ಶಿರಸಿ: ಯಾವ ಪಕ್ಷವೂ, ಯಾವ ಅಭ್ಯರ್ಥಿಯೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು ಎಂದು ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ ಹಕ್ಕೊತ್ತಾಯ ಮಾಡಿದರು.

ಅವರು ತಾಲೂಕಿನ ಸಾಲಕಣಿ ಭಾಗದಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಭೇಟಿ‌ ಮಾಡಿ ಆಶೀರ್ವಾದ ಪಡೆದು, ಮನೆಮನೆಗೆ ತೆರಳಿ ಚುನಾವಣೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರೇಶ ಮೇಸ್ತಾ ಸಾವನ್ನು ಬಳಸಿಕೊಂಡು ರಾಜಕಾರಣ ಮಾಡಿತು. ಬಿಸಿ ಎಣ್ಣೆಹಾಕಿ ಕೊಂದರು ಎಂದೆಲ್ಲ ಕಾಂಗ್ರೆಸ್ ವಿರುದ್ಧ ಮತದಾರರಲ್ಲಿ ಬಿಂಬಿಸಿತು. ಸಿಬಿಐ ವರದಿ ಬಂದಾಗ ಹೆಣದ ಮೇಲೆ ರಾಜಕೀಯ ಮಾಡಿ ಅಧಿಕಾರ ಹಿಡಿದವರ, ಸತ್ಯ ಹೊರಗೆ ಬಿದ್ದಾಗ ನೈತಿಕವಾಗಿ ಆಯ್ಕೆ ಆದ ಬಿಜೆಪಿ ಶಾಸಕರು ಯಾಕೆ ರಾಜೀನಾಮೆ ನೀಡಲಿಲ್ಲ ಎಂದೂ ಕೇಳಿದರು.

ಹಿಂದೂ ಯುವಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿದರಲ್ಲ? ಅವರು ಎಷ್ಟು ಸಲ ಕೋರ್ಟಗೆ ಅಲೆದಾಟ ಮಾಡಿದರು ಪಾಪ. ಬಿಜೆಪಿಗರ ಸ್ವಾರ್ಥಕ್ಕೆ ಬಡವರು ಬಲಿಪಶು ಆದರು ಎಂದು ಕಳವಳ ವ್ಯಕ್ತಪಡಿಸಿದರು.

ಚುನಾವಣೆ ಕಾಲದಲ್ಲಿ ಈಗ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಬಿಜೆಪಿಗರು ಮಾಡುತ್ತಿದ್ದಾರೆ. ಬಿಜೆಪಿ ತಾನು ಹಿಂದೂ ಪರ ಎನ್ನುತ್ತದೆ. ಹಾಗಿದ್ದರೆ ನಾನು ಹಿಂದೂ ಅಲ್ಲವಾ? ನನ್ನ ಮಟ್ಟಿಗೆ ವ್ಯಕ್ತಿಗೆ ಜಾತಿ‌ ಮುಖ್ಯವಾಗಬಾರದು. ಬದಲಿಗೆ ಮಾನವೀಯತೆ ಮುಖ್ಯ ಆಗಬೇಕು. ಅಧಿಕಾರ ಇರಲಿ, ಬಿಡಲಿ ಜನರ‌ ಸಂಕಷ್ಟಕ್ಕೆ ಆಗುವವನೇ ನಿಜವಾದ ಜನಪ್ರತಿ ನಿಧಿ. ಜನರ ಸಂಕಷ್ಟಕ್ಕೆ ಸರಕಾರದಿಂದ ಮಾತ್ರ ಸ್ಪಂದನೆ ಆಗಬೇಕಿದೆ ಎಂದರೆ ಅಧಿಕಾರಿಗಳು ಮಾಡುತ್ತಾರೆ ಎಂದೂ ಟಾಂಗ್ ನೀಡಿ ಮಾತಿನಲ್ಲಿ ಕರೋನಾ ಕಾಲ ಘಟ್ಟ, ನೆರೆ ಹಾವಳಿ ಸಂದರ್ಭ ಪ್ರಸ್ತಾಪಿಸಿದರು.

ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ ಬಗ್ಗೆ ಬಿಜೆಪಿಗರು ಟೀಕೆ, ಟ್ರೋಲ್ ಮಾಡುತ್ತಾರೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಲ್ಲಿ ಶೇ.೧೦೦ರನ್ನೂ ಅಧಿಕಾರಕ್ಕೆ ಬಂದಾಗ ಪೂರ್ಣಗೊಳಿಸಿದೆ. ಈ ಗ್ಯಾರೆಂಟಿಯೂ ಗ್ಯಾರೆಂಟಿಯೇ ಎಂದರು.

ಅಡಿಕೆಗೆ ಕೊಳೆ ಬಂದು ಅತಿಯಾಗಿ ಸಂಕಷ್ಟದಲ್ಲಿ ಇದ್ದಾಗ ಪ್ರಥಮ ಬಾರಿಗೆ ಪರಿಹಾರ ಕೊಟ್ಟಿದ್ದು ಯಾರು? ಜನತೆಗೆ ಇವೆಲ್ಲ ಕಾಂಗ್ರೆಸ್ ಸರಕಾರ ನೀಡಿದೆ ಎಂಬುದು ನೆನಪಿದೆ. ಆದರೆ, ಬಿಜೆಪಿಗರಿಗೆ ಮೈಲುವತುತ್ತವನ್ನೂ ಸಹಾಯಧನದಲ್ಲಿ ಸರಿಯಾಗಿ ಕೊಡಲಾಗಲಿಲ್ಲ ಎಂದು ವಾಗ್ದಾಳಿ ಮಾಡಿದರು.

ಡಬಲ್ ಇಂಜಿನ್ ಸರಕಾರ ಎನ್ನುವ ಬಿಜೆಪಿಗರು ಇನ್ನೂ ಅಭಿವೃದ್ಧಿ ಮಾಡಬೇಕಿತ್ತು. ಸ್ಪೀಕರ್ ಕಾಗೇರಿ ಅವರು ಅಧಿಕಾರ ತಗೊಂಡಾಗ ಶಿರಸಿ ಕ್ಷೇತ್ರಕ್ಕೆ ಒಂದೊಂದು ಪಂಚಾಯ್ತಿಗೆ ಕನಿಷ್ಠ ೨೫-೩೦ ಕೋ.ರೂ.ಬರುತ್ತದೆ ಅಂದುಕೊಂಡಿದ್ವಿ. ಆದರೆ ಬಂದಿದ್ದು ಸರಾಸರಿ ೮-೧೦ ಕೋ.ರೂ. ಕೇಂದ್ರ ಸರಕಾರ ಅನುದಾನವೂ ಸೇರಿ. ಅದೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರಕ್ಕಿಂತ ಹೆಚ್ಚು ಅನುದಾನ ತಂದ ಶಾಸಕರೇ ಹೆಚ್ಚು ಇದ್ದಾರೆ ಎಂದರು.

ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಕೊಡಲಾಗದೇ ಇದ್ದವರು, ಈಗ ೫೦೦೦ ಮನೆ ಬಂದಿದೆ. ನೀತಿ ಸಂಹಿತೆಯಿಂದ ಬಿಡುಗಡೆ ಆಗಿಲ್ಲ. ಮುಂದೆ ನಮ್ದೇ ಸರಕಾರ ಬರುತ್ತದೆ. ಮಾಡ್ತೇವೆ ಎಂದು ಓಟಿನ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಗರು ಜನರ ದಾರಿ ತಪ್ಪಿಸಬಾರದು ಎಂದರು.

ಈ ವೇಳೆ ಜಿ.ಪಂ.ಮಾಜಿ ಸದಸ್ಯ‌ಜಿ.ಎನ್.ಹೆಗಡೆ‌ ಮುರೇಗಾರ್, ಎಸ್.ಕೆ.ಭಾಗವತ್, ಅರುಣ ಗೌಡ , ಶಶಿಕಲಾ ನಾಯ್ಕ್ ಮತ್ತು ಇತರರು‌ ಇದ್ದರು.