ಯಲ್ಲಾಪುರ: ಇದು ನಾಯಕರ ಚುನಾವಣೆಯಲ್ಲ, ಪ್ರತಿ ಕಾರ್ಯಕರ್ತರ ಚುನಾವಣೆ. ಕಾಂಗ್ರೆಸ್ ಅಲೆ ಇದೆ ಎಂದು‌ ಚುನಾವಣೆಯನ್ನ ಬಹಳ ಸುಲಭವಾಗಿ ಪರಿಗಣಿಸಬಾರದು. ಗ್ಯಾರಂಟಿ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕರೆನೀಡಿದರು.

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರಕನ್ನಡ ಲೋಕಸಭಾ ಕ್ಷೇತ್ರ ದೊಡ್ಡದು. ಐದು ಶಾಸಕರು ನಮ್ಮವರಿದ್ದು, ನಾವೆಲ್ಲರೂ ಸೇರಿ ಕೆಲಸ ಮಾಡಿ ಈ ಬಾರಿ ಗೆಲುವು ಸಾಧಿಸಬೇಕಿದೆ. ಪ್ರತಿ ಹಳ್ಳಿಗಳಿಗೆ ನನಗೆ ಪ್ರಚಾರಕ್ಕೆ ತೆರಳಲು ಕಷ್ಟವಿದೆ, ಸಮಯದ ಕೊರತೆ ಇದೆ. ಹೀಗಾಗಿ ಕಾರ್ಯಕರ್ತರು ನೀವೇ ಅಭ್ಯರ್ಥಿಯಾಗಿ ಪ್ರಚಾರ ಮಾಡಬೇಕು ಎಂದರು.

ಇದನ್ನೂ ಓದಿ

ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಪ್ರತಿ ಮನೆ ಮನೆಗೂ ಮುಟ್ಟಿದೆ. ಬಿಜೆಪಿಯವರು ಗೃಹಲಕ್ಷ್ಮೀ ಹಣವನ್ನ ಮೋದಿ ಕೊಡುತ್ತಿದ್ದಾರೆಂದು ಸುಳ್ಳು ಹೇಳುತ್ತಿರುವ ಬಗ್ಗೆ ನನ್ನ ಕಿವಿಗೆ ಬಿದ್ದಿದೆ. ಹೀಗಾಗಿ ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕಿದೆ ಎಂದರು.

ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಚುನಾವಣೆ ಸರಳವಲ್ಲ. ಎದುರಾಳಿಯನ್ನ ಎದುರಿಸುವ ಮನೋಭಾವ ನಮ್ಮಲ್ಲಿರಬೇಕು. ಗ್ಯಾರಂಟಿ ಯೋಜನೆಗಳನ್ನ ಯಾವುದೇ ಕಾರಣಕ್ಕೂ ಜಾರಿ ಮಾಡಲು ಆಗಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು. ಆದರೆ ಐದೂ ಗ್ಯಾರಂಟಿಗಳನ್ನೂ ಜನರಿಗೆ ತಲುಪಿಸುವಲ್ಲಿ ಸಫಲರಾಗಿದ್ದೇವೆ. ಇದೀಗ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಗೆಲ್ಲಿಸುವ ಮೂಲಕ ಮತ್ತೊಂದು ಗ್ಯಾರಂಟಿ ಕೊಡಬೇಕಿದೆ ಎಂದು ಕರೆನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ನಗುಮುಖದ ಡಾ.ಅಂಜಲಿ ನಿಂಬಾಳ್ಕರ್ ಸುಶಿಕ್ಷಿತರು. ಗತ್ತು- ಗಮ್ಮತ್ತು ಇಲ್ಲದ ಸರಳ ವ್ಯಕ್ತಿತ್ವದ ಮಹಿಳೆ. ಎಲ್ಲರನ್ನೂ ಸರಿಸಮನಾಗಿ ಕಾಣುವ, ವೃತ್ತಿಯಲ್ಲಿ ವೈದ್ಯರಾಗಿ ಈ ಸ್ಥಾನಕ್ಕೆ ಅವರು ಏರಿದ್ದಾರೆ. ರೋಗಿಯ ಸೇವೆ ದೇವರ ಸೇವೆ ಎಂದುಕೊಂಡ ಅವರು, ಜನಸೇವೆಗಾಗಿ ರಾಜಕೀಯ ಆಯ್ದುಕೊಂಡರು. ಡಾ.ಅಂಜಲಿ ನಾಲ್ಕು ಭಾಷೆ ಬಲ್ಲವರಾಗಿ ಜಿಲ್ಲೆಯ ಸಮಸ್ಯೆಗಳನ್ನ ದೆಹಲಿಯ ಮಟ್ಟಕ್ಕೆ ಮುಟ್ಟಿಸಬಲ್ಲ ಸಮರ್ಥರು‌. ಅವರು ಈ ಬಾರಿ ಗೆದ್ದು ಸಂಸತ್ ನಲ್ಲಿ ನಮ್ಮ ಧ್ವನಿಯಾಗಲಿದ್ದಾರೆ ಎಂದರು.

ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬಿಜೆಪಿ ಸಂಸದ ವೈದ್ಯರನ್ನೇ ಅಟ್ಟಾಡಿಸಿಕೊಂಡು ಹೊಡೆದಿದ್ದನ್ನ ಮಾಧ್ಯಮಗಳಲ್ಲಿ ನೋಡಿದ್ದೆವು. ಕಾಂಗ್ರೆಸ್ ವೈದ್ಯರನ್ನೇ ಲೋಕಸಭಾ ಕಣಕ್ಕಿಳಿಸಿದೆ. ಇದು ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ. ನಾವು ಮತ ಕೇಳಲು ಗ್ಯಾರಂಟಿಯೆಂಬ ನೈತಿಕ ಹಕ್ಕನ್ನು ಹೊಂದಿದ್ದೇವೆ‌. ಕಾಂಗ್ರೆಸ್ ಗೆ ಈ ಬಾರಿ ಉತ್ತಮ ವಾತಾವರಣ ಇದೆ. ಹೀಗಾಗಿ ನಮ್ಮ ಬೆಳೆ ಬೆಳೆಯಲು ಶ್ರಮಿಸಿದರೆ ಉತ್ತಮ ಫಸಲು ಖಂಡಿತ ಸಾಧ್ಯವಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್, ಉಲ್ಲಾಸ್ ಶಾನಭಾಗ, ಶ್ರೀನಿವಾಸ್ ಧಾತ್ರಿ, ಟಿ.ಸಿ.ಗಾಂವ್ಕರ್, ವಿ.ಎಸ್.ಭಟ್, ದೀಪಕ್ ದೊಡ್ಡೂರು, ರಾಘವೇಂದ್ರ ಭಟ್, ಎಂ.ಜಿ.ಭಟ್, ದೇವದಾಸ್ ಶಾನಭಾಗ, ವಿ.ಎನ್.ಭಟ್ ಮುಂತಾದವರಿದ್ದರು.ಉಡಿ ತುಂಬಿ ಸ್ವಾಗತ
ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಅವರಿಗೆ ಮಹಿಳಾ ಕಾಂಗ್ರೆಸ್ಸಿಗರಿಂದ ಉಡಿ ತುಂಬಿ ಸಾಂಪ್ರದಾಯಿಕವಾಗಿ ಸ್ವಾಗತಿಸಿಕೊಂಡರು. ಸಭೆಯ ಬಳಿಕ ಅಲ್ಪಸಂಖ್ಯಾತ ಮಹಿಳೆಯರಿಂದ ಸನ್ಮಾನ ಮಾಡಲಾಯಿತು.ಗ್ರಾಮದೇವಿಗೆ ಪೂಜೆ
ಸಭೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಯಲ್ಲಾಪುರದ ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.ಚುನಾವಣೆಯಲ್ಲಿ ನಮ್ಮ ಬೂತ್ ನಲ್ಲಿ ನಾವು ಹೆಚ್ಚು ಲೀಡ್ ಮಾಡಿದರೆ ನಮ್ಮ ನಾಯಕತ್ವವನ್ನ ಉಳಿಸಿಕೊಳ್ಳಬಹುದು. ಇದಕ್ಕಾಗಿ ಬೂತ್ ಕಮಿಟಿಗಳು ಪ್ರಯತ್ನಿಸಬೇಕು. ಸಮರ್ಥ ಅಭ್ಯರ್ಥಿಯಾದ ಡಾ.ಅಂಜಲಿಯವರನ್ನ ಗೆಲ್ಲಿಸಲು ಕಾರ್ಯಕರ್ತರೆಲ್ಲರೂ ಅಭ್ಯರ್ಥಿಯಾಗಿ ದುಡಿಯಬೇಕು.

  • ವಿ.ಎಸ್.ಪಾಟೀಲ, ಮಾಜಿ ಶಾಸಕ