suddibindu.in
Karwar:ಕಾರವಾರ: ಲೋಕಸಭಾ ಚುನಾವಣೆ ಘೋಷಣೆಗೆ ದಿನಗಣನೆ ಮಾತ್ರ ಉಳಿದಿದ್ದು, ಚುನಾವಣೆಗಾಗಿ ಬಿಜೆಪಿಯವರು ಜಿಲ್ಲಾದ್ಯಂತ ಓಡಾಡಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ಮಾತ್ರ ಇನ್ನೂ ನಿದ್ರೆಯಿಂದ ಎದ್ದ ಹಾಗೆ ಕಾಣುತ್ತಿಲ್ಲ.ಇದು `ಕೈ’ ಕಾರ್ಯಕರ್ತರ ಚಿಂತೆಗೆ ಕಾರಣವಾಗಿದ್ದು, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ (District Congress) ಸತ್ತಿದೆಯೋ ಅಥವಾ ಸತ್ತಂತೆ ನಟಿಸುತ್ತಿದೆಯೋ? ಎಂದು ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸಲಾರಂಭಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಜವಾಬ್ದಾರಿಯನ್ನು ಹೊತ್ತಿರುವವರು ಎಲ್ಲಿದ್ದಾರೆಂದು ಪಕ್ಷದ ಕಾರ್ಯಕರ್ತರು “ಲಾಟೀನ್” ಹಿಡಿದು ಹುಡುಕಾಡಬೇಕಾದ ದುಃಸ್ಥಿತಿ ಕಂಡುಬರುತ್ತಿದೆ.‌ ರಾಜಕೀಯವಾಗಿ ಏನೇ ಬೆಳವಣಿಗೆ ಆದರೂ ಬಿಜೆಪಿಯ (BJP)ಕಾರ್ಯರ್ತರ ಸಹಿತ ಜಿಲ್ಲಾ ಮಟ್ಟದ ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ತಮ್ಮ ಸಂಘಟನಾ ಶಕ್ತಿ ತೋರಿಸುತ್ತಿದ್ದಾರೆ.ಬಿಜೆಪಿಯವರು ಜಿಲ್ಲಾದ್ಯಂತ ದಿನ ಬೆಳಗಾದರೆ ಒಂದಲ್ಲಾ ಒಂದು ಮಾಧ್ಯಮಗೋಷ್ಟಿ, ಪಕ್ಷ ಸಂಘಟನೆಗಾಗಿ ನಿದ್ರೆ ಬಿಟ್ಟು ಕೆಲಸ ಮಾಡುತ್ತಿದ್ದಾರೆ.ವಿಚಿತ್ರವೆಂದರೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಇದಕ್ಕೆ ವಿರುದ್ಧವಾಗಿದೆ.ಲೋಕಸಭಾ ಚುನಾವಣೆಗೆ ಇನ್ನೇನೂ ರಣಾಂಗಣ ಸಿದ್ಧವಾಗೇ ಬಿಡ್ತು ಎನ್ನುವಾಗಲೂ ಸಹ ಜಿಲ್ಲಾ ಕಾಂಗ್ರೆಸ್ ಘಟಕ ಸಕ್ರಿಯವಾಗುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ:-

ಎದುರಾಳಿ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಏನೇ ಹೇಳಿಕೆ ನೀಡಿದರೂ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ಸಿಗರಿಗೆ ಪ್ರತಿಕ್ರಿಯೆ ನೀಡಬೇಕು ಎನ್ನುವ ಆಲೋಚನೆ ಸಹ ಇದ್ದಂತಿಲ್ಲ.ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಅನಾಥರಂತಿದೆ. ಈ ಬಗ್ಗೆ ಖುದ್ದು ಕೈ' ಕಾರ್ಯಕರ್ತರೇ ಅಂತರಾಳದ ದುಃಖ ಹೇಳಿಕೊಳ್ಳುತ್ತಿದ್ದಾರೆ.ಆದರೆ ಇವರ ನೋವು ಕಾಂಗ್ರೆಸ್ ಮುಖಂಡರ ಹಿತ್ತಾಳೆ ಕಿವಿಗೆ ಕೇಳಿಸುತ್ತಿಲ್ಲವಾಗಿದೆ.ಮುಂದೆ ಈ ದುಃಖ ಮತ್ತಷ್ಟು ಗಟ್ಟಿಯಾಗಿಕೈ’ ಕಾರ್ಯಕರ್ತರು ದಂಡಿಯಾಗಿ ಬಿಜೆಪಿಯತ್ತ ಮುಖ ಮಾಡಿದರೂ ಅಚ್ಚರಿಪಡಬೇಕಿಲ್ಲ ಎಂದು ಕಾಂಗ್ರೆಸ್ಸಿನ ವಿಶ್ವಸನೀಯ ಮೂಲಗಳು ಹೇಳುತ್ತಿವೆ.

ಕಾಂಗ್ರೆಸ್ ಮುಖಂಡರು ಕೇವಲ ಹೆಸರಿಗೆ ಮಾತ್ರ ಹುದ್ದೆ ಪಡೆದು ಓಡಾಡಿಕೊಂಡಿದ್ದಾರೆ ವಿನಃ ಚುನಾವಣೆಯಲ್ಲಿ ಒಂದೇ ಒಂದು ಮತವನ್ನು ಪಕ್ಷದ ಅಭ್ಯರ್ಥಿಗೆ ಹಾಕಿಸಲು ಸಮರ್ಥರಿರುವಂತೆ ಕಾಣುತ್ತಿಲ್ಲ. ಆದರೂ ಸಹ ಇಂತಹವರಿಗೆ ಪಕ್ಷದಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಹುದ್ದೆ ಮಾತ್ರ ಬೇಕಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಅಲವತ್ತುಕೊಳ್ಳುತ್ತಿದ್ದಾರೆ.ಉತ್ತರ ಕನ್ನಡದಲ್ಲಿ ಸಂಘಟನೆ ದುರ್ಬಲವಾಗಿದೆ, ಸಂಘಟನೆ ಗಟ್ಟಿಯಾಗಬೇಕು ಎಂದು ಅವರದೇ ಪಕ್ಷದ ನಾಯಕರು ಅನೇಕ ಬಾರಿ ಪಕ್ಷದ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ. ಆದರೆ ಇದು ಕಾರ್ಯರೂಪಕ್ಕೆ ಮಾತ್ರ ಬಾರದಂತಾಗಿದೆ.ಮುಂದಿನ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಹ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆಯಾ ಎಂದು ಪಕ್ಷದ ಕಾರ್ಯಕರ್ತರೇ ಅನುಮಾನ ಪಡುವಷ್ಟರ ಮಟ್ಟಿಗೆ ಜಿಲ್ಲಾ ನಾಯಕರು ನಿಷ್ಕ್ರಿಯರಾಗಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಪಾತಾಳಕ್ಕೆ ಕುಸಿದರೂ ಪಕ್ಷದ ಹೈಕಮಾಂಡ್ ಯಾಕೆ ಮೌನವಾಗಿದೆ ಎನ್ನುವುದು ಅರ್ಥವಾಗದಂತಹ ಸ್ಥಿತಿಯಲ್ಲಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕ ಇನ್ನಾದರೂ ಹೊರಬಂದು ಪಕ್ಷ ಸಂಘಟನೆ ಮಾಡಲಿದೆಯಾ? ಅಥವಾ ಇನ್ನಷ್ಟು ಗಾಢ ನಿದ್ರೆಗೆ ಜಾರಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.