ಸುದ್ದಿಬಿಂದು ಬ್ಯೂರೋ
ಕಾರವಾರ
: ಸಕ್ಕರೆ ಇರುವಲ್ಲಿ ಇರುವೆಗಳು ಬಂದು ಮುತ್ತಿಗೆ ಹಾಕುವುದು ಸಹಜ. ಚಿನ್ನದ‌ ಮೊಟ್ಟೆ ಇಡುವ ಕೋಳಿ ಸಿಕ್ಕರೆ ಯಾರು ಬೇಡ ಅನಲ್ಲ. ಹಾಗೆ ಇಲ್ಲಿನ ಚಿತ್ತಾಕುಲ ಪೊಲೀಸ್ ಠಾಣೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳಾಗಿ ಬರುವುದಕ್ಕೆ ಇದೀಗ ಡಜನ್ನುಗಟ್ಟಲೆ ಅಧಿಕಾರಿಗಳು, ಸಿಬ್ಬಂದಿಗಳು ಜನಪ್ರತಿನಿಧಿಗಳ ಎದುರು ಬಂದು ಹಪಾಹಪಿ ಮಾಡುತ್ತಿರುವುದು ಇದೀಗ ಚರ್ಚೆಗೆ ಗ್ರಾಮವಾಗಿದೆ.

ಈಗಾಗಲೇ ರಾಜ್ಯದಲ್ಲಿ ಸರಕಾರ ಬದಲಾಗಿದ್ದು, ಇದರ ಜೊತೆಗೆ ವರ್ಗಾವಣೆ ಪರ್ವ ಸಹ ನಡೆಯಲಿದ್ದು, ಈ ಹಿಂದಿನ ಸರಕಾರದಲ್ಲಿ ಇದ್ದ ಅಧಿಕಾರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗಾವಣೆ ಮಾಡುವುದು ಸಹಜ. ಅದೇ ರೀತಿ ಕಾರವಾರದ ಗಡಿ ಭಾಗವಾಗಿರುವ ಚಿತ್ತಾಕುಲ ಪೊಲೀಸ್ ಠಾಣೆಗೆ ಅಧಿಕಾರಿ ಹಾಗೂ ಸಿಬ್ಬಂದಿಯಾಗಿ ವರ್ಗಾವಣೆ ಆಗಿ ಬರಲು ಈಗಾಗಲೇ ಡಜನ್ನುಗಟ್ಟಲೆ ಅಧಿಕಾರಿಗಳು ತಾಮುಂದೆ ನಾಮುಂದೆ ಎನ್ನುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಲ‌ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಯಾರೆಲ್ಲಾ ಆಪ್ತರಿದ್ದಾರೆ ಎಂದು ಹುಡುಕಾಟ ನಡೆಸಿ ಅವರ ಮೂಲಕ‌ ಒಂದು ವರ್ಷವಾದರೂ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವಂತೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯ ಗಡಿ ಪ್ರದೇಶವಾಗಿರುವ ಮಾಜಾಳಿ ಚೆಕ್ ಪೋಸ್ಟ್ ಮೂಲಕ ನಿತ್ಯವೂ ಗೋವಾ‌ದಿಂದ ಕರ್ನಾಟಕಕ್ಕೆ ಮದ್ಯ ಸಾಗಾಟ ಹಾಗೂ ಕರ್ನಾಟಕದಿಂದ ಗೋವಾಕ್ಕೆ ಅಕ್ರಮ ಮರಳು ಸಾಗಾಟವಾಗುತ್ತದೆ ಎನ್ನಲಾಗಿದ್ದು, ಹೀಗಾಗಿ ಈ ಚಿತ್ತಾಕುಲ ಪೊಲೀಸ್ ಠಾಣೆ ಚಿನ್ನದ ಮೊಟ್ಟೆ ಇಡುವ ಠಾಣೆ ಎಂದೇ ಹೆಸರು ಪಡೆದುಕೊಂಡಿದೆ. ಹೀಗಾಗಿ ಇಲ್ಲಿಗೆ ವರ್ಗಾವಣೆ ಆಗಿ ಬಂದರೆ ಅಕ್ರಮ ತಡೆಯುವುದರ ಜೊತೆ ಒಂದಿಷ್ಟು ಚಿನ್ನದ ಮೊಟ್ಟೆಯನ್ನು ತೆಗೆದುಕೊಂಡು ಹೋಗಬಹುದು ಎನ್ನವ ಲೆಕ್ಕಾಚಾರದಿಂದಲೇ ಈ ಠಾಣೆಗೆ ಬರಲು ಹಪಾಹಪಿ ಮಾಡುತ್ತಾರೆ ಎನ್ನುವ ಚರ್ಚೆಗಳಿವೆ‌.

ಆದರೆ ಇದಾವುದನ್ನು ಜನಪ್ರತಿನಿಧಿಗಳು ತಲೆಗೆ ಹಾಕಿಕೊಳ್ಳುತ್ತಿಲ್ಲ ಎನ್ನಲಾಗಿದ್ದು, ಹೀಗಾಗಿ ಇಲ್ಲಿಗೆ ಬರಲು ಪ್ರಯತ್ನಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಂದಿಷ್ಟು ತಲೆನೋವಾಗಿದ್ದು, ತಮ್ಮ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆನ್ನಲಾಗಿದೆ.