ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ದಾಖಲೆ ಇಲ್ಲದೆ ಆಟೋ ಒಂದರಲ್ಲಿ ಸಾಗಾಟ ಮಾಡಲಾಗುತ್ತಿದ್ದ ಒಂದು ಕೋಟಿ ರೂಪಾಯಿ ಹಣವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಹಲಸೂರು ಗೇಟ್ ಬಳಿ ನಡೆದಿದೆ.

ಅಟೋದಲ್ಲಿ ಎರಡು ಬ್ಯಾಗ್ ನಲ್ಲಿದ್ದ ಒಂದು ಕೋಟಿ ರೂಪಾಯಿ ಹಣ ಸೀಜ್ ಮಾಡಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆಟೋದಲ್ಲಿ ಯಾವುದೇ ದಾಖಲೆಗಳಿಲ್ಲದೆ ಹಣವನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಣವನ್ನು ಸುರೇಶ್ ಮತ್ತು ಪ್ರವೀಣ್ ಎಂಬುವವರು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಎಸ್.ಜೆ ಪಾರ್ಕ್ ಠಾಣಾ ವ್ಯಾಪ್ತಿಯ ಕಾಳಿಂಗ್ ರಾವ್ ಬಸ್ ನಿಲ್ದಾಣದ ಬಳಿ ಅಟೋವೊಂದನ್ನು ಇಬ್ಬರು ವ್ಯಕ್ತಿಗಳು ಬಾಡಿಗೆಗೆ ಪಡೆದಿದ್ದರು. ಅಟೋ ಮೆಜೆಸ್ಟಿಕ್ ಕಡೆ ತೆರಳುತ್ತಿದ್ದಾಗ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಕೆಟ್ಟು ನಿಂತಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಪೊಲೀಸರು, ಅಟೋದಲ್ಲಿ ಎರಡು ಬ್ಯಾಗ್ ಕಾಣಿಸಿಕೊಂಡಿದೆ. ಬ್ಯಾಗ್ ತೆರೆದು ನೋಡಿದ ಪೊಲೀಸರಿಗೆ ಶಾಕ್ ಕಾದಿತ್ತು. ಬ್ಯಾಗ್ ನಲ್ಲಿ ಒಂದು ಕೋಟಿ ರೂಪಾಯಿ ಹಣ ಇರುವುದಾಗಿ ತಿಳಿದಿದೆ. ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಆದರೆ, ಹಲಸೂರು ಗೇಟ್ ಪೊಲೀಸರು ದಾಖಲೆ ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲಾತಿ ಇಲ್ಲದೆ ಇದ್ದದ್ದು ಕಂಡುಬಂದಿದ್ದರಿಂದ ಹಣವನ್ನು ಸೀಜ್ ಮಾಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದ ಎಸ್ ಜೆ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಂತರ ಹಣದ ಬಗ್ಗೆ ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.