ಸುದ್ದಿಬಿಂದು ಬ್ಯೂರೋ
ಕಾರವಾರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶಿರೂರು ಗುಡ್ಡಕುಸಿತ ದುರಂತ ಸಂಭವಿಸಿ ಎರಡು ತಿಂಗಳುಗಳೇ ಕಳೆದಿದೆ. ಅವಘಡದಲ್ಲಿ ಸಾವನ್ನಪ್ಪಿದ 11 ಮಂದಿ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಬೇಕಿದ್ದು ಕಳೆದೊಂದು ತಿಂಗಳಿನಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ನದಿಯಲ್ಲಿ ಕಾರ್ಯಾಚರಣೆಗೆ ಗೋವಾದಿಂದ ಡ್ರೆಜ್ಜರ್ ಯಂತ್ರ ಆಗಮಿಸಿದ್ದು ಮತ್ತೊಮ್ಮೆ ಶೋಧ ಕಾರ್ಯ ಆರಂಭವಾಗಲಿದೆ.
ಅಂಕೋಲಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ 8 ಮಂದಿಯ ಶವಗಳು ಪತ್ತೆಯಾಗಿದ್ದು ಶಿರೂರು ಗ್ರಾಮದ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ಹಾಗೂ ಕೇರಳ ಮೂಲದ ಚಾಲಕ ಅರ್ಜುನ್ ಹಾಗೂ ಆತನ ಲಾರಿ ಪತ್ತೆಯಾಗಿರಲಿಲ್ಲ. ಭಾರೀ ಮಳೆಯ ಕಾರಣ ಜುಲೈ 28 ರಂದು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬಳಿಕ ಅಗಸ್ಟ್‌ನಲ್ಲಿ ಮುಳುಗುತಜ್ಞರ ತಂಡದೊಂದಿಗೆ ಗಂಗಾವಳಿ ನದಿಯಲ್ಲಿ ಶೋಧಕಾರ್ಯ ನಡೆಸಲಾಗಿತ್ತಾದರೂ ನದಿಯಲ್ಲಿ ಸಂಗ್ರಹವಾದ ಮಣ್ಣಿನಿಂದಾಗಿ ಅಗಸ್ಟ್ 14 ರಂದು ಎರಡನೇ ಬಾರಿಗೆ ಮತ್ತೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಇದೀಗ ತಿಂಗಳ ಬಳಿಕ ನದಿಯಲ್ಲಿ ಮಣ್ಣು ತೆರವುಗೊಳಿಸಿ ಶೋಧ ನಡೆಸಲು 90 ಲಕ್ಷ ವೆಚ್ಚದಲ್ಲಿ ಟೆಂಡರ್ ನೀಡಿದ್ದು ಗೋವಾದ ಪಣಜಿಯಿಂದ ಕ್ರೇನ್ ಮೌಂಟೆಡ್ ಡ್ರೆಜ್ಜರ್ ಹಾಗೂ ಹಾಪರ್ ಬಾರ್ಜ್ ಆಗಮಿಸಿವೆ. ಕಾರವಾರ ತಲುಪಿದ ಡ್ರೆಜ್ಜರ್ ಯಂತ್ರವನ್ನ ಶಾಸಕ ಸತೀಶ್ ಸೈಲ್ ವೀಕ್ಷಿಸಿದ್ದು ನಾಳೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ.
ಕಾರ್ಯಾಚರಣೆಗೆ ತಗಲುವ 90 ಲಕ್ಷದ ಪೈಕಿ ಐಆರ್‌ಬಿ ಕಂಪೆನಿಯಿಂದ ಈಗಾಗಲೇ 40 ಲಕ್ಷ ಹಣವನ್ನ ಸಂದಾಯ ಮಾಡಲಾಗಿದ್ದು ಉಳಿದ ವೆಚ್ಚವನ್ನ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಿಧಿ, ವಿಪತ್ತು ನಿರ್ವಹಣೆ ನಿಧಿಯಿಂದ ಭರಿಸಲಾಗುತ್ತಿದೆ. ಸಚಿವರಾಗಿರುವ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ ಸೈಲ್ ಹಾಗೂ ಶಿರಸಿ ಶಾಸಕ ಭೀಮ್ಮಣ ನಾಯ್ಕ ತಮ್ಮ ಶಾಸಕ ನಿಧಿಯಿಂದ ಹಣ ನೀಡಲು ಒಪ್ಪಿಗೆ ನೀಡಿದ್ದಾರೆ.
ಕಾರ್ಯಾಚರಣೆಗೆ ಸುಮಾರು 10 ದಿನ ತಗಲುವ ಸಾಧ್ಯತೆ ಇದೆ ಎನ್ನಲಾಗಿದ್ದು ಡ್ರೆಜ್ಜರ್ ಯಂತ್ರದ ಮೂಲದ ಗಂಗಾವಳಿ ನದಿಯಲ್ಲಿ ಈಗಾಗಲೇ ಗುರುತಿಸಲಾದ 4 ಸ್ಥಳಗಳಲ್ಲಿ ಮಣ್ಣು ತೆರವು ಮಾಡಲಾಗುತ್ತದೆ. ಡ್ರೆಜ್ಜರ್ ಜೊತೆಗಿರುವ ಹಾಪರ್ ಬಾರ್ಜ್ ಏಕಕಾಲಕ್ಕೆ 100 ಕ್ಯೂಬಿಕ್ ಮೀಟರ್ ಮಣ್ಣನ್ನ ಸಾಗಿಸುವ ಸಾಮರ್ಥ್ಯದ್ದಾಗಿದ್ದು ಚಲಿಸುತ್ತಲೇ ಮಣ್ಣು ಖಾಲಿ ಮಾಡುವ ವ್ಯವಸ್ಥೆ ಹೊಂದಿದೆ. ಅಲ್ಲದೇ ಡ್ರೆಜ್ಜರ್ ಯಂತ್ರದೊಂದಿಗೆ ಕ್ರೇನ್ ಸಹ ಇರುವುದರಿಂದ ನದಿಯಲ್ಲಿ ಸಿಲುಕಿರುವ ಮರ ಹಾಗೂ ಲಾರಿಯನ್ನೂ ಸಹ ಮೆಲಕ್ಕೆತ್ತಲು ನೆರವಾಗಲಿದೆ.
ಕೊನೆಯ ಪ್ರಯತ್ನ ಎನ್ನುವಂತೆ ಡ್ರೆಜ್ಜರ್ ಮೂಲಕ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ನಾಪತ್ತೆಯಾಗಿರುವ ಮೂವರು ಪತ್ತೆಯಾಗುವ ನಿರೀಕ್ಷೆಯಿದೆ.ನಾಳೆಯಿಂದ ಶಿರೂರುನಲ್ಲಿ ಮೂರನೇ ಹಂತದ ಕಾರ್ಯಾಚರಣೆಗೆ ಚಾಲನೆ ಸಿಗಲಿದೆ.
ಗಮನಿಸಿ