suddibindu.in
ಕುಮಟಾ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಎಂದು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಪ್ರಯತ್ನಿಸುತ್ತಿರುವಾಗ ಮಾಜಿ ಸಂಸದೆ ಆಳ್ವಾ ಕುಟುಂಬದಿಂದ ಸ್ಥಳೀಯ ಕಾಂಗ್ರೆಸ್ ನಾಯಕರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಠೇವಣಿ ಕಳೆದುಕೊಂಡ ಬಳಿ ಕ್ಷೇತ್ರದತ್ತ ಮುಖವನ್ನೆ ಹಾಕದೆ ಇದ್ದ ಆಳ್ವಾ, ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾರದಾ ಶೆಟ್ಟಿ ಅವರು ಮತ್ತೆ ಕಾಂಗ್ರೆಸ್‌ನಲ್ಲಿ ಸಕ್ರಿಯವಾದ ನಂತರದಲ್ಲಿ ಕ್ಷೇತ್ರಕ್ಕೆ ಕಾಲಿಟ್ಟು ಕುಮಟಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಒಡೆಯುವ ಹುನ್ನಾರಕ್ಕೆ ಕೈಹಾಕಿದ್ದಾರೆಂದು ಕಾಂಗ್ರೆಸ್‌‌ನ ಅನೇಕರು ಇದೀಗ ಚರ್ಚೆ ಮಾಡುತ್ತಿದ್ದಾರೆ‌.

ಇದನ್ನೂ ಓದಿ

ಮೂರು ದಶಕದ ನಂತರದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ. ಈ ಬಾರಿ ಕಾಂಗ್ರೆಸ್ಸಿನಿಂದ ಡಾ. ಅಂಜಲಿ ನಿಂಬಾಳ್ಕರ್‌ ಅವರನ್ನು ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಆದರೆ ಅಭ್ಯರ್ಥಿ ಪರ ಪ್ರಚಾರಕ್ಕೆಂದು ಆಗಮಿಸಿದ ಜಿಲ್ಲೆಯ ಮಾಜಿ ಸಂಸದೆ, ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುವುದಕ್ಕಿಂತ ಹೆಚ್ಚಾಗಿ ಮಾಜಿ‌ ಶಾಸಕಿ ಶಾರದಾ ಶೆಟ್ಟಿ ಅವರ ವಿರುದ್ಧವೇ ಹೆಚ್ಚಿನ ಟೀಕೆ ಮಾಡಿರುವಂತೆ ಕಂಡು ಬರುತ್ತಿದೆ ಎಂದು ಪಕ್ಷದ ಕಾರ್ಯಕರ್ತರುಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶಾರದಾ ಶೆಟ್ಟಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಬೇಸರಗೊಂಡು ಇತರರಂತೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗದೆ (ತಟಸ್ಥ) ಮೌನವಾಗಿದ್ದರು.

ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ‌ನಾಯಕರಾದ ಸಿ. ಎಂ. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ ಅವರು ಶಾರದಾ ಶೆಟ್ಟಿ ಅವರನ್ನು ಕರೆದು ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗುವ ಮೂಲಕ ಲೋಕಸಭಾ ಅಭ್ಯರ್ಥಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್‌ ಅವರ ಗೆಲುವಿಗಾಗಿ ಶ್ರಮಿಸುವಂತೆ ಸೂಚನೆ‌ ನೀಡದಂತೆ ಶಾರದಾ ಶೆಟ್ಟಿ ಅವರು ಪಕ್ಷದಲ್ಲಿ ಸಕ್ರಿಯವಾಗಿದ್ದರು. ಆದರೆ ಇದೀಗ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆಂದು ಬಂದ ಮಾಜಿ ಸಂಸದೆ ಮಾರ್ಗರೆಟ್ ಆಳ್ವಾ ಅವರು ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗಿರುವ ಶಾರದಾ ಶೆಟ್ಟಿ ಅವರ ವಿರುದ್ಧವೇ ಟೀಕೆ ಮಾಡಿರುವಂತಿತ್ತು ಎಂದು ಶಾರದಾ ಶೆಟ್ಟರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿ ಸ್ಥಾನ-ಮಾನ ಸಿಕ್ಕಿಲ್ಲ ಎಂದು ಪಕ್ಷದಿಂದ ದೂರವಾಗಿದ್ದವರು ಈಗ ಪಕ್ಷಕ್ಕೆ ಮರಳುತ್ತಿದ್ದಾರೆ. ಕಾಂಗ್ರೆಸ್ಸಿಗೆ ಗೆಲ್ಲುವ ಅವಕಾಶ ಇದೆ ಎಂದು ಪಕ್ಷ‌ ಬಿಟ್ಟು ಹೋದವರು ಹಾಗೂ ಜೆಡಿಎಸ್, ಬಿಜೆಪಿಯಲ್ಲಿದ್ದವರು ಸಹ ಈಗ ಪಕ್ಷಕ್ಕೆ ಮರಳಲು ತುದಿಗಾಲ ಮೇಲೆ ನಿಂತಿದ್ದಾರೆಂದು ಪರೋಕ್ಷವಾಗಿ ಶಾರದಾ ಶೆಟ್ಟಿ ಅವರ ವಿರುದ್ಧ ಬಾಣ ಬಿಟ್ಟಿದ್ದಾರೆ.ಅಷ್ಟೆ ಅಲ್ಲದೆ ಮಾರ್ಗರೆಟ್ ಆಳ್ವಾ ಭಾಗವಹಿಸಿದ್ದ ಕತಗಾಲ ಹಾಗೂ ಅಘನಾಶಿನಿಯಲ್ಲಿ ನಡೆದ ಸಭೆಯಲ್ಲಿ ಶಾರದಾ ಶೆಟ್ಟಿ ಅವರಿಗೆ ವೇದಿಕೆಯಲ್ಲಿ ಮಾತನಾಡಲೂ ಕೂಡ ಅವಕಾಶ ನೀಡಿಲ್ಲ‌.ಇದರಿಂದಾಗಿ ಬೇಸರಗೊಂಡ ಶಾರದಾ ಶೆಟ್ಟಿ ಅವರು ಕಿಮಾನಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇರೆಯೇ ಸಂದೇಶ ಮೂಡಿಸಿದೆ ಎ‌ನ್ನಲಾಗುತ್ತಿದೆ.

ಈ ದ್ವಂದ್ವ, ವೈಮನಸ್ಸು ಹೆಮ್ಮರವಾಗಿ ಬೆಳೆಯುವ ಮುನ್ನ ಹೈಕಮಾಂಡ್ ಇತ್ತ ಗಮನಿಸಲಿ ಎನ್ನುವುದು ಕೈ ಕಾರ್ಯಕರ್ತರ ಆಗ್ರಹ.