ಸುದ್ದಿಬಿಂದು ಬ್ಯೂರೋ
ಬನವಾಸಿ : ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ವಡ್ಡಿನಕೊಪ್ಪ ಅರಣ್ಯ ಪ್ರದೇಶಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕಾಗಿ ವಿಶೇಷ ಮೂರು ಪೊಲೀಸ್ ತಂಡ ರಚನೆ ಮಾಡಲಾಗಿದೆ.
ವಡ್ಡಿನಕೊಪ್ಪ ಅರಣ್ಯ ಪ್ರದೇಶದ ಇಂಗಿಗುಂಡಿಯೊಂದರಲ್ಲಿ 45ರಿಂದ 50 ವರ್ಷದ ಪುರುಷನ ಶವ ಪತ್ತೆಯಾಗಿದೆ. ರಸ್ತೆಯಿಂದ ಸುಮಾರು 50ಮೀಟರ ಅಂತರದಲ್ಲಿ ಇರುವ ಇಂಗು ಗುಂಡಿಯಲ್ಲಿ ಈ ಶವ ಪತ್ತೆಯಾಗಿದೆ. ರಸ್ತೆಯಿಂದ ಇಂಗು ಗುಂಡಿಯವರೆಗೆ ಶವ ಎಳೆದುಕೊಂಡು ಹೋಗಿರುವ ಗುರುತುಗಳ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕೊಲೆ ಮಾಡಿ ಎಸೆದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಕೊಲೆಯಾಗಿರುಗ ವ್ಯಕ್ತಿಯ ಮೃತ ದೇಹದ ಮೇಲೆ ಗೋಣಿ ಚೀಲ ಹಾಗೂ ಸೊಪ್ಪು ಹಾಕಿಡಲಾಗಿತ್ತು. ಕೊಲೆ ನಡೆದಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದ ಸಿಪಿಐ ರಾಮಚಂದ್ರ ನಾಯಕ, ಬನವಾಸಿ ಠಾಣಾ ಪಿಎಸ್ಐ ಚಂದ್ರಕಲಾ ಪತ್ತಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಸಹ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ ಆರೋಪಿಗಳ ಶೋಧಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಮೂರು ವಿಶೇಷ ಪೊಲೀಸ್ ತಂಡವನ್ನ ರಚನೆ ಮಾಡಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ.