ಸುದ್ದಿಬಿಂದು ಬ್ಯೂರೋ
ಭಟ್ಕಳ
: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಒಂದಾಗಿರುವ ಮುರುಡೇಶ್ವರ ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಇಂದಿನಿಂದ ಮುಂದಿನ ಎರಡು ತಿಂಗಳ ಕಾಲ ನಿರ್ಬಂಧ ಹಾಕಲಾಗಿದೆ.

ಮುರುಡೇಶ್ವರ ಅಂದಾಕ್ಷಣ ಎಲ್ಲರಿಗೂ ಒಮ್ಮೆ ನೆನಪಿಗೆ ಬರುವುದು ಇಲ್ಲಿನ ಶಿವನ ದೇವಾಲಯ ಮತ್ತು ಕಡಲತೀರಗಳು. ಇದನ್ನ ನೋಡೋದಕ್ಕೆ ಎಂದು ನಿತ್ಯವೂ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲ್ಲೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬಂದು ಶಿವನ ದರ್ಶನ ಪಡೆದು ಕಡಲತೀರದಲ್ಲಿ ಮೋಜು ಮಸ್ತಿ ಮಾಡುವುದು ಸರ್ವೆ ಸಾಮಾನ್ಯ.

ಆದರೆ ಕಳೆದ ಒಂದು ವಾರಗಳಿಂದ ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಆಳೆತ್ತರದ ರಕ್ಕಸ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು. ಅಲೆಗಳು ಜೋರಾಗಿರುವ ಕಾರಣಕ್ಕೆ ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಅಲ್ಲಿನ ಲೈಪ್ ಗಾರ್ಡ್ ಸಿಬ್ಬಂದಿಗಳು ಹಾಗೂ ಪೊಲೀಸ್ ರು ಎಚ್ಚರಿಕೆ. ನೀಡಿದ್ದರು ಬರುವ ಪ್ರವಾಸಿಗರು ಯಾವುದನ್ನು ಲೆಕ್ಕಿಸದೆ ಮೋಜು ಮಸ್ತಿಗಾಗಿ ಕಡಲಿಗೆ ಇಳಿದು ಪ್ರಾಣ ಕಳೆದುಕೊಳ್ಳುವಂತಾಗುತ್ತಿತ್ತು,

ಎರಡು ಮೂರು ದಿನದಲ್ಲೆ‌ ಇಬ್ನರೂ ಪ್ರವಾಸಿಗರು ಪ್ರಾಣಕಳೆದುಕೊಂಡಿದ್ದು, ಇಬ್ಬರ ಶವ ಕೂಡ ಪತ್ತೆಯಾಗಿದೆ. ಕಲಘಟಗಿ ಮೂಲದ ಸಂತೋಷ ಹುಲಿಗೊಂಡ, ಬೆಂಗಳೂರಿನ ಪವನ ನಾಯಕ ಮೃತ ಪ್ರವಾಸಿಗರಾಗಿದ್ದಾರೆ.
ಒಂದುವಾರದಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು, ಅದರ ಜತೆಗೆ ಅಲೆಗಳ ಅಬ್ಬರವೂ ಹೆಚ್ಚಿದೆ. ಇಲ್ಲಿ ಜೀವರಕ್ಷಕರ ದೊಡ್ಡ ಪಡೆಯೂ ಇದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹೊತ್ತಿನಲ್ಲಿ ಇವರು ಇನ್ನಷ್ಟು ಅಲರ್ಟ್ ಆಗಿರುತ್ತಾರೆ. ಆದರೆ, ಪ್ರವಾಸಿಗರು ಕೆಲವು ಸಮಯದಲ್ಲಿ ಇವರ ಮಾತನ್ನು ಕೇಳದೆ ನೀರಿಗೆ ಇಳಿಯುವುದು ದೊಡ್ಡ ಸಮಸ್ಯೆಯಾಗಿದೆ.

ಎರಡೂ ಸಾವುಗಳು ಸಂಭವಿಸಲು ಪ್ರವಾಸಿಗತ ಉದ್ಧಟತನ ಕಾರಣವೆಂದು ಹೇಳಲಾಗಿದೆ. ಎರಡು ದಿನದಲ್ಲಿ ಎರಡು ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ತಕ್ಷಣ ಅಲರ್ಟ್ ಆಗಿರುವ ಉತ್ತರ ಕನ್ನಡ ಜಿಲ್ಲಾಡಳಿತ ಪ್ರವಾಸಿಗರ ನಿಯಂತ್ರಣಕ್ಕಾಗಿ ಬೀಚ್ ಪ್ರವೇಶವನ್ನು ನಿರ್ಬಂಧಿಸಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಕಡಲತೀರಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಬೀಚ್ ಪ್ರವೇಶಿಸುವ ಎರಡು ಪ್ರವೇಶದ್ವಾರಗಳನ್ನು ಸಿಬ್ಬಂದಿ ಬಂದ್‌ ಮಾಡಿದ್ದಾರೆ.