suddibindu.in
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ
ಶಿರಸಿ :
ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೋಲಿಸರು.ಬೆಳಗಲಮನೆಯ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರದ ಅರಣ್ಯ ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ಇಸ್ಪಿಟ್ ಆಡ್ಡೆಯ ಮೇಲೆ ದಾಳಿ ನಡೆಸಿ ಮೂವರ ಮೇಲೆ ಕ್ತಮ ಜರುಗಿಸಿ 10,400 ನಗದು ವಶಕ್ಕೆ ಪಡೆದುಕೊಂಡ ಪಿಎಸ್ಆಯ್ ಪ್ರತಾಪ್.ನಾಗರಾಜ ಮಂಜುನಾಥ ಗೌಡಾ,ಕೃಷ್ಣಾ ಪುಟ್ಟಾ ಗೌಡಾ ಹಾಗು ವಿಶ್ವನಾಥ ಸುಬ್ಬಾಗೌಡಾ ಈ ಘಟನೆಯ ಆರೋಪಿಗಳಾಗಿದ್ದಾರೆ.ಇವರೆಲ್ಲರೂ ಕೂಡಾ ಶಿರಸಿಯವರಾಗಿದ್ದಾರೆ.

ಪುಸ್ತಕ ಮಳಿಗೆಯಲ್ಲಿ ಕಳ್ಳತನ
ದಾಂಡೇಲಿ :
ನಗರದ ಲೆನಿನ್ ರಸ್ತೆಯಲ್ಲಿರುವ ಜ್ಯೋತಿ ಬುಕ್ ಸ್ಟಾಲ್ ನಲ್ಲಿ ಶುಕ್ರವಾರ ನಸುಕಿನ ವೇಳೆ ಕಳ್ಳತನ ನಡೆದಿರುವ ಘಟನೆ ನಡೆದಿದೆ.ಜ್ಯೋತಿ ಬುಕ್ಸ್ ಸ್ಟಾಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ರೂ:2,000/- ನಗದು ಮತ್ತು ಅಗತ್ಯ ದಾಖಲೆ ಪತ್ರಗಳಿದ್ದ ತಿಜೋರಿ ಹಾಗೂ ಸಿಸಿ ಕ್ಯಾಮೇರಾದ ಡಿವಿಆರ್’ನ್ನು ಹೊತ್ತೊಯ್ದಿದ್ದಾರೆ.ಘಟನೆಯ ಕುರಿತಂತೆ ಪುಸ್ತಕ ಮಳಿಗೆಯ ಮಾಲಕರಾದ ಅಲ್ಲಂಪ್ರಭು ಪಾಟೀಲ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ

ಮಾರಿಕಾಂಬಾ ದೇವಸ್ಥನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಶಿರಸಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕುಟುಂಬ ಸಮೇತರಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.ಮಾರಿಕಾಂಬಾ ದೇವಿಗೆ ಉಡಿ ಸೇವೆ ಸಲ್ಲಿಸಲಾಯಿತು.ನರೇಂದ್ರ ಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕು ಹಾಗೂ ತಮ್ಮ ಗೆಲುವಿಗಾಗಿ ಪೂಜೆ ಸಲ್ಲಿಸಲಾಯಿತು.ಸಚಿವ ಪ್ರಹ್ಲಾದ ಜೋಶಿಗೆ ಬಿಜೆಪಿಯ ಪ್ರಮುಖ ಮುಖಂಡರು ಸಾಥ್ ನೀಡಿದರು.ಚುನಾವಣೆ ಮುಗಿದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಸಚಿವ ಪ್ರಹ್ಲಾದ್ ಜೋಶಿ ದೇವರ ದರ್ಶನ ಪಡೆದರು.

ಶಾಲಾ ಪ್ರಾರಂಭೋತ್ಸವ
ಕುಮಟಾ
: ಶಾಲಾ ಪ್ರಾರಂಭದ ದಿನವೇ ಇಷ್ಟೆಲ್ಲಾ ಮಕ್ಕಳು ಬಂದಿರುವುದು ಸಂತಸ ತಂದಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತಾ, ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕೆನರಾಪ್ಲಸ್ ನ್ಯೂಸ್ ಚಾನೆಲ್ ನ ಸಂಪಾದಕ ಚರಣರಾಜ್ ನಾಯ್ಕ ಅಭಿಪ್ರಾಯಿಸಿದರು.ಪಟ್ಟಣದ ಚಿತ್ರಗಿಯ ಮಹಾತ್ಮ ಗಾಂಧಿ ಪ್ರೌಢಶಾಲೆಯ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು, ಪಠ್ಯಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಗುರುವನ್ನು ಮೀರಿಸುವ ಶಿಷ್ಯನ ಸಾಧನೆಯನ್ನು ಪ್ರಶಂಸಿದ ಸಭಾಧ್ಯಕ್ಷ, ಮುಖ್ಯ ಶಿಕ್ಷಕ ಪಾಂಡುರಂಗ ವಾಗ್ರೇಕರ ಅಧ್ಯಕ್ಷೀಯ ಹಿತವಚನವನ್ನು ನುಡಿದರು.

ಯುವಕನಿಗೆ ಮಾರಣಾಂತಿಕ ಹಲ್ಲೆ
ಅಂಕೋಲಾ
: ಕಾರಿನಲ್ಲಿ ಬಂದ 6-7ಮಂದಿ ಯುವಕರ ತಂಡವೊಂದು ಯುವಕ ನೋರ್ವನನ್ನ ಅಪರಣ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (27) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಗಂಭಿರವಾಗಿದ್ದು, ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೀನು ಲಾರಿ ಚಾಲಕನಾಗಿರುವ ಹರ್ಷ ನಾಗೇಂದ್ರ ನಾಯ್ಕ ಅಂಕೋಲಾದಿಂದ ತನ್ನ ಮನೆ ತೆಂಕಣಕೇರಿಗೆ ಭೈಕ್‌ನಲ್ಲಿ ಹೋಗುತ್ತಿದ್ದಾಗ ಕಾರನಲ್ಲಿ ಬಂದ ಯುವಕರ ತಂಡ ಅಪಹರಿಸಿ ಕೊಂಡು ಹೋಗಿ ಹಲ್ಲೆ ಮಾಡಿರುವುದಾಗಿ. ಹಲ್ಲೆಗೆ ಒಳಗಾದ ಹರ್ಷ ತಂದೆ ನಾಗೇಂದ್ರ ನಾಯ್ಕ ಹಾಗೂ ತಾಯಿ ಜಯಶ್ರೀ ನಾಯ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕ ಇಳಿಯುವಂತಿಲ್ಲ
ಕಾರವಾರ:
ಪ್ರತಿ ದಿನ ಆಳ ಸಮುದ್ರಕ್ಕೆ ಇಳಿದು ಮತ್ಸ್ಯ ಶಿಕಾರಿ ಮಾಡುವ ಕಡಲ ಮಕ್ಕಳಿಗೆ ಇನ್ನು ಎರಡು ತಿಂಗಳು ವನವಾಸ ಪ್ರಾರಂಭವಾದಂತೆ. ಸರ್ಕಾರ ಮಳೆಗಾಲ ಪ್ರಾರಂಭದ ಸಮಯ ಎರಡು ತಿಂಗಳು ಮೀನುಗಾರಿಕೆ ಮಾಡುವುದಕ್ಕೆ ನಿಷೇದ ಹೇರಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಡಲತೀರದಲ್ಲಿ ಇಂದಿನಿಂದ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ. ಜೂನ್ ಮತ್ತು ಜುಲೈ ತಿಂಗಳು ಮಾತ್ರ ಮೀನುಗಾರರಿಗೆ ವನವಾಸವಾಗಲಿದೆ. ಮಳೆಗಾಲ ಆಗಿರುವುದರಿಂದ ಜೊತೆಗೆ ಮೀನು ಮೊಟ್ಟೆ ಇಟ್ಟು ಸಂತತಿ ವೃದ್ದಿ ಮಾಡುವ ಸಮಯ ಆಗಿರುವುದರಿಂದ ಮೀನುಗಾರಿಕೆ ಮೇಲೆ ನಿಷೇದ ಹೇರಿದೆ. ಎರಡು ತಿಂಗಳುಗಳ ಕಾಲ ಮೀನುಗಾರರು ಕಡಲಿಗೆ ಮೀನುಗಾರಿಕೆ ಮಾಡಲು ಇಳಿಯುವಂತಿಲ್ಲ. ಈ ನಿಟ್ಟಿನಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇದ ಪ್ರಾರಂಭವಾಗುವುದರಿಂದ ಕರಾವಳಿಯ ಬಂದರುಗಳಲ್ಲಿ ನೂರಾರು ಮೀನುಗಾರರು ವಾಪಾಸ್ ಬೋಟ್ ಗಳನ್ನ ತಂದು ಲಂಗರು ಹಾಕಿ ನಿಲ್ಲಿಸಿದ್ದಾರೆ ಮೀನುಗಾರರು ಯಾವುದೇ ಕಾರಣಕ್ಕೂ ನಾಳೆಯಿಂದ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚಕ್ಕಡಿ ಗಾಡಿಯಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳು
ಅಂಕೋಲಾ :
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳನ್ನ ಚಕ್ಕಡಿ ಗಾಡಿಯಲ್ಲಿ ವಿಧ್ಯಾರ್ಥಿಗಳನ್ನ ಶಾಲೆಗೆ ಕರೆತರಲಾಯಿತು. ಆರಂಭೋತ್ಸವ ದಿನ ಸಮವಸ್ತ್ರ, ಪಠ್ಯ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಗ್ರಾಮೀಣ ಸೊಗಡಿನ ಪಾಠ ಕಲಿಸಲು ಚಕ್ಕಡಿ ಗಾಡಿಯಲ್ಲಿ ವಿಧ್ಯಾರ್ಥಿಗಳನ್ನ ಕರೆತರಲಾಯಿತು. ಪ್ರಾರಂಭೋತ್ಸವದ ಅಂಗವಾಗಿ ಶಾಲೆಯನ್ನ ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿತ್ತು, ಪಾಲಕರು, ಶಾಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕಸ ಎಸೆಯುವದನ್ನು ತಡೆದ : ಯುವಾ ಬ್ರಿಗೇಡ್
ಕುಮಟಾದ :
ತಾಲೂಕಿನ ಮಾನೀರ್ ಬಳಿ ಹೊನ್ನಾವರದಿಂದ ಹುಬ್ಬಳ್ಳಿಗೆ ಹೋಗುವ ಗಾಡಿ ಒಂದರಲ್ಲಿ ಕಸವನ್ನು ತುಂಬಿಕೊಂಡು ಬಂದು ಕುಮಟಾದ ಮಾನೀರ್ ಬಳಿ ಆ ಕಸವನ್ನು ಎಸೆಯುವಾಗ ಅದನ್ನು ಗಮನಿಸಿದ ಯುವಾ ಬ್ರಿಗೇಡ್ ಮಹಾರಕ್ಷಕ ಪ್ರಕಲ್ಪದ ರಾಜ್ಯ ಸಹಸಂಚಾಲಕರಾದ ರಾಮದಾಸ ನಾಯ್ಕ ಹಳದಿಪುರ ಅವರು ಕಸ ಎಸೆಯುವದನ್ನು ತಡೆದು, ಕುಮಟಾದ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು. ಪುರಸಭಾ ವ್ಯಾಪ್ತಿ ಆಗದೆ ಇರುವದ್ದರಿಂದ ದಿವಗಿ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಕರೆ ಮಾಡಿ ತಿಳಿಸಿ ನಂತರ 112 ಗೆ ಕರೆ ಮಾಡಿ ಕುಮಟಾದ ಪೋಲಿಸ್ ಅಧಿಕಾರಿಗಳು ಅಲ್ಲಿಗೆ ಬಂದು ಕಸ ಎಸೆದ ಗಾಡಿಗೆ ದಂಡ ವಿಧಿಸಿದರಲ್ಲದೆ ಅಲ್ಲಿ ಸುತ್ತ ಮುತ್ತಲು ಬಿದ್ದ ಎಲ್ಲ ಕಸವನ್ನು ಅವರ ಬಳಿ ತೆಗೆಸಿದರು.ಈ ಸಂಧರ್ಭದಲ್ಲಿ ಪಂಚಾಯಿತಿಯ ಅಧ್ಯಕ್ಷರಾದ ಜಗ್ಗು ಭಟ್ ಹಾಗೂ ಸದಸ್ಯರಾದ ಶ್ರೀಧರ ಗೌಡ ಹಾಗೂ ಯುವಾ ಬ್ರಿಗೇಡ್ ಸದಸ್ಯರಾದ ಅಣ್ಣಪ್ಪ ನಾಯ್ಕ ಊರಿನ ಜನರು ಹಾಜರಿದ್ದರು.

ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ತಲೆದೋರಿದ್ದ ಬರದ ಛಾಯೆ ಈ ವರ್ಷ ದೂರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು, ಜಿಲ್ಲೆಯಲ್ಲಿ 14,959 ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 5,409 ಕ್ವಿಂಟಲ್ ಭಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಭಿತ್ತನೆ ಬೀಜ ಹಾಗೂ ರಸಗೊಬ್ಬರದ ವಿತರಣೆ ಕಾರ್ಯವು ಸುಗಮವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ಮೇ 30 ರ ವರೆಗಿನ ಪೂರ್ವ ಮುಂಗಾರು ಮಳೆಯ ವಾಡಿಕೆ ಪ್ರಮಾಣವು 97 ಮಿ.ಮೀ ಇದ್ದು, ಪ್ರಸ್ತುತ 133 ಮಿ.ಮೀ ಮಳೆಯಾಗಿದ್ದು, ಶೇ.38 ರಷ್ಟು ಅಧಿಕವಾಗಿದೆ ಅಲ್ಲದೇ ಜನವರಿ 1 ರಿಂದ ಮೇ 30 ರ ವರೆಗಿನ ಸರಾಸರಿ ಮಳೆಯು 97 ಮಿ.ಮೀ ಇದ್ದದ್ದು 145 ಮಿ.ಮೀ ಸುರಿಯುವ ಮೂಲಕ ಶೇ.49 ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಹೆಚ್ಚು ಭರದಿಂದ ನಡೆಯುತ್ತಿವೆ.

ತಂಬಾಕು ಉತ್ಪನ್ನಗಳ ಜಾಹೀರಾತುಗಳಿಗೆ ಮರುಳಾಗಬೇಡಿ; ನ್ಯಾ.ದಿವ್ಯಶ್ರೀ ಸಿ.ಎಂ
ಕಾರವಾರ,:
ತಂಬಾಕು ಉತ್ಪನ್ನಗಳ ಆಕರ್ಷಕ ಜಾಹೀರಾತುಗಳಿಂದ ಪ್ರೇರೆಪಿತರಾಗಿ, ದುಶ್ಚಟಗಳಿಗೆ ಬಲಿಯಾಗದಂತೆ ಇಂದಿನ ಯುವ ಪಿಳಿಗೆಯನ್ನು ರಕ್ಷಿಸಿ, ತಂಬಾಕು ರಹಿತ ಸಮಾಜ ಮಾಡಲು ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕಟುಂಭ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕುನಿಯAತ್ರಣ ಕೋಶ, ಜಿ.ಎನ್.ಎಮ್.ಟಿ.ಸಿ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ತಂಬಾಕು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಷ್ಟೇ ಅರಿವು ಮೂಡಿಸಿದರೂ ಅದರ ಸೇವನೆ ಕಡಿಮೆಯಾಗದಿರುವುದು ವಿಪರ್ಯಾಸ. ಅನೇಕ ಕಡೆ ಯಾವುದೇ ಅಂಜಿಕೆ ಅಳಕು ಇಲ್ಲದೇ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತದೆ ಎಂದರು.

ರಾಣಿ ಚೆನ್ನಮ್ಮ ಶಾಲೆಗೆ ಸಿಇಓ ಅನಿರೀಕ್ಷಿತ ಭೇಟಿ ;
ಕಾರವಾರ :
ಮಕ್ಕಳಿಗೆ ಬೌದ್ಧಿಕ ಕಲಿಕೆಯೊಂದಿಗೆ ದೈಹಿಕ ಕ್ರೀಡಾಭ್ಯಾಸಗಳಲ್ಲೂ ಆಸಕ್ತಿ ಮೂಡಿಸಬೇಕು. ಮಕ್ಕಳ ಪ್ರತಿಭೆಯನುಸಾರ ಉತ್ತಮ ಮಾರ್ಗದರ್ಶನ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಸೂಚನೆ ನೀಡಿದರು.ಅವರು ಗುರುವಾರ ಅಂಕೋಲಾ ತಾಲೂಕಿನ ಬೆಳಸೆಯಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಕೊಠಡಿ, ಕಂಪ್ಯೂಟರ್ ಲ್ಯಾಬ್‌ಗಳನ್ನು ಸೇರಿದಂತೆ ಶಾಲಾ ಕಟ್ಟಡ ಮತ್ತು ಆವರಣದಲ್ಲಿ ಪರಿವೀಕ್ಷಿಸಿದರು. ಶಾಲೆಗೆ ಉತ್ತಮವಾದ ಕ್ರೀಡಾಂಗಣವಿದ್ದು, ಮಕ್ಕಳಿಗೆ ಯೋಚಿತ ಕ್ರೀಡಾ ತರಬೇತಿ ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಶ್ರಮವಹಿಸಿ ಎಂದು ಸೂಚಿಸಿದರು.

ರಂಗಶಿಕ್ಷಣ ಡಿಪ್ಲೋಮಾ ತರಗತಿಗೆ ಅರ್ಜಿ ಆಹ್ವಾನ
ಕಾರವಾರ :
ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2024-25ನೇ ಸಾಲಿನ ರಂಗ ಶಿಕ್ಷಣಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶಾತಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು, ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ-ವಸತಿ ವ್ಯವಸ್ಥೆ ಇರುತ್ತದೆ. ಗ್ರಂಥ ಭಂಡಾರ ಹಾಗೂ ದೃಶ್ಯ ಶ್ರವ್ಯ ಪರಿಕರಗಳ ಅನುಕೂಲತೆ ಇದೆ. ರಂಗಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಪ್ರವೇಶ ಅರ್ಜಿಗಳನ್ನು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಸಾಣೇಹಳ್ಳಿ-577515 ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಅಥವಾ ರಂಗಶಾಲೆಯ ವೆಬ್‌ಸೈಟ್ www.theatreschoolsanehalli.org ನಿಂದ ಡೌನ್‌ಲೋಡ್ ಮಾಡಿಕೊಂಡು ಜೂನ್ 25 ರೊಳಗಾಗಿ ಅರ್ಜಿಗಳನ್ನು ರಂಗಶಾಲೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9448398144, 8861043553, 9482942394, 9972007015 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ :
-ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಜೂನ್ ತಿಂಗಳಲ್ಲಿ ‘ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್’ ಹಾಗೂ ಜುಲೈ ತಿಂಗಳಲ್ಲಿ ‘ರೆಫ್ರಿಜರೆಟರ್ ಮತ್ತು ಏರ ಕಂಡೀಶನಿಂಗ್’ಉಚಿತ , ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸವನ್ನು ನೋಂದಾಯಿಸಿಕೊಳ್ಳಲು ಜೂನ್ 15 ಕೊನೆಯ ದಿನವಾಗಿದೆ. ತರಬೇತಿ ಅವಧಿಯಲ್ಲಿ ಊಟ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ, ಬ್ಯಾಂಕಿನಿಂದ ಸಾಲ ಪಡೆದು ಸ್ವಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ ಅಥವಾ ದೂರವಾಣಿ ಸಂಖ್ಯೆ 8217236973, 9483485489, 9632225123 ನ್ನು ಸಂಪರ್ಕಿಸಬಹುದು ಎಂದು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.