ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಇಂದು ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಎಸ್ಪಿ ಎಂ. ನಾರಾಯಣ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಯಿತು. ಆದರೆ ಜನರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ, ಜನ ಸಭೆಯಲ್ಲಿ ಏನು ಮಾತಾಡಬೇಕು ಎಂದು ತೋಚದೇ ಸುಮ್ಮನಾಗಿದ್ದಲ್ಲದೇ ಈ ಜನಸಂಪರ್ಕ ಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ 11.30ಕ್ಕೆ ಜನಸಂಪರ್ಕ ಸಭೆ ಇದೆ ಎನ್ನುವುದು ಕೆಲ ಜನಕ್ಕೆ ಮಾತ್ರ ಗೊತ್ತಿತ್ತು. ಆದರೆ ಈ ಸಭೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿಗೆ ತಮ್ಮ ಅಹವಾಲು ನೀಡಬಹುದು ಎಂಬ ಮಾಹಿತಿ ಅಕ್ಷರಶಃ ಯಾರಿಗೂ ಇರಲಿಲ್ಲ. ಇದು ಕೇವಲ ಕಾಟಾಚಾರದ ಸಭೆ ಎಂದು ಸಭೆಯಲ್ಲಿದ್ದವರು “ಸುದ್ದಿಬಿಂದು”ಗೆ ತಿಳಿಸಿದ್ದಾರೆ.
ಜನಸಂಪರ್ಕ ಸಭೆಯ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಬೇಕಿತ್ತು. ನವರಾತ್ರಿಯ ಪೂಜೆ ಗಡಿಬಿಡಿಯಲ್ಲಿ, ಊಟದ ಸಮಯದಲ್ಲಿ ಈ ರೀತಿ ಜನರ ಸಭೆ ಇಟ್ಟರೆ ಜನ ಬರಬೇಕಲ್ಲವೇ? ಸರಿಯಾದ ಪ್ರಚಾರ ಮಾಡಿದ್ದರೆ ಕಲಾಕೇಂದ್ರ ಗಿಜಿಗುಡುವಷ್ಟು ಜನ ಸೇರುತ್ತಿದ್ದರು. ಎಸ್ಪಿ ಸರ್ ವೇದಿಕೆ ಹತ್ತಿದ ತಕ್ಷಣ ಪೊಲೀಸರು ತಮ್ಮ ಅಹವಾಲು ಇದ್ದರೆ ನೀಡಬಹುದು ಎಂದು ಹೇಳಿದರು. ಆದರೆ ಯಾರೋಬ್ಬರು ಅಹವಾಲು/ಅರ್ಜಿ ತಂದಿರಲಿಲ್ಲ! ಇದರ ಅರ್ಥ ಜನರಿಗೆ ತಾವು ಅಹವಾಲು/ಅರ್ಜಿ ನೀಡಬಹುದು ಎನ್ನುವುದೇ ಗೊತ್ತಿರಲಿಲ್ಲ! ಕುಮಟಾ ಪೊಲೀಸರು ಈ ರೀತಿ ಸಭೆ ನಡೆಸಿದರೆ ಹೇಗೆ?'' ಎಂದು ಸಭೆಗೆ ಹೋಗಿದ್ದ ನಾಗರಿಕರೊಬ್ಬರು
ಸುದ್ದಿಬಿಂದು”ಗೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.
ಪೊಲೀಸ್ ವರಿಷ್ಟಾಧಿಕಾರಿ ಅವರು ಮತ್ತೊಮ್ಮೆ ಕುಮಟಾದಲ್ಲಿ ಜನಸಂಪರ್ಕ ಸಭೆ ನಡೆಸಿದರೆ ಖಂಡಿತವಾಗಿ ಸಭೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ ಮತ್ತು ಅಹವಾಲನ್ನೂ ತರುತ್ತಾರೆ. ಈ ಬಗ್ಗೆ ಅನುಮಾನವೇ ಬೇಡ ಎಂದು ಸಭೆಯಲ್ಲಿದ್ದ ನಾಗರಿಕರು “ಸುದ್ದಿಬಿಂದು”ಗೆ ತಿಳಿಸಿದ್ದಾರೆ.
ಗಮನಿಸಿ