ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರ ಕನ್ನಡ ಜಿಲ್ಲೆಗೆ ಯಾವ ಪ್ರವಾಸಿಗರೂ ಬರಬೇಡಿ, ಬರಬೇಕು ಅಂದರೆ ನಿಮ್ಮಜೀವಕ್ಕೆ ನಿವೆ ಹೊಣೆ ಆಗಿರಬೇಕು. ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಇಲ್ಲದೆ ಇರುವ ಕಾರಣ ಜಿಲ್ಲೆಯ ಕರವೇ ಸ್ವಾಭಿಮಾನಿ ಬಣ ಈ ಅಭಿಯಾನಕ್ಕೆ ಮುಂದಾಗಿದೆ.
ಜಿಲ್ಲೆಯ ಗಡಿ ಪ್ರದೇಶ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಬರದಂತೆ ನಾಮಫಲಕ ಅಳವಡಿಸುವ ವಿನೂತನ ಪ್ರತಿಭಟನಾ ಅಭಿಯಾನಕ್ಕೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಶಕಗಳಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇದೆ. ಆದ್ರೆ ಕಳೆದ ಬಿಜೆಪಿ ಸರ್ಕಾರ ತನ್ನ ಅವಧಿಯ ಕೊನೆಯ ಬಜೆಟ್ ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಿ ಜಾಗ ನಿಗಧಿ ಮಾಡಿತು.
ಆದರೆ ಘೋಷಣೆ ನಂತರ ನೆನೆಗುದಿಗೆಗೆ ಬಿದ್ದಿದ್ದು ಈಗಿನ ಸರ್ಕಾರ ಸಹ ಆಸ್ಪತ್ರೆ ನಿರ್ಮಾಣ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ.ಇನ್ನು ಜಿಲ್ಲೆಯಲ್ಲಿ ಅಪಘಾತ ಅಥವಾ ಅನಾರೋಗ್ಯ ಪೀಡಿತರಾದರೇ ಹೊರ ಜಿಲ್ಲೆಗೆ ಹೆಚ್ಚಿನ ಚಿಕಿತ್ಸೆಗೆ ಅವಲಂಭಿಸಬೇಕು. ಇನ್ನೂ ಸೂಕ್ತ ಅಂಬುಲೆನ್ಸ್ ವ್ಯವಸ್ಥೆ ಸಹ ಇಲ್ಲದೇ ಜೋಲಿಯಲ್ಲಿ ಚಿಕಿತ್ಸೆಗೆ ಕರೆದೊಯ್ಯುವ ಸ್ಥಿತಿ ಇಲ್ಲಿದೆ.
ಇನ್ನು ರಸ್ತೆ ಅಪಘಾತಗಳಲ್ಲೇ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಸಿಗದೇ ಮರಣ ಹೊಂದುವವರ ಸಂಖ್ಯೆ ಸಹ ಹೆಚ್ಚಾಗಿದೆ. ಹೀಗಾಗಿ ಸೂಕ್ತ ಆಸ್ಪತ್ರೆ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರ ಆರಂಭಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಸಂಘಟನೆ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಶೀಘ್ರ ಅಭಿಯಾನ ಪ್ರಾರಂಭಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.