suddibindu.in
Banavasi:ಬನವಾಸಿ (ಶಿರಸಿ) : ಗ್ಯಾರಂಟಿ ಯೋಜನೆ ಬಿಜೆಪಿಯದ್ದು ಎಂದು ನಂಬಿಸಿ ಮಹಿಳೆಯರನ್ನ ಬಿಜೆಪಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಗ್ಯಾರಂಟಿ ನಮ್ಮ ಕಾಂಗ್ರೆಸ್ ಸರ್ಕಾರದ್ದು ಎಂದು ಹೇಳಿ ನಾವು ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಬನವಾಸಿಯಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ಸರ್ಕಾರ ಐದು ಗ್ಯಾರಂಟಿಗೆ ಸಾಕಷ್ಟು ಹಣ ಖರ್ಚು ಮಾಡಿದೆ. ಪ್ರತಿ ಮನೆಗೆ ಪ್ರತಿ ತಿಂಗಳು ಕನಿಷ್ಠ ಐದು ಸಾವಿರ ಹೋಗುತ್ತಿದೆ. ಆದರೆ ಈ ವಿಚಾರವಾಗಿ ಹೆಣ್ಣುಮಕ್ಕಳನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿಗರು ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಹಣವನ್ನ ಬಿಜೆಪಿ ಕೊಡುತ್ತಿದೆ ಎಂದು ಹೇಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಗ್ಯಾರಂಟಿ ನಮ್ಮದು ಎಂದು ಧೈರ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.

ಇದನ್ನೂ ಓದಿ

ಬಿಜೆಪಿ ಸುಳ್ಳು ಹೇಳುವ ಪಕ್ಷ. ಚುನಾವಣೆ ಬಂದಾಗ ೧೫ ಲಕ್ಷ ಖಾತೆಗೆ ಜಮೆ ಮಾಡುತ್ತೇವೆ ಎಂದರು. ಚುನಾವಣಾ ಸಮಯದಲ್ಲೇ ಪುಲ್ವಾಮಾ ದಾಳಿ ಆಗುತ್ತದೆ. ಚುನಾವಣೆಯಲ್ಲೇ ಹಿಂದು- ಮುಸ್ಲಿಂ ಎನ್ನುತ್ತಾರೆ. ಕಪ್ಪು ಹಣ ತರುತ್ತೇವೆ, ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದಿದ್ದರು. ಆದರೆ ಕಪ್ಪು ಹಣ ಹೊಂದಿ ಭ್ರಷ್ಟರೆಂದೆನಿಸಿಕೊಂಡಿದ್ದವರೆಲ್ಲ ಬಿಜೆಪಿ ಸೇರಿದ ಮೇಲೆ ಅವರ ಹಣ ಕೂಡ ಬಿಳಿ ಆಗಿದೆಯೇನೋ ಎಂದರು.

ಚುನಾವಣೆ ಬಹಳ ಸುಲಭವೆಂದು ಸುಮ್ಮನಿರಬಾರದು. ಕಾಂಗ್ರೆಸ್ ನ ನಿಷ್ಠಾವಂತ ಸೈನಿಕರಾಗಿ ದುಡಿಯಬೇಕಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಜನರಿಗೆ ತಿಳಿಹೇಳಬೇಕಿದೆ. ಸುಳ್ಳು ಭರವಸೆ ನಮ್ಮದಲ್ಲ. ಮನ್ ಕಿ ಬಾತ್ ಅಲ್ಲ, ಜನ್ ಕಿ ಬಾತ್ ಕೇಳಿ ರಾಹುಲ್ ಗಾಂಧಿಯವರು ಪಂಚ ನ್ಯಾಯ ಘೋಷಿಸಿದ್ದಾರೆ ಎಂದ ಅವರು, ಬನವಾಸಿಯ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಯತ್ನಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮನೆಮಗಳಂತೆ ಕೆಲಸ ಮಾಡಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಬಿಜೆಪಿಗರು ನಮಗೆ ಗ್ಯಾರಂಟಿ ಅನುಷ್ಠಾನ ಮಾಡಲು ಆಗಲ್ಲ ಎಂದು ಟೀಕಿಸಿದ್ದರು. ವೈದ್ಯ ವೃತ್ತಿಯಿಂದ ಜನಸೇವೆ ಮಾಡಿದ್ದ ಡಾ.ಅಂಜಲಿಯವರೀಗ ರಾಜಕಾರಣದಿಂದಲೂ ಜನಸೇವೆ ಮಾಡುತ್ತಿದ್ದಾರೆ. ಹೆಚ್ಚಿನ ಲೀಡ್ ನಿಂದ ಈ ಬಾರಿ ಡಾ.ನಿಂಬಾಳ್ಕರ್ ಅವರನ್ನ ಆಯ್ಕೆ ಮಾಡಿ ಸಂಸದರನ್ನಾಗಿ ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ. ಗ್ಯಾರಂಟಿ ಯೋಜನೆಗಳನ್ನ ನೀಡಿದ ಭರವಸೆಯಂತೆ ಅನುಷ್ಠಾನ ಮಾಡಿದ ಸರ್ಕಾರ ನಮ್ಮದು. ನಿಮ್ಮ ಆಶೀರ್ವಾದವಿದ್ದರೆ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಡಾ.ಅಂಜಲಿಯವರು ಪ್ರಬುದ್ಧ ರಾಜಕಾರಣಿ. ಅವರನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಎಲ್ಲಾ ಗುಣಗಳನ್ನ ಹೊಂದಿರುವ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್. ‌ಅವರು ಗೆದ್ದರೆ ಕಿತ್ತೂರು ರಾಣಿ ಚೆನ್ನಮ್ಮಳಂತೆ ಸಂಸತ್ ನಲ್ಲಿ ಹೋರಾಡಬಲ್ಲರು. ಹೀಗಾಗಿ ಅವರನ್ನ ಬಹುಮತದಿಂದ ಆರಿಸೋಣ ಎಂದು ಕರೆನೀಡಿದರು‌.

ಬನವಾಸಿ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿದಂತೆ ವಿವಿಧ ಘಟಕಗಳಿಂದ ಡಾ.ಅಂಜಲಿ ಅವರಿಗೆ ಸನ್ಮಾನಿಸಲಾಯಿತು. ಇದೇವೇಳೆ ಹಲವು ಜೆಡಿಎಸ್ ಯುವ ನಾಯಕರುಗಳನ್ನ ಕಾಂಗ್ರೆಸ್ ಧ್ವಜ ನೀಡಿ ಡಾ.ಅಂಜಲಿಯವರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡುರು, ಮಾಜಿ ತಾ.ಪಂ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ, ಡಿಸಿಸಿ ಕಾರ್ಯದರ್ಶಿ ಜ್ಯೋತಿ ಪಾಟೀಲ್, ಮಾಜಿ ಜಿ.ಪಂ ಸದಸ್ಯ ಬಸವರಾಜ ಪಾಟೀಲ್ ದೊಡ್ಮನಿ ಹಾಗೂ ತಾಲೂಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇಗುಲಕ್ಕೆ ಭೇಟಿ
ಸಭೆ ಬಳಿಕ ಡಾ.ಅಂಜಲಿ‌ ನಿಂಬಾಳ್ಕರ್ ಅವರು ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ‌ ವೇಳೆ ಅರ್ಚಕರು ಡಾ.ಅಂಜಲಿ ನಿಂಬಾಳ್ಕರ್ ಅವರು ಲೋಕಸಭಾ ಕ್ಷೇತ್ರದ ಸಂಸದರಾಗಲಿ ಎಂದು ಅರ್ಚನೆಗೈದರು. ಮಧುಕೇಶ್ವರ ದೇವಾಲಯದ ಸಮಿತಿಯಿಂದ ಡಾ.ನಿಂಬಾಳ್ಕರ್ ಅವರಿಗೆ ಸನ್ಮಾನಿಸಲಾಯಿತು.