ಸುದ್ದಿಬಿಂದು ಬ್ಯೂರೋ
ಕುಮಟಾ
: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಮಾಜಿ‌ ಶಾಸಕಿ ಶಾರದಾ ಶೆಟ್ಟಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯುವ ಕೊನೆ ದಿನವಾದ ಇಂದು ಅವರು ಸಲ್ಲಿಕೆ ಮಾಡಿರುವ ನಾಮಪತ್ರ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.

ಶಾರದಾ ಶೆಟ್ಟಿಯವರ ಕುಟುಂಬ ಕಳೆದ ಮೂರು ದಶಕದಿಂದ ರಾಜಕೀಯವಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ಮೋಹನ್ ಶೆಟ್ಟಿ ಅವರು ಈ ಕ್ಷೇತ್ರದ ಶಾಸಕರಾಗುವ ಮೂಲಕ‌ ಕ್ಷೇತ್ರದ ಅಭಿವೃದ್ಧಿ ಜೊತಗೆ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಬಳಿಕ ಅವರ ಅಕಾಲಿಕ ನಿಧನದ ಬಳಿಕ ಪತ್ನಿ ಶಾರದಾ ಶೆಟ್ಟಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕಿಯಾಗಿದ್ದರು.

ಕಳೆದ ಬಾರಿ ಪರೇಶ್ ಮೇಸ್ತಾ ಸಾವಿನ ಬಳಿಕ ಹಿಂದೂತ್ವದ ಅಲೆಯಲ್ಲಿ ಅವರಿಗೆ ಹಿನ್ನಡೆ ಉಂಟಾಗಿತ್ತು. ಅವರಿಗೆ ಅಷ್ಟೆ ಅಲ್ಲದೆ ಕರಾವಳಿ ಜಿಲ್ಲೆಯಲ್ಲೆ ಕಾಂಗ್ರೆಸ್ ಅಧಿಕಾರವನ್ನ ಕಳೆದುಕೊಂಡಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ ಈ ಬಾರಿಯ ಚುನಾವಣೆಯಲ್ಲಿ ಶಾರದಾ ಮೋಹನ್ ಶೆಟ್ಟಿ ಅವರನ್ನ ಹೊರತು ಪಡಿಸಿ ಉಳಿದವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಕುಮಟಾ ಕ್ಷೇತ್ರದಲ್ಲಿ ಮಾತ್ರ ಸ್ಥಳೀಯರಲ್ಲದೆ ಇರುವ ನಿವೇದಿತ್ ಆಳ್ವ ಅವರಿಗೆ ಪಕ್ಷ ಮಣೆ ಹಾಕಿದೆ. ಇದರಿಂದಾಗಿ ಶಾರದಾ ಶೆಟ್ಟಿ ಅವರು ತಾನು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದರು ಸಹ ಹೊರಗಿನಿಂದ ಬಂದ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡಿದಕ್ಕೆ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಶಾರದಾ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸೇರಿದಂತೆ ರಾಜ್ಯ ಕಾಂಗ್ರೆಸ್ ನ ಹಲವು ಪ್ರಮುಖರು ಶಾರದಾ ಶೆಟ್ಟಿ ಅವರನ್ನ ಸಂಪರ್ಕ ಮಾಡಿ ಮನವಲಿಸುವ ಕೆಲಸ ಮಾಡಿದ್ದರು.ಕಾಂಗ್ರೆಸ್ ನಿಂದ ಸಿಡಿದ್ದೆದಿರುವ ಶಾರದಾ ಶೆಟ್ಟಿ ಅವರು ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವನ್ನ ಸ್ಪಷ್ಟ ಪಡಿಸಲಿದ್ದು, ಬಹುತೇಕ ಅವರು ತಮ್ಮ ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದ್ದು, ಇದೆ ವೇಳೆ ಅವರು ಮುಂದೆ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ.