿಗೆ 10ಲಕ್ಷ ರೂಪಾಯಿಗಳ ಜೀವವಿಮೆ ವಿತರಿಸಿದ ನಂತರ ತಾಲೂಕಿನ ಸಾಲ್ಕಣಿ ಹಾಗೂ ಉಂಚಳ್ಳಿಯ ಸೇವಾ ಸಹಕಾರಿ ಸಂಘಗಳಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ 10ಲಕ್ಷ ರೂಪಾಯಿಗಳ ಜೀವವಿಮೆ ಯೋಜನೆ ಕಾರ್ಯಕ್ರಮ ಹಮ್ಮಿಕೊಂಡು ಸ್ಥಳೀಯ ನೂರಾರು ಕೊನೆಗೌಡರಿಗೆ ಉಚಿತ ಜೀವವಿಮೆಗಳನ್ನು ಮಾಡಿಸಿಕೊಡಲಾಯಿತು.
ಕಾರ್ಯಕ್ರಮದದಲ್ಲಿ ಸಾಲ್ಕಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪುರುಷೋತ್ತಮ ನರಸಿಂಹ ಹೆಗಡೆ, ಉಪಾಧ್ಯಕ್ಷ ನರಸಿಂಹ ಹೆಗಡೆ, ಸಂಘದ ಕಾರ್ಯದರ್ಶಿ ರಾಜೇಶ್ ದಿಕ್ಷೀತ್, ಉಂಚಳ್ಳಿ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಜೆ.ಎಸ್. ಹೆಗಡೆ, ಸದಸ್ಯ ಶ್ರೀಪಾದ ಹೆಗಡೆ ಸೇರಿದಂತೆ ಸಂಘಡ ಸಿಬ್ಬಂದಿಗಳು ಉಪಸ್ಥಿತರಿದ್ದರು.