ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅದಿರು ಪ್ರಕರಣದಲ್ಲಿ ನ್ಯಾಯಾಲಯ ಶಾಸಕ ಸತೀಶ ಸೈಲ್‌ಗೆ ಬೇಲ್‌ ನೀಡುತ್ತಿದ್ದಂತೆ, ಉಪಚುನಾವಣೆಯ ಕನಸು ಕಂಡು ಶಾಸಕ ಸ್ಥಾನಕ್ಕೆ ಖರ್ಚಿಫ್‌ ಹಾಕಿದ್ದವರು ಈಗ ಊರು ಬಿಟ್ಟು ಬಿಲ ಸೇರಿಕೊಂಡಿರುವುದು ಸದ್ಯದ ಲೆಟೆಸ್ಟ್‌ ನ್ಯೂಸ್‌.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಳೆದ ತಿಂಗಳು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ಸತೀಶ ಸೈಲ್‌ಗೆ ಏಳು ವರ್ಷ ಶಿಕ್ಷೆ ಹಾಗೂ ಭಾರೀ ಪ್ರಮಾಣದ ದಂಡ ವಿಧಿಸಿತ್ತು. ಸೈಲ್‌ಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅವರ ಶಾಸಕ ಸ್ಥಾನ ರದ್ದಾಗಿ, ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತದೆ ಎಂದು ಒಳಗೊಳಗೆ ಮಂಡಕ್ಕಿ ತಿಂದ ಡಜನ್‌ಗಟ್ಟಲೇ, ಹಿಂಡು ಹಿಂಡು ಆಕಾಂಕ್ಷಿಗಳು ಕುಣಿದು ಕುಪ್ಪಳಿಸಿದ್ದರು. ಸ್ವರ್ಗಕ್ಕೆ ಮೂರೇ ಗೇಣು ಎಂದು ಕನಸು ಕಂಡಿದ್ದರು.

ಸೈಲ್‌ಗೆ ಶಿಕ್ಷೆ ಆಗಬಾರದಿತ್ತು. ಪಾಪ ಎಂದೇಲ್ಲಾ ಬಾಹ್ಯವಾಗಿ ಅನುಕಂಪ ತೋರಿದಂತೆ, ಮೊಸಳೆ ಕಣ್ಣೀರು ಸುರಿಸಿ, ಇದು ನೋವಿನ ಸಂಗತಿ. ಯಾರೂ ಕೂಡಾ ಸೈಲ್‌ ಬಗ್ಗೆ ಮಾತನಾಡದಂತೆ ತಮ್ಮ ವಿನಂತಿಯ ಫರ್ಮಾನು ಹೊರಡಿಸಿದ್ದರು. ಕಣ್ಣೀರಿನ ಕೋಡಿಯೇ ಹರಿಸಿದ್ದರು.

ನಂತರ ನಾಲ್ಕೈದು ದಿನ ಕಳೆದಂತೆ ನಿಧಾನವಾಗಿ ಕೆಲವರು ಫೇಸ್ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾದರೆ, ಪಕ್ಷ ಯಾವುದಾದರೇನು ನಾನೂ ಚುನಾವಣೆಯಲ್ಲಿ ಸ್ಪರ್ಧಿಸುವೇ ಎಂದು ಮೆಲ್ಲಗೆ ಫೋಸ್ಟ್‌ ಹಾಕಲು ಆರಂಭಿಸಿದರು.ಇನ್ನು ಅವರ ಫೋಸ್ಟ್‌ ನೋಡಿ ಕೆಲವರು ಬೆಂಗಳೂರಿನಿಂದ ಸೀದಾ ಕಾರವಾರಕ್ಕೆ ಬಂದು, ಕ್ಷೇತ್ರದಲ್ಲಿ ಚುರುಕಿನ ಓಡಾಟ ಆರಂಭಿಸಿದ್ದರು. ಆ ಅಭಿಯಾನ ಈ ಅಭಿಯಾನ ಅನ್ನುತ್ತಾ ರಸ್ತೆ ಮೇಲೆ ಹೋಗುವವರ, ನಿಂತವರ, ಕುಳಿತವರ, ಮಲಗಿದವರ ಮೊಬೈಲ್‌ ಪಡೆದು ಪಕ್ಷದ ಕಾಲ್‌ ಸೆಂಟ‌ರ್‌ ನಂಬರ್‌ ಒತ್ತಿ ಮಿಸ್ಡ್‌ ಕಾಲ್‌ ಮಾಡಿ ಸದಸ್ಯರ ಅಭಿಯಾನ ಆರಂಭಿಸಿ, ವಿಜಯದ ರಣಕೇಕೆ ಹಾಕಿದ್ದರು.

ಇನ್ನು ಕೆಲವರು ‘ಈಗಲ್ಲದಿದ್ದರೇ ಮತ್ತೆಂದು ಇಲ್ಲ’ ಎಂಬಂತೆ, ಟಿಕೇಟ್‌ ನನಗೆ ಬೇಕು. ಎಷ್ಟು ವರ್ಷ ಅಂತ ಮಣ್ಣು ಹೊರಲಿ ಎಂದು ಹೂಂಕರಿಸಲು ಆರಂಭಿಸಿದ್ದರು.ನಾನು ಯಾರ್‍ಗೂ ಕಮ್ಮಿ ಇಲ್ಲ ಎಂದು ಅಬ್ಬರಿಸಿದರು.ಒಂದಿಷ್ಟು ಬುದ್ದಿವಂತರು ಕ್ಯಾಂಪ್‌ ಚೆಂಜ್‌ ಮಾಡಿದರೆ ಟಿಕೇಟ್‌ ಸಿಗಬಹುದೇ? ಇಲೆಕ್ಷನ ಫಂಡ್‌ ಎಷ್ಟು ಸಿಗಬಹುದು,ಎಷ್ಟು ಹೊಂಡ ತುಂಬಿಸಿಕೊಳ್ಳಬಹುದು ಎಂದು ತಲೆ ತುರಿಸಿಕೊಳ್ಳಲಾರಂಭಿಸಿದ್ದರು.

ಚುನಾವಣೆಯನ್ನು ಪಕ್ಕಾ ಬ್ಯುಸಿನೆಸ್‌, ಸಂಪತ್ತು ಸೃಷ್ಠಿಸುವ ಸಮಯ ಎಂದು ತಿಳಿಯುವ, ಕೆಲ ಬಾಲಬಡುಕ ಲೋಕಲ್‌ ಆರ್ಥಿಕ ತಜ್ಞರಂತು ಹಿರಿ ಹಿರಿ ಹಿಗ್ಗಿ, ಈ ಬಾರಿ ಯಾವ ಕ್ಯಾಂಪ್‌ಗೆ ಹೋದರೆ ಎಷ್ಟು ದಕ್ಕಿಸಿಕೊಳ್ಳಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದರು. ಇನ್ನು ಎಲ್ಲ ಕಡೆ ಸಲ್ಲುವವರು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಕ್ಯಾಂಪ್‌ಗೆ ಲಗ್ಗೆ ಹಾಕಿ ಸಿಕ್ಕಷ್ಟು ಬಾಚಿಕೊಳ್ಳುವಾ ಎಂದು ಸ್ಕೇಚ್‌ ಹಾಕತೊಡಗಿದರು.

ಆದರೆ ಹೈ ಕೊರ್ಟ ತೀರ್ಪು ಇವರೆಲ್ಲರ ಲೆಕ್ಕಾಚಾರ ಬುಡಮೇಲು ಮಾಡಿದೆ.ಶಾಸಕ ಸೈಲ್‌ಗೆ ಜಾಮೀನು ಮಂಜೂರು ಮಾಡಿ, ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ತಿರ್ಪು ನೀಡಿದೆ. ಇದರಿಂದ ಸೈಲ್‌ ನಿರಾಳವಾದರೆ, ಅತ್ತ ಉಪಚುನಾವಣೆಯ ಕನಸು ಕಂಡವರು, ಅಂಗೈ ತೋರಿಸಿ ಅವಲಕ್ಷಣಕ್ಕೆ ಒಳಗಾದಂತೆ ಕ್ಷೇತ್ರ ಬಿಟ್ಟು ಮತ್ತೆ ಬಿಲ ಸೇರಿಕೊಂಡಿದ್ದಾರೆ.

ಇದನ್ನೂ ಓದಿ