ಸುದ್ದಿಬಿಂದು ಬ್ಯೂರೋ
ಕಾರವಾರ:ಉತ್ತರಕನ್ನಡ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಗೇರು ಅಭಿವೃದ್ಧಿಗೆ ಪೂರಕವಾಗಿ ಸಿಂಪಡಿಸಿ ಬಾಕಿ ಉಳಿದಿದ್ದ ಎಂಡೋಸಲ್ಫಾನ್ (Endosulfan) ಕ್ರಿಮಿನಾಶಕದ ವಿಲೇವಾರಿ ಕುರಿತು ಸಮಗ್ರ ತನಿಖೆ ನಡೆಸುವಂತೆ ಸ್ಕೊಡ್‌ವೆಸ್(Skodves) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಒತ್ತಾಗಿಸಿದ್ದಾರೆ.

ಕಾರವಾರದ(karwar)ಜಿಲ್ಲಾ ಪತ್ರಿಕಾಭನದಲ್ಲಿ ಕರೆಯಲಾದ ಸುದ್ದಿಗೊಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಬಗ್ಗೆ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸದೆ ಇದ್ದರೆ ಎಂಡೋ ಬಾಧಿತರ ಸಮಸ್ಯೆ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಿಂಪಡಿಸಲಾದ ಎಂಡೋಸಲ್ಫಾನ್ ಕ್ರಿಮಿನಾಶಕದಿಂದ ಬಾಧೆಗೊಳಗಾದ ಜನರ ಪುನರ್‌ವಸತಿಯ ಬಗ್ಗೆ ನಿರಂತರ ಹೋರಾಟಗಳು ನಡೆಯುತ್ತಿದ್ದರೂ,ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಎಂಡೋಸಲ್ಫಾನ್ ಬಾಧಿತರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದ್ದರೂ ಈವರೆಗೂ ಬಾಧಿತ ಕುಟುಂಬಗಳನ್ನು ಪುನರ್‌ವಸತಿಗೊಳಿಸುವ ಯಾವುದೇ ಮಹತ್ವದ ಕಾರ್ಯವಾಗಿಲ್ಲ.

.ಎಂಡೋ ಬಾಧಿತರ ಪುನರ್‌ವಸತಿ ಬಗ್ಗೆ ಆದ್ಯತೆಯ ಮೇರೆಗೆ ಯೋಜನೆಗಳನ್ನು ರೂಪಿಸಿ ಕೇರಳ ಮಾದರಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗುವುದು ಎಂದು ಸರ್ಕಾರಗಳು ಹೇಳುತ್ತಾ ಬಂದಿದೆ.ಅವಶ್ಯಕತೆ,ಬೇಡಿಕೆಯನ್ನಾಧರಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯಾವುದೇ ಕಾರ್ಯ ಆಗುತ್ತಿಲ್ಲ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 11,794.23 ಹೆಕ್ಟೇರ್ ಗೇರು ನೆಡುತೋಪುಗಳಿಗೆ 1986 ರಿಂದ 2011 ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಒಟ್ಟೂ 57.000 ಲೀಟರ್ ವಿಷಕಾರಿ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಸಿಂಪಡಿಸಿದೆ. ಆದರೆ ನಿಗಮವು ನೀಡಿದ ದಾಖಲೆಗಳ ಪ್ರಕಾರ ಒಟ್ಟೂ ಖರೀದಿಸಲಾದ ಕ್ರಿಮಿನಾಶಕಗಳ ಪ್ರಮಾಣ ಹಾಗೂ ಬಳಕೆ ಮಾಡಲಾದ ಪ್ರಮಾಣಕ್ಕೆ ಭಾರೀ ಪ್ರಮಾಣದ ವ್ಯತ್ಯಾಸವಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ನೀಡಿದ ವರದಿಯಲ್ಲಿ 778 ಬ್ಯಾರೆಲ್‌ಗಳ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿತ್ತು ಆದರೆ ಕಾರ್ಪೋರೇಷನ್ ಅಧಿಕಾರಿಗಳು ಕೇವಲ 20 ಬ್ಯಾರೆಲ್‌ಗಳನ್ನು ಮಾತ್ರ ತೋರಿಸಿದ್ದು ಉಳಿದ ಬ್ಯಾರೆಲ್‌ಗಳು ಏನಾದವು ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ಕೆಲವು ಸಿಬ್ಬಂದಿಗಳು ಹೇಳುವಂತೆ ಎಂಡೋಸಲ್ಫಾನ್ ಕ್ರಿಮಿನಾಶಕದ ಬಗ್ಗೆ ಆಕ್ಷೇಪಗಳು ಬರುತ್ತಿದ್ದಂತೆ ಬಾಕಿ ಇದ್ದ ಕ್ರಿಮಿನಾಶಕ ಮತ್ತು ಅದರ ದಾಸ್ತಾನು ಪರಿಕರಗಳನ್ನು ಭೂಮಿಯಲ್ಲಿ ಹೂತಿದ್ದೇವೆ ಎಂದು ಹೇಳುತ್ತಿದ್ದಾರೆ. ಎಂಡೋಸಲ್ಫಾನ್ ಬಾಧಿತರ ಪುನರ್‌ವಸತಿ ರಕ್ಷಣೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದ ಉಡುಪಿಯ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನಭಾಗರವರು ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿದ ದೂರು ಅರ್ಜಿಯನ್ನು ಪುರಸ್ಕರಿಸಿದ ಹಸಿರು ನ್ಯಾಯಪೀಠವು ಕೇಂದ್ರ, ಕರ್ನಾಟಕ, ಕೇರಳ ಸರ್ಕಾರ, ಉಭಯ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿ ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ನೋಟೀಸ್ ಜಾರಿ ಮಾಡಿದ್ದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ವರದಿ ಸಲ್ಲಿಸಿದೆ.

ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟೂ 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆಂದು ದಾಖಲೆಗಳು ಹೇಳುತ್ತವೆ. ಆದರೆ ಗೇರು ನೆಡುತೋಪಿನ 5 ಕಿ.ಮೀ.ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ.ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ಸೌಲಭ್ಯ ಸಿಗದೇ ನೂರಾರು ಜನ ಸಾವನ್ನಪ್ಪಿದ್ದಾರೆ.

ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಇಲಾಖಾವಾರು ಗುರಿಯನ್ನು ನಿಗದಿಪಡಿಸಬೇಕು.ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಬಾಧಿತರ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಎಂಡೋಸಲ್ಫಾನ್ ಬಾಧಿತರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಅಥವಾ ಹಿಂದೆ ಇದ್ದ ಸುಸಜ್ಜಿತ ಫಿಸಿಯೋಥೆರಪಿ ಸಂಚಾರಿ ಆಸ್ಪತ್ರೆಯನ್ನು ಪುನರ್ ಜಾರಿಗೆ ತರಬೇಕು. ಎಂಡೋಸಲ್ಫಾನ್ ಬಾಧಿತರನ್ನು ನೋಡಿಕೊಳ್ಳುತ್ತಿರುವ ಮನೆಯ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗ ಹೊಂದಲು ಕಾರ್ಯಕ್ರಮ ರೂಪಿಸಬೇಕು. ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ಎಂಡೋಸಲ್ಫಾನ್ ಬಾಧಿತರ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಯಲ್ಲಿಯೇ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು.

ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಯನ್ನು ರಚಿಸಬೇಕು. ಜಿಲ್ಲೆಯ ಎಂಡೋ ಬಾಧಿತರಿಗಾಗಿ ಸಹಾಯವಾಣಿ ಸ್ಥಾಪಿಸಬೇಕು. ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಜನನವಾಗುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಈಗಾಗಲೇ ಸ್ಕೊಡ್‌ವೆಸ್ ಸಂಸ್ಥೆಯಿಂದ ಸಲ್ಲಿಸಿದ ಅಧ್ಯಯನ ವರದಿಗಳಲ್ಲಿ ಹೇಳಲಾದ ಇತರ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಗೆ ನಿರ್ದೇಶನ ನೀಡಬೇಕು.

ಎಂಡೋ ಬಾಧಿತರ ಹಿತರಕ್ಷಣಾ ವೇದಿಕೆ ರಚನೆಗೆ ತೀರ್ಮಾನ
ಎಂಡೋ ಬಾಧಿತರ ಧ್ವನಿಯನ್ನು ಗಟ್ಟಿಗೊಳಿಸಲು ಆರೂ ತಾಲೂಕುಗಳ ಎಂಡೋಸಲ್ಫಾನ್ ಬಾಧಿತರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಹಿತರಕ್ಷಣಾ ವೇದಿಕೆ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು‌
ಪತ್ರಿಕಾಗೋಷ್ಠಿಯಲ್ಲಿ ಮಾಲತಿ ಸುರೇಶ ಕರ್ಕಿ, ಎಂಡೋಸಲ್ಫಾನ್ ಕಾರ್ಯಕ್ರಮಗಳ ಮೇಲ್ವಿಚಾರಕರು, ಸೊಡ್‌ವೆಸ್ ಸಂಸ್ಥೆ, ವರ್ಷಾ ಪ್ರಭಾಕರ ಹೆಗಡೆ, ಯೋಜನಾ ವಿಭಾಗದ ಮುಖ್ಯಸ್ಥರು, ಸ್ಕೊಡ್‌ವೆಸ್ ಸಂಸ್ಥೆ, ಪ್ರಜ್ಞಾಕುಮಾರ ಹೆಗ್ಗಡೆ, ಯೋಜನಾ ಸಂಯೋಜಕ, ಸ್ಕೊಡ್‌ವೆಸ್ ಸಂಸ್ಥೆ ಮೊದಲಾದವರು ಹಾಜರಿದ್ದರು.