suddibindu.in
Bangalore:ಬೆಂಗಳೂರು: ಲೋಕಸಭಾ ಚುನಾವಣಾ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಉತ್ತರಕನ್ನಡ(uttar kannada) ಕ್ಷೇತ್ರ ಸೇರಿ ರಾಜ್ಯದ ಹತ್ತಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸಮಸ್ಯೆ ಉಂಟಾಗಿದೆ. ಹಾಲಿ ಸಂಸದರ ಬದಲಾವಣೆಯನ್ನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಸಮರ್ಥ ಅಭ್ಯರ್ಥಿಗಳು ಸಿಗದ ಹಿನ್ನಲೆಯಲ್ಲಿ ಬದಲಾವಣೆ ವಿಚಾರವನ್ನ ಕೈಬಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಾಜ್ಯದ 28ಲೋಕಸಭಾ ಕ್ಷೇತ್ರಗಳ ಕುರಿತಾಗಿ ಎರಡು ಮೂರು ದಿನಗಳ ಹಿಂದಷ್ಟೆ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ರಾಜ್ಯ ಘಟಕವು ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆ ಪಕ್ಷದ(High Command)ಹೈಕಮಾಂಡ್‌ ಮುಂದಿಟ್ಟಿದ್ದಾರೆ‌.

ದಾವಣಗೆರೆ, ಬೀದ‌ರ್, ದಕ್ಷಿಣಕನ್ನಡ, ಬೆಂಗಳೂರು ಉತ್ತರದಂತಹ ಕ್ಷೇತ್ರಗಳ ಬಗ್ಗೆ ಕೇಂದ್ರದ ನಾಯಕರಿಗೆ ತಿಳಿಸಲಾಗಿದೆ, ಪಕ್ಷದ ಬೂತ್‌ ಮಟ್ಟದೊಂದಿಗೆ ಹಾಗೂ ಮತದಾರರೊಂದಿಗೆ ಸಂಪರ್ಕ ಕಳೆದುಕೊಂಡಿರುವ ಹಾಲಿ ಸಂಸದರನ್ನು ಬದಲಿಸಲು ಬಿಜೆಪಿ ಹೈಕಮಾಂಡ್ ಇಂಗಿತ ವ್ಯಕ್ತಪಡಿಸಿದೆ. ಆದರೆ, ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಇಲ್ಲ ಎನ್ನಲಾಗಿದೆ.

ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ತಲೆನೋವು ? :
ಪ್ರಮುಖವಾಗಿ ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ವಿಜಯಪುರ, ತುಮಕೂರು, ಕೊಪ್ಪಳ, ದಾವಣಗೆರೆ,ಬೀದ‌ರ್ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಒಂದಿಷ್ಟು ಕಡೆ ಆಂತರಿಕ ಭಿನ್ನಾಭಿಪ್ರಾಯಗಳು ಕಂಡುಬಂದಿದ್ದು, ಅಭ್ಯರ್ಥಿಗಳ ಘೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚಿಸಲು ಫೆಬ್ರವರಿ ಅಂತ್ಯದಲ್ಲಿ ರಾಜ್ಯ ನಾಯಕರ ಸಭೆ ಕರೆಯಲಾಗಿದ್ದು, ಅಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಅಂತಿಮ ಚಿತ್ರಣ ಹೊರಬರುವ ಸಾಧ್ಯತೆಯಿದೆ. ಹೈಕಮಾಂಡ್ ನಾಯಕರು ಕೊನೆ ಕ್ಷಣದ ಬದಲಾವಣೆ ಮಾಡದಿದ್ದರೆ, ರಾಜ್ಯದ ನಾಯಕರೇ ಕಳುಹಿಸಿದ ಪಟ್ಟಿ ಅಂತಿಮವಾಗಲಿದೆ. ಮಾರ್ಚ್ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ.