suddibindu.in
Karwar: ಕಾರವಾರ:‌‌ ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ , ಗೃಹ ಬಳಕೆಗಾಗಿ ಪ್ರತೀ ಕುಟುಂಬಕ್ಕೆ 200ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಯಡಿ, ಉತ್ತರ ಕನ್ನಡ (Uttara Kannada ) ಜಿಲ್ಲೆಯಲ್ಲಿ ಹೆಸ್ಕಾಂ(HESCOM) ವತಿಯಿಂದ ಅರ್ಹ ಎಲ್ಲಾ ಕುಟುಂಬಗಳನ್ನು ಈ ಯೋಜನೆಯಡಿ ನೊಂದಣಿ ಮಾಡಿ, ಉಚಿತ ವಿದ್ಯುತ್ ಸರಬರಾಜು ಮಾಡುವ ಮೂಲಕ ಯೋಜನೆಯಲ್ಲಿ ಶೇ. 100 ರಷ್ಟು ಗುರಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಿರುವ 3,76,419 ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೊಂದಣಿ ಮಾಡಿ ಅವರಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಗ್ಯಜ್ಯೋತಿ,ಕುಟೀರ ಜ್ಯೋತಿ (ಎಲ್.ಟಿ.1) ಮತ್ತು ಗೃಹಬಳಕೆಯ (ಎಲ್.ಟಿ.1) ಸೇರಿದಂತೆ ಒಟ್ಟು ಇರುವ ಸ್ಥಾವರ (ಮೀಟರ್) ಗಳ ಸಂಖ್ಯೆ 4,21,599 ಆಗಿದ್ದು, ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಸ್ಥಾವರಗಳ ಸಂಖ್ಯೆ 30,490 ಮತ್ತು ವಿವಿಧ ಕಾರಣಗಳಿಂದ ನೊಂದಣಿ ತಿರಸ್ಕರಿಸಿದ ಮತ್ತು ನೊಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ 14,690 ಆಗಿದ್ದು ಬಾಕಿ ಉಳಿದ ಎಲ್ಲಾ 3,76,419 ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ಜಿಲ್ಲೆಯ ಶಿರಸಿ ವಿಭಾಗದ, ಶಿರಸಿ ಪಟ್ಟಣ, ಶಿರಸಿ ಗ್ರಾಮಂತರ, ಸಿದ್ದಾಪುರ,ಯಲ್ಲಾಪುರ , ಮುಂಡಗೋಡು ವ್ಯಾಪ್ತಿಯಲ್ಲಿ 1,23,427, ದಾಂಡೇಲಿ ವಿಭಾಗದ ದಾಂಡೇಲಿ ಮತ್ತು ಹಳಿಯಾಳ ವ್ಯಾಪ್ತಿಯಲ್ಲಿ 55,077, ಕಾರವಾರ ವ್ಯಾಪ್ತಿಯ ಕಾರವಾರ, ಅಂಕೋಲ,ಸದಾಶಿವಗಡದಲ್ಲಿ 31,801, ಹೊನ್ನಾವರ ವಿಭಾಗದ , ಹೊನ್ನಾವರ,ಕುಮಟಾ,ಭಟ್ಕಳದಲ್ಲಿ 1,19,600 ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ನೊಂದಣಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 4,21,599 ವಿದ್ಯುತ್ ಸ್ಥಾವರಗಳಿದ್ದು, ಅವುಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಹವಿಲ್ಲದ 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಕುಟುಂಬಗಳ ಸಂಖ್ಯೆ 12,887, ದೇವಸ್ಥಾನ ಮಸೀದಿ ಚರ್ಚ್ ಇತ್ಯಾದಿಗಳ ಸಂಖ್ಯೆ 2,369, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಟ್ಟಡಗಳ ಸಂಖ್ಯೆ 5,140, ನೊಂದಣಿಗೆ ಆಸಕ್ತಿ ತೋರದ ಮತ್ತು ನೊಂದಣಿಯನ್ನು ತಿರಸ್ಕರಿಸಿರುವ ಗ್ರಾಹಕರ ಸಂಖ್ಯೆ 11,409, ಖಾಲಿ ಮನೆಗಳು/ ಎರಡಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ 10,094 ಸ್ಥಾವರಗಳು ಸೇರಿದಂತೆ ಒಟ್ಟು 41,899 ಸ್ಥಾವರಗಳು ಗೃಹಜ್ಯೋತಿ ಯೋಜನೆಯಲ್ಲಿ ನೊಂದಣಿಗೆ ಅರ್ಹವಾಗಿರುವುದಿಲ್ಲ.

ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಜನವರಿ 2024 ರ ವರೆಗೆ ಜಿಲ್ಲೆಯಲ್ಲಿ ಹೆಸ್ಕಾಂ ನಿಂದ 100 ಕೋಟಿ ರೂ ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದ್ದು, ಶಿರಸಿ ವಿಭಾಗದಲ್ಲಿ 27.66 ಕೋಟಿ ರೂ, ದಾಂಡೇಲಿ ವಿಭಾಗದಲ್ಲಿ 11.45 ಕೋಟಿ ರೂ, ಕಾರವಾರ ವಿಭಾಗದಲ್ಲಿ 23.45 ಕೋಟಿ ರೂ ಹಾಗೂ ಹೊನ್ನಾವರ ವಿಭಾಗದಲ್ಲಿ 37.75 ಕೋಟಿ ರೂ, ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ಜಿಲ್ಲೆಯಲ್ಲಿ ಶೇ. 100 ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಸ್ಕಾಂ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಲಾಖೆಯ ಮೀಟರ್ ರೀಡರ್ ಗಳು ಮತ್ತು ಲೈನ್‌ಮೆನ್ ಗಳ ಮೂಲಕ ಜಿಲ್ಲೆಯ ಪ್ರತೀ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಹಾಗೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್ ಗಳನ್ನು ಆಯೋಜಿಸಿ ಗ್ರಾಹಕರ ನೊಂದಣಿಗೆ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ ಪ್ರಸ್ತುತ ನೊಂದಣಿಗೆ ಅರ್ಹವಾಗಿಲ್ಲದ ಖಾಲಿ ಮನೆಗಳು ಮತ್ತು ಎರಡಕ್ಕಿಂತ ಹೆಚ್ಚು ಮನೆಗಳ ಗ್ರಾಹಕರ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಅರ್ಹ ಗ್ರಾಹಕರನ್ನು ಹಾಗೂ ಯೋಜನೆಗೆ ನಿರಾಸಕ್ತಿ ತೋರಿರುವವರನ್ನು ಗೃಹಜ್ಯೋತಿ ಯೋಜನೆಗೆ ವ್ಯಾಪ್ತಿಗೆ ತರುವ ಕುರಿತಂತೆ ಗರಿಷ್ಠ ಪ್ರಯತ್ನಗಳನ್ನು ಮಾಡಲಾಗುತ್ತಿದೆ : ದೀಪಕ್ ಕಾಮತ್, ಅಧೀಕ್ಷಕ ಇಂಜಿನಿಯರ್ (ವಿದ್ಯುತ್), ಹೆಸ್ಕಾಂ, ಶಿರಸಿ ವೃತ್ತ.