ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಮತದಾರರ ಸಂಖ್ಯೆ 11.98ಲಕ್ಷ ಇದ್ದು ಡಿ.9ರವೆಗೆ ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಕರಡುಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು. ಹೊಸದಾಗಿ ಹೆಸರು ಸೇರ್ಪಡೆ ಮಾಡುವವರು ನಮೂನೆ-6, ಹೆಸರು ಕಡಿಮೆ ಮಾಡಲು ನಮೂನೆ-7 ಮತ್ತು ತಿದ್ದುಪಡಿ ಇದ್ದರೆ ನಮೂನೆ- 8ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಅದಕ್ಕಾಗಿ ವಿಶೇಷ ಆಂದೋಲನ ನಡೆಯಲಿದೆ. 2024ರ ಜ.5 ರಂದು ಅಂತಿಮ ಮತದಾರರ ಪಟ್ಟಿ ಅಧಿಸೂಚನೆ ಪ್ರಕಟಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟು 11.98 ಲಕ್ಷ ಮತದಾರರ ಪೈಕಿ 6ಲಕ್ಷ ಪುರುಷರು ಮತ್ತು 5.97 ಲಕ್ಷ ಮಹಿಳೆ ಮತ್ತು 8 ಇತರೆ ಮತದಾರರಿದ್ದಾರೆ. ಅದರಲ್ಲಿ 33,496 ಯುವ ಮತದಾರರು ಸೇರಿದ್ದಾರೆ. 2023ರ ವಿಧಾನಸಭೆ ಚುನಾವಣೆ ಬಳಿಕ ಹೊಸದಾಗಿ ಮತದಾರರ ನೋಂದಣಿ ಆಗಿಲ್ಲ. ಹಾಗಾಗಿ ಇದ್ದಷ್ಟೇ ಇದೆ ಎಂದು ಡಿಸಿ ಮಾಹಿತಿ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ ನ.18, 19 ಹಾಗೂ ಡಿ.2, 3ರಂದು ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳಲ್ಲ, ತಹಶೀಲ್ದಾರರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಸಲಾಗಿದೆ. ಕರಡು ಮತದಾರರ ಪಟ್ಟಿಗಳಲ್ಲಿ ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದು.

ಅರ್ಹತಾ ದಿನಾಂಕ 01-01-2024 ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ, ಮತ್ತು ಹೆಸರು ಕಡಿಮೆಗೊಳಸಲು ನಮೂನೆ-7 ರಲ್ಲಿ ಮತ್ತು ಹೆಸರು ಇತ್ಯಾದಿ ತಿದ್ದುಪಡಿ ಬಯಸಿದಲ್ಲಿ ನಮೂನೆ ಆ ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ರವರಿಗೆ(ಬಿ.ಎಲ್.ಓ), ಸಹಾಯಕ ಮತದಾರರ ನೋಂದಣಾಧಿಕಾರಿ (ತಹಶೀಲ್ದಾರ) ಕಛೇರಿಗೆ ಚುನಾವಣಾ ವೇಳಾಪಟ್ಟಿಯಂತೆ ಡಿ.9ರ ಒಳಗೆ ತಮ್ಮ ಹಕ್ಕು ಮತ್ತು ಆಕ್ಷೇಪಣಿಗಳನ್ನು ನೀಡಲು ಕಾಲಾವಕಾಶ ನೀಡಲಾಗಿದೆ ಎಂದರು.

ಅಂತಿಮ ಮತದಾರರ ಪಟ್ಟ ಅಧಿಸೂಚನೆ 2024ರ ಜ.5ರಂದು ಹೊರಡಿಸಲಾಗುತ್ತದೆ.ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಬಿ.ಎಲ್.ಎ ನೇಮಕಾತಿ ಮಾಡಿ, ಬಿ.ಎಲ್.ಎ. ನೇಮಕಾತಿ ಮಾಡಿದ ಬಗ್ಗೆ ಅವರ ಹೆಸರು, ಮತಗಟ್ಟೆ ಸಂಖ್ಯೆ ಮತ್ತು ಮೋಬೈಲ್ ಸಂಖ್ಯೆಯ ಪಟ್ಟಿಯನ್ನು ಮಾಡಿ ತಹಶೀಲ್ದಾರ ರವರಿಗೆ ನೀಡಲು ಕೋರಿದೆ. ಯುವ ಮತದಾರರ ನೋಂದಣಿ 18-19 ವರ್ಷ. ಸಾರ್ವಜನಿಕರಿಗೆ VHA (Voters helpline app) ಮೊಬೈಲ್ ಆದ್ ಮುಖಾಂತರ ತಮ್ಮ ಹೆಸರುಗಳನ್ನು ನೊಂದಾಯಿಸಲು, ತಿದ್ದುಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಸಲಾಗಿದೆ. ಮತಗಟ್ಟೆ ಅಧಿಕಾರಿಯ ಸಹಾಯದಿಂದ BLO App ಮುಖಾಂತರ ಹೆಸರು ಮತ್ತು ವಿಳಾಸ ತಿದ್ದುಪಡಿಯಿದ್ದರೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.

ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ 4809 ವಿಐಪಿ ಮತದಾರರನ್ನು ಗುರುತಿಸಲಾಗಿದೆ. ಜನಪ್ರತಿನಿಧಿಗಳು, ಪದ್ಮಶ್ರೀ ಪುರಸ್ಕೃತರು, ಹಿರಿಯ ಕಲಾವಿದರು ಇವರನ್ನೆಲ್ಲ ವಿಐಪಿ ಮತದಾರರನ್ನು ಎಂದು ಪರಿಗಣಿಸಲಾಗುತ್ತದೆ. ಜಿಲ್ಲೆಯ ಒಟ್ಟಾರೆ ಜನಸಂಖ್ಯೆ ಪೈಕಿ ಶೇ.76.98 ರಷ್ಟು ಮತದಾರರಾಗಿ ನೋಂದಣಿ ಆಗಿದ್ದಾರೆ ಎಂದು ವಿವರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.

ವಿಧಾನಸಭಾ ಕ್ಷೇತ್ರವಾರು ಮತದಾರರು
ಕ್ಷೇತ್ರ ಪುರುಷ ಮಹಿಳೆ ಇತರ
ಹಳಿಯಾಳ. 91,324 90,231 2
ಕಾರವಾರ 1,08,627 111,799 0
ಕುಮಟಾ 94,288 94,612 3
ಭಟ್ಕಳ 1,13,302 1,10,027 0
ಶಿರಸಿ 1,00,925 1,00,214 2
ಯಲ್ಲಾಪುರ 92,506 90,659 1
ಒಟ್ಟು 6,00,982 5,97,542 8
ಮತದಾರರ ವಿವರ
ಯುವ ಮತದಾರರು– 33,496, ವಿಶೇಷ ಚೇತನರು– 15,591, ಲಿಂಗಾನುಪಾತ– 994, ಜನಸಂಖ್ಯೆ ಆಧಾರ ಮತದಾರರು– ಶೇ.76.98, ಒಟ್ಟು ಮತಗಟ್ಟೆಗಳು– 1435, ಈಗಿನ ಅಂದಾಜು ಜನಸಂಖ್ಯೆ– 15.56 ಲಕ್ಷ