ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಕರಾವಳಿ ಭಾಗದಲ್ಲಿ ಉತ್ತಮ ಪರಿಸರ, ಸಮುದ್ರ, ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಈ ಭಾಗದ ಜನ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮುರುಡೇಶ್ವರದಲ್ಲಿ ನಡೆದ ಮೀನುಗಾರರ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಮೀನುಗಾರರು ಸೇರಿದಂತೆ ಕರಾವಳಿ ಭಾಗದ ಎಲ್ಲಾ ವರ್ಗದವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ಆಸ್ತಿ ಹೊಂದಿದ್ದರೂ ಅದನ್ನು ಮಾರಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಅತ್ಯುತ್ತಮವಾದ ಸಂಪನ್ಮೂಲಗಳಿವೆ.

ವಲಸೆ ತಪ್ಪಿಸಿ ಈ ಭಾಗದಲ್ಲೇ ಈ ಜನ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ” ಎಂದು ತಿಳಿಸಿದರು.

ಈ ವರ್ಷ 100 ಕಡೆ ಕಾಂಗ್ರೆಸ್ ಕಚೇರಿ
ನಮ್ಮ ಸರ್ಕಾರ ಇರುವಾಗಲೇ ಆದಷ್ಟು ಬೇಗ ಕಾಂಗ್ರೆಸ್ ಕಚೇರಿ ಕಟ್ಟಿಕೊಳ್ಳಿ ಸಧ್ಯದ ಪರಿಸ್ಥಿತಿ ನೋಡಿದರೆ ದುಃಖವಾಗುತ್ತಿದೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಹೇಳಿಕೆ ಹಿಂದೆ ಬೇರೆ ಲೆಕ್ಕಾಚಾರ ಇದೆ. ಬಿಜೆಪಿ ಅವಧಿಯಲ್ಲಿ ಅವರಿಗೆ ಬೇಕಾದ ಸಂಸ್ಥೆಗಳಿಗೆ ಬೇಕಾದ ರೀತಿಯಲ್ಲಿ ಕಚೇರಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಈ ವರ್ಷ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನೂರು ಕಡೆಗಳಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರವಾಗಿ ಪರಮೇಶ್ವರ್ ಅವರು ಮಾತನಾಡಿದ್ದಾರೆ” ಎಂದು ತಿಳಿಸಿದರು.

ತಪ್ಪು ಮುಚ್ಚಿಕೊಳ್ಳಲು ನಮ್ಮ ಶಾಸಕರ ಮೇಲೆ ಆರೋಪ
ಕಾಂಗ್ರೆಸ್ ಶಾಸಕರೇ ತಮಗೆ ಹಣ ನೀಡುವಂತೆ ಸಿಎಂ ಬಳಿ ಬೇಡಿಕೆ ಇಡುತ್ತಿದ್ದಾರೆ ಎಂಬ ವಿಜಯೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ, “ವಿಜಯೇಂದ್ರ ಅವರು ತಮ್ಮ ಲೋಪ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಸರ್ಕಾರ ಕೆಡವಿ ಸಿಎಂ ಆಗಲು ಒಂದು ಸಾವಿರ ಕೋಟಿ ಸಿದ್ಧಮಾಡಿಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ವಿಜಯೇಂದ್ರ ಅವರು ತಮ್ಮದೇ ಕೇಂದ್ರ ಗೃಹಮಂತ್ರಿಗೆ ಪತ್ರ ಬರೆದು ಈ ಬಗ್ಗೆ ಇಡಿ, ಸಿಬಿಐನಿಂದ ತನಿಖೆ ಮಾಡಿಸಲಿ. ಇದೆಲ್ಲವನ್ನು ಮುಚ್ಚಿಕೊಳ್ಳಲು ವಿಜಯೇಂದ್ರ ಈ ರೀತಿ ಹೇಳುತ್ತಿದ್ದಾರೆ” ಎಂದು ತಿಳಿಸಿದರು.

ವಿರೋಧ ಪಕ್ಷಗಳಿಂದ ನಮ್ಮ ಕಾರ್ಯಕ್ರಮದ ಬಗ್ಗೆ ಪ್ರಚಾರ
ಸರ್ಕಾರದಲ್ಲಿ ಹಣವಿಲ್ಲದೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, “ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಇನ್ನು ಎಂಟೂವರೆ ವರ್ಷ ನಮ್ಮ ಸರ್ಕಾರ ಆಡಳಿತ ಮಾಡಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡಿ, ನಮ್ಮ ಸರ್ಕಾರ ಬಡವರಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ” ಎಂದು ತಿಳಿಸಿದರು.

ಗಮನಿಸಿ