ಕಾರವಾರ : ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಬೃಹತ್ ಪ್ರಚಾರ ಸಭೆಗೆ ಅಂಕೋಲಾದ ಹಟ್ಟಿಕೇರಿ ಬಳಿ ಸಮರೋಪಾದಿಯಲ್ಲಿ ಸಿದ್ಧತೆ ಆರಂಭಗೊಂಡಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ, ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಮತ್ತಿತರರ ನೇತೃತ್ವದಲ್ಲಿ ಶುಕ್ರವಾರ ಭೂಮಿ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಆರೂ ವಿಧಾನಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಅಂಕೋಲಾದ ಹಟ್ಟಿಕೇರಿಯಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಈಗ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಮೋದಿ ಅವರ ಪ್ರಭಾವ, ಶಾಸಕರು ಕೈಗೊಂಡ ಅಭಿವೃದ್ಧಿ ಕಾಮಗಾರಿ ಹಾಗೂ ಮೋದಿ ಅವರನ್ನು ಒಪ್ಪಿಕೊಂಡು ಬರುವ ಲಕ್ಷಾಂತರ ಜನರು ಈ ಬಾರಿ ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ. ರಾಜ್ಯದಲ್ಲೂ 150 ರಷ್ಟು ಸ್ಥಾನ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಮೇ 3 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ದೇವಮಾನವ ನರೇಂದ್ರ ಮೋದಿ ಅವರು ಇಲ್ಲಿಗೆ ಆಗಮಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳ ಜನತೆಯನ್ನುದ್ದೇಶಿಸಿ ಪ್ರಚಾರ ಸಭೆ ನಡೆಸಲಿದ್ದಾರೆ. ಮೋದಿ ಅವರ ಜತೆಗೆ ಬಿ.ಎಲ್.ಸಂತೋಷ, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಹಾಗೂ ಇತರೆಡೆಯ ಸಚಿವರುಗಳು, ಶಾಸಕರುಗಳು, ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಪ್ರಯತ್ನವೂ ನಡೆಯಿತು. ಅದೆಲ್ಲ ಗೊತ್ತಿರುವ ಸಂಗತಿ. ಅಂದು ನಡೆಯಲಿರುವ ಸಮಾವೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿ ಇದೇ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಜಿಲ್ಲೆಯ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಅವರ ಈ ಭೇಟಿ ಕಾರಣವಾಗಲಿದೆ ಎಂಬ ವಿಶ್ವಾಸ ಎಂದರು. ಪಕ್ಷದ ಮುಖಂಡರಾದ ರಾಜೇಂದ್ರ ನಾಯ್ಕ, ಜಗದೀಶ ಮೊಗಟಾ, ಎನ್.ಎಸ್.ಹೆಗಡೆ, ಸಂಜಯ ನಾಯ್ಕ, ಭಾಸ್ಕರ ನಾರ್ವೇಕರ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಈ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಯುತ್ಸಾಹದಲ್ಲಿದ್ದಾರೆ. ಕ್ಷೇತ್ರದ ಪ್ರತಿಯೊಂದು ಮನೆ ಮನೆಯಿಂದಲೂ ಎಲ್ಲ ಜನತೆ ಈ ಸಮಾವೇಶಕ್ಕೆ ಆಗಮಿಸುವಂತೆ ಸ್ವಾಗತಿಸುತ್ತೇನೆ ಎಂದು ಶಾಸಕರು ಹೇಳಿದರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.