ಕಾರವಾರ : ನಗರದಿಂದ ಬಿಣಗಾದ ವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಿರುವ ಟನಲ್ ಮರು ಪ್ರಾರಂಭ ಮಾಡುವ ಮುನ್ನ ಜಿಲ್ಲಾಡಳಿತ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಹೊಣೆಯನ್ನ ಹೊತ್ತು ಪ್ರಾರಂಭ ಮಾಡಲಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಟನಲ್ ಪ್ರಾರಂಭ ಸಂಭಂದ ಹೇಳಿಕೆ ನೀಡಿರುವ ಅವರು ಟನಲ್ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದೇ ಸಂಸದ ಅನಂತ್ ಕುಮಾರ್ ಹೆಗಡೆ, ಶಾಸಕರಾದ ಸತೀಶ್ ಸೈಲ್, ಜಿಲ್ಲಾಡಳಿತ,ಸಾರ್ವಜನಿಕರ ಓಡಾಟಕ್ಕೆ ಬಿಟ್ಟಿರುವುದು ಮೊದಲು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಯಾವುದೇ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದೇ ಜನರಿಗೆ ಓಡಾಟ ಮಾಡಲು ಬಿಟ್ಟು ನಂತರ ಫಿಟ್ ನೆಸ್ ಸರ್ಟಿಫಿಕೇಟ್ ಬೇಕೆಂದು ಟನಲ್ ಬಂದ್ ಮಾಡಲಾಗಿದೆ. ಟನಲ್ ಪ್ರಾರಂಭವಿದ್ದ ವೇಳೆಯಲ್ಲಿ ಪ್ರತಿದಿನ ಓಡಾಟ ಮಾಡಿದವರಿಗೆ ಮೂರ್ನಾಲ್ಕು ಕಿಲೋ ಮೀಟರ್ ಕಡಿಮೆ ಪ್ರಯಾಣ ಆಗುವುದರಿಂದ ಟನಲ್ ನಲ್ಲಿಯೇ ಓಡಾಟ ಮಾಡುವುದನ್ನ ರೂಡಿ ಮಾಡಿಸಿಕೊಂಡಿದ್ದರು.

ಇದಲ್ಲದೇ ಬೈತ್ಕೋಲ ಮಾರ್ಗವಾಗಿ ತೆರಳುವ ರಸ್ತೆ ಸಹ ಸರಿಯಿಲ್ಲದ ಕಾರಣ ಜನರಿಗೆ ಟನಲ್ ಓಡಾಟಕ್ಕೆ ಹೊಂದಿಕೊಂಡಿದ್ದರು. ಅದಾದ ನಂತರ ಫಿಟ್ ನೆಸ್ ಸರ್ಟಿಫಿಕೇಟ್ ಎಂದು ಟನಲ್ ಬಂದ್ ಮಾಡಿ ಜನರ ಸಮಸ್ಯೆಗೆ ಕಾರಣವಾಗಿದ್ದಾರೆ.ಟನಲ್ ಗೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡದೆ ಜನರನ್ನ ಓಡಾಡಲು ಬಿಟ್ಟಿದ್ದೇ ಮೊದಲು ತಪ್ಪು. ಈಗ ಜಿಲ್ಲಾಡಳಿತವೇ ಇದರ ಹೊಣೆಯನ್ನ ಹೋರಬೇಕು. ಜಿಲ್ಲಾಡಳಿತವೇ ಪರಿಣಿತ ಕಂಪನಿಯಿಂದ ಫಿಟ್ ನೆಸ್ ಪರೀಕ್ಷೆಯನ್ನ ಮಾಡಿಸಿ ನಂತರ ಕ್ರಮ ಕೈಗೊಳ್ಳಬೇಕು. ಜನರಿಗೆ ಏನೇ ಸಮಸ್ಯೆ ಆದರು ಅದಕ್ಕೆ ಜಿಲ್ಲಾಡಳಿತವೇ ಕಾರಣವಾಗಲಿದೆ ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.

ಬಂಡತನದ ನಿರ್ಧಾರ ಸರಿಯಲ್ಲ
ಟನಲ್ ಪ್ರಾರಂಭ ವಿಚಾರ ಇದೊಂದು ಅತಿಸೂಕ್ಷ್ಮ ವಿಚಾರವಾಗಿದೆ. ಇದನ್ನ ಯಾವುದೇ ರಾಜಕೀಯ ಉದ್ದೇಶದಿಂದ ಅಥವಾ ಬಂಡತನದಿಂದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನ ನೀಡಿ ಪ್ರಾರಂಭಿಸಲಿ.ಟನಲ್ ಬೇಕೆ ಬೇಕು ಎಂದು ಹೋರಾಟ ಮಾಡುವ ರಾಜಕಾರಣಿಗಳು, ಕೆಲ ಮುಖಂಡರು ಟನಲ್ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದೇ ಪ್ರಾರಂಭ ಮಾಡಿದರೆ ಸಾರ್ವಜನಿಕರಿಗೆ ಯಾವುದೇ ಹಾನಿಯಾಗದಂತೆ ಸಂಪೂರ್ಣ ಜವಬ್ದಾರಿ ತೆಗೆದುಕೊಳ್ಳಬೇಕು. ಮೊದಲು ಇಂತಹ ಸೂಕ್ಷ್ಮ ವಿಚಾರದಲ್ಲಿ ಬಂಡತನದ ನಿರ್ಧಾರ ತೆಗೆದುಕೊಳ್ಳುವುದರ ಬದಲು ತಾಂತ್ರಿಕವಾಗಿ ಯಾವುದು ಸರಿ ಯಾವುದು ತಪ್ಪು ಎಂದು ಅವಲೋಕಿಸಿ ಕ್ರಮ ಕೈಗೊಳ್ಳಬೇಕು.
ಆನಂದ್ ಅಸ್ನೋಟಿಕರ್ ಮಾಜಿ ಸಚಿವ