ಸುದ್ದಿಬಿಂದು ಬ್ಯೂರೋ
ಕುಮಟ : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಓರ್ವಳು ಬಾಡಿಗೆ ಮನೆಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆರವಟ್ಟಾದ ಸಾಣಿ ಅಮ್ಮಾ ದೇವಸ್ಥಾನದ ಹಿಂಬದಿಯ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.

ವೀಣಾ ನಾಗರಾಜ (27) ವರ್ಷ ಎಂದು ಗುರುತಿಸಲಾಗಿದೆ. ಈಕೆ ಕುಮಟ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಳು ಎನ್ನಲಾಗಿದ್ದು, ಈಕೆ ಕಳೆದ ನಾಲ್ಕು ತಿಂಗಳ ಹಿಂದಷ್ಟೆ ವಿವಾಹವಾಗಿದ್ದಳು ಎನ್ನಲಾಗಿದ್ದು, ಈಕೆ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈಕೆಯ ಪತಿ ಅಕ್ಕಿ ಆಲೂರಿನ ಖಾಸಗಿ ಕಾಲೇಜು ಒಂದರಲ್ಲಿ ಲೆಕ್ಚರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
ಅತ್ತ ಪತಿ ಅಕ್ಕಿಆಲೂರಿನಲ್ಲಿ ಉಳಿದುಕೊಂಡಿದ್ದರೆ, ವೀಣಾ ಕುಮಟದ ಹೆರವಟ್ಟಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಆದರೆ ಆಕೆ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಇದುವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಕುಮಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.