ಸುದ್ದಿಬಿಂದು ಬ್ಯೂರೋ
ಭಟ್ಕಳ
: ಕಳೆದ ಮಾ.13 ರಂದು ರಾತ್ರಿ ಇಲ್ಲಿನ ಬಂದರ್ ರೋಡ್ 2ನೇ ಕ್ರಾಸ್ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಲಾದ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಬಂಟ್ವಾಳ ಫರಂಗಿಪೇಟೆಯ ನೌಫಿಲ್ ಮತ್ತು ಉಡುಪಿ ಕುಂಜಬೆಟ್ಟು ನಿವಾಸಿ ಇಮಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮನೆಯ ಮುಂದೆ ನಿಲ್ಲಿಸಲಾಗಿದ್ದ ಮೋಟಾರ್ ಬೈಕ್‌ನ್ನು ಕದ್ದು ಕಾರಿಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಟೋಲ್‌ಗೇಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.