ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಜಿಗಿದಿರುವ ಮಹಿಳೆಯ ಮೃತದೇಹವು ದಾಂಡೇಲಿ ತಾಲೂಕಿನ ಕರಿಯಂಪಾಲಿ ಗ್ರಾಮದ ಹತ್ತಿರ ನದಿಯಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತ ಮಹಿಳೆ ಸ್ಥಳೀಯ ಗಣೇಶನಗರದ ನಿವಾಸಿ 41 ವರ್ಷ ವಯಸ್ಸಿನ ರೇಖಾ ಶಿವಾನಂದ ಕಂಬಾರಗಣವಿ ಎಂಬವರಾಗಿದ್ದಾರೆ. ಈ ಮಹಿಳೆ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಳಗಿ ರಸ್ತೆಯ ಸೇತುವೆಯಿಂದ ಜಿಗಿದ ಮಹಿಳೆಯನ್ನು ಹುಡುಕುವ ಕಾರ್ಯ ಶುಕ್ರವಾರ ಸಂಜೆಯವರೆಗೂ ನಡೆಸಿ, ಶನಿವಾರಕ್ಕೆ ಮುಂದುವರಿಸಲಾಗಿತ್ತು. ಶನಿವಾರ ಬೆಳಿಗ್ಗೆ ಕರಿಯಂಪಾಲಿ ಗ್ರಾಮದಲ್ಲಿ ನದಿಯಲ್ಲಿ ಮೃತದೇಹ ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಪತ್ತೆ ಹಚ್ಚಿ ನದಿಯಿಂದ ಮೇಲಕ್ಕೆ ತರಲಾಯಿತು.

ವೈಲ್ಡರ್ ನೆಸ್ಟ್, ಪ್ಲೈ ಕ್ಯಾಚರ್ ಮತ್ತು ಕಾಳಿ ಅಡ್ವೆಂಚರ್ ನವರ ರಾಪ್ಟ್ ಮತ್ತು ನುರಿತ ಸಿಬ್ಬಂದಿಗಳ ತಂಡದ ಜೊತೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಹಳಿಯಾಳದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಳುಗು ತಜ್ಞರು ಮಹಿಳೆಯ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡು ಅಂತಿಮವಾಗಿ ಮಹಿಳೆಯ ಮೃತ ದೇಹವನ್ನು ಪತ್ತೆ ಹಚ್ಚಿ ನದಿಯಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಹಶೀಲ್ದಾರ್ ಶೈಲೇಶ ಪರಮಾನಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ನೂ ಸ್ಥಳೀಯರು ಕೂಡ ತೆಪ್ಪದ ಮೂಲಕ ಶೋಧ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕರೆತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಗಮನಿಸಿ