ಸುದ್ದಿಬಿಂದು ಬ್ಯೂರೋ
ಉಡುಪಿ :
ಮಲ್ಪೆ ಕಡಲತೀರದಲ್ಲಿ ನೂಡಲ್ಸ್‌ ಮಾದರಿಯ ವಸ್ತುಗಳು ಪತ್ತೆಯಾಗಿವೆ. ಈ ವಿಚಿತ್ರ ವಸ್ತುಗಳು ಪತ್ತೆಯಾಗಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.ಬಿಪರ್‌ ಜೋಯ್‌ ಚಂಡ ಮಾರುತದ ಬೆನ್ನಲ್ಲೇ ವಿಚಿತ್ರ ವಸ್ತುಗಳು ಪತ್ತೆಯಾಗುವೆ. ಈ ಕುರಿತು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅದರ ಮಾದರಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಗೋವಾಕ್ಕೆ ಕಳುಹಿಸಲಾಗಿದೆ.

ಮಲ್ಪೆ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ‌ ಈ ನೂಡಲ್ಸ್‌ ಮಾದರಿಯ ವಸ್ತುಗಳು ಪತ್ತೆಯಾಗಿವೆ. ಇದರಿಂದ ಯಾವುದೇ ಹಾನಿಯಿಲ್ಲ ಎಂದು ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್‌ ಅವರು ಮಾಹಿತಿ ನೀಡಿದ್ದಾರೆ.ಇದನ್ನು ಕಸ ಅಥವಾ ಕಲ್ಮಶ ಎನ್ನಲು ಸಾಧ್ಯವಿಲ್ಲ. ಶ್ಯಾವಿಗೆ ರೀತಿಯಲ್ಲಿರುವ ಎಳೆ ಎಳೆಯಾದ ಬಿಳಿ ಬಣ್ಣದ ಈ ಕಸದ ರಾಶಿಯನ್ನು ಸ್ಥಳೀಯರು ಗಂಗಾದೇವಿಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ರಾಶಿ ಬಿದ್ದಿದೆ.

ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಳೆಗಾಲದಲ್ಲಿ ಮಾತ್ರ ಸಂಭವಿಸುತ್ತವೆ. ಹುಣ್ಣಿಮೆ ಮತ್ತು ಅಮಾವಾಸ್ಯೆ ಸಂದರ್ಭದಲ್ಲಿರುವ ಉಬ್ಬರದ ನೀರು ಕಸದ ರಾಶಿಯನ್ನೇ ಸಮುದ್ರತೀರಕ್ಕೆ ತಂದು ಹಾಕುತ್ತದೆ. ಸಮುದ್ರದ ಒತ್ತಡ ದಿಂದಾಗಿ ಗಂಗಾದೇವಿಯ ಕೂದಲು ಹಾಗೂ ಕಸದ ರಾಶಿ ಬಿದ್ದಿದೆ ಎನ್ನಲಾಗಿದೆ.ಗಂಗಾದೇವಿಯ ಕೂದಲು ಸಮುದ್ರದಲ್ಲಿ ಕೊಳೆತು ಮೀನುಗಳಿಗೆ ಆಹಾರವಾಗುತ್ತದೆ.

ಸುಮಾರು 10 ವರ್ಷದ ಹಿಂದೆ ಕಡಲ ತೀರದಲ್ಲಿ ಕಂಡುಬಂದಿತ್ತು. ಈ ಬಾರಿ ಯಥೇಚ್ಚವಾಗಿ ಬಿದ್ದಿದೆ. 10 ವರ್ಷಗಳ ಹಿಂದೆ ಕಡಲತೀರದಲ್ಲಿ ಕಂಡು ಬಂದ ಗಂಗಾದೇವಿಯ ಕೂದಲು ಎನ್ನಲಾದ ಈ ರಾಶಿಯಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಬಾಟಲಿ ಕಾಣ ಸಿಕ್ಕಿರಲಿಲ್ಲ. ಆದರೆ ಇದೀಗ ಇದರಲ್ಲಿ ಲಾರಿಗಟ್ಟಲೆ ಕಸ, ಕಡ್ಡಿ ,ಪ್ಲಾಸ್ಟಿಕ್ ಬಂದಿರುವುದು ವಿಪರ್ಯಾಸ.ಈ ವಸ್ತುಗಳು ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಇವುಗಳನ್ನು ಗುಂಡಿಯನ್ನು ಹೂಳುವ ಬದಲು ಗೊಬ್ಬರವಾಗಿ ಪರಿವರ್ತಿಸಬಹುದು. ಅಲ್ಲದೇ ಸಮುದ್ರಕ್ಕೆ ತಳ್ಳುವುದರಿಂದ ಇತರ ಜೀವಿಗಳಿಗೆ ಆಹಾರವಾಗಲಿವೆ ಎಂದಿದ್ದಾರೆ.