ಸುದ್ದಿಬಿಂದು ಬ್ಯೂರೋ
ಕುಮಟಾ
: ಚಥುಷ್ಪತ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡದಲ್ಲಿನ ಬೃಹತ್ ಬಂಡೆಗಲ್ಲು ಉರುಳಿ ಮನೆಯೊಳಗೆ ಬಂದ ಪರಿಣಾಮ ಮನೆಗೆ ಹಾನಿ ಉಂಟಾಗಿದ್ದು, ಕೂದಲೆಳೆ ಅಂತರದಲ್ಲಿ ಬಹುದೊಡ್ಡ ಅನಾಹುತವೊಂದು ತಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ತಂಡ್ರಕುಳಿಯಲ್ಲಿ ನಡೆದಿದೆ.

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಮಟಾ ತಾಲೂಕಿನ ತಂಡಕುಳಿಯ ಗುಡ್ಡದ ಧರೆ ಕುಸಿದು, ಬೃಹತ್ ಗಾತ್ರದ ಬಂಡೆಗಲ್ಲೊಂದು ಉರುಳಿ ಬಂದು ಗಣೇಶ ತುಳಸು ಅಂಬಿಗ ಅವರ ಮನೆಯ ಹಿಂಭಾಗಕ್ಕೆ ಗುದ್ದಿದೆ. ಈ ಅವಘಡದಿಂದ ಮನೆಯ ಗೋಡೆಗಳಿಗೆ ಬಿರುಕು ಬಿಟ್ಟಿವೆ. ಅದರಲ್ಲಿ ಒಂದು ಕೋಣೆಗೆ ಭಾರಿ ಹಾನಿಯಾಗಿದ್ದು, ಗೋಡೆ ಕುಸಿಯುವ ಆತಂಕ ಎದುರಾಗಿದೆ. ಅವಘಡ ನಡೆಯುವ ಸಂದರ್ಭದಲ್ಲಿ ಕುಟುಂಬಸ್ಥರು ಮನೆಯೊಳಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

ಅಧಿಕಾರಿಗಳು ಪರಿಶೀಲನೆ ನಡೆಸಿ, ಲಕ್ಷಾಂತರ ರೂಪಾಯಿ ಹಾನಿಯಾಗಿರುವುದಾಗಿ ಅಂದಾಜಿಸಿದ್ದಾರೆ. ಅಲ್ಲದೇ ಈ ಮನೆಯಲ್ಲಿ ನಾಳೆ (28) ರಂದು ವಿವಾಹ ಕಾರ್ಯಕ್ರಮವಿದ್ದು, ಮನೆಗೆ ಸುಣ್ಣ-ಬಣ್ಣ ಬಳಿದು, ಸಿಂಗರಿಸಲಾಗಿತ್ತು. ಆದರೆ ಈ ಅವಘಡದಿಂದ ಮನೆಯ ಅಂದ ಹಾಳಾಗಿದ್ದು, ಮುರುಕಲು ಮನೆತರ ಭಾಸವಾಗುವಂತಾಗಿದೆ. ಈ ಬಗ್ಗೆ ತೀವ್ರ ಬೇಸರ ಹಾಗೂ ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ಮತ್ತೆ ಧರೆ ಕುಸಿದರೆ, ನಮ್ಮೆಲ್ಲರ ಪಾಂಡೇನು ಅಂತಿದ್ದಾರೆ.

ಇನ್ನು ಇದೇ ಭಾಗದಲ್ಲಿ 2017ರಂದು ನಡೆದ ಗುಡ್ಡ ಕುಸಿತದಿಂದ ಮೂವರು ಮಕ್ಕಳು ಜೀವಂತ ಸಮಾಧಿಯಾಗಿದ್ದರು. ಮತ್ತೆ ಇದೀಗ ಅದೆ ಜಾಗ ನೆನಪಿಸಿಕೊಂಡರೆ, ಸ್ಥಳೀಯರಲ್ಲಿ ನಡುಕ ಹುಟ್ಟುವಂತಾಗಿದೆ. ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.