ಕಾರವಾರ: ಕೇಂದ್ರ ಹಾಗೂ ರಾಜ್ಯದ ಡಬಲ್‌ ಇಂಜಿನ್‌ ಸರ್ಕಾರ ಹಲವಾರು ಅಭಿವೃದ್ಧಿ ಮತ್ತು ಜನೋಪಯೋಗಿ ಕಾರ್ಯವನ್ನು ಮಾಡಿವೆ. ಈ ನಿಟ್ಟಿನಲ್ಲಿ ನಾನೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮಲ್ಲಾಪುರ ಗ್ರಾಮವನ್ನು ಮಾದರಿ ನಗರವನ್ನಾಗಿ ಮಾಡುವ ಕನಸು ನನ್ನದು. ಆದಕ್ಕಾಗಿ ಮತ್ತೊಮ್ಮೆ ಆಶೀರ್ವದಿಸುವಂತೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ರೂಪಾಲಿ ಎಸ್‌.ನಾಯ್ಕ ಕೇಳಿಕೊಂಡರು.

ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಬಳಲೆ, ಹರೂರು, ವಿರ್ಜೆ, ಹರ್ಟೂಗ, ಲಕ್ಷ್ಮೀನಗರ, ಹಿಂದುವಾಡ, ಕೈಗಾವಾಡದಲ್ಲಿ ಭಾನುವಾರ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು. ಈ ಹಿಂದೆ ಮೊದಲ ಬಾರಿಗೆ ಶಾಸಕಳಾಗಿ ಆಯ್ಕೆಯಾದ ತರುವಾಯ ಪ್ರವಾಹ ಅಪ್ಪಳಿಸಿತು ಬಳಿಕ ಕೋವಿಡ್‌ ನಿಂದ ಮತ್ತೆ ಜನರು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಸತತ ಎರಡು ಮೂರು ವರ್ಷ ನನ್ನ ಕ್ಷೇತ್ರದ ಜನತೆ ಸಮಸ್ಯೆಗೆ ಒಳಗಾಗಬೇಕಾಯಿತು. ಇದರ ನಡುವೆ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಬೆಟ್ಟ ಗುಡ್ಡ ಇರುವ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದೇನೆ. ಸೇತುವೆ ಕಾಲುಸಂಕಗಳ ನಿರ್ಮಾಣ ಮಾಡಿದ್ದೇನೆ ಎಂದರು.

ಕೊರೊನಾ ಹಾಗೂ ಪ್ರವಾಹ ಬಂದಾಗ ಜನರೊಟ್ಟಿಗೆ ಇದ್ದು ಅವರ ಕಷ್ಟ ನಿವಾರಣೆಗೆ ನಿಂತಿದ್ದೇನೆ. ನಾವು ಮಾಡುವ ಕಾರ್ಯ ಜನರಿಗೆ ಹಾಗೂ ಆ ಭಗವಂತನಿಗೆ ಮೆಚ್ಚುಗೆಯಾಗಬೇಕು. ಆ ನಿಟ್ಟಿನಲ್ಲಿ ನಾನು ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ಕೂಡ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಅದನ್ನು ಮಾಡಿಯೇ ತೀರುತ್ತೇನೆ ಎಂದರು. ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳು ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ನಡೆದಿದೆ. ಶಿಕ್ಷಣ, ಆರೋಗ್ಯ, ಶಾಂತಿ ಸುವ್ಯವಸ್ಥೆ ಕಾಪಾಡಿದ್ದೇನೆ. ಇಷ್ಟೇಲ್ಲ ಕೆಲಸವನ್ನು ಮಾಡಿದ ಆತ್ಮ ತೃಪ್ತಿ ನನಗಿದೆ. ಮತ್ತೋಮ್ಮೆ ನಿಮ್ಮೆಲ್ಲ ಆಶೀರ್ವಾದ ನನಗೆ ನೀಡಬೇಕು ಎಂದು ಮತಯಾಚನೆ ಮಾಡಿದರು.

ಕ್ಷೇತ್ರದಲ್ಲಿ ಅನೇಕ ಯೋಜನೆಗಳಿಗೆ ಜನತೆ ಜಾಗವನ್ನು ನೀಡಿದ್ದಾರೆ. ಅವರ ಕುಟುಂಬಕ್ಕೆ ಉದ್ಯೋಗ ಒದಗಿಸಲು ಕ್ರಮ ಕೈಗೊಂಡಿದ್ದೇನೆ. ಉದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆ ಸ್ಥಾಪನೆಗೆ ಮಾಡುತ್ತಿದ್ದೇನೆ ಎಂದು ತಾವು ಮಾಡಿರುವ ಕಾರ್ಯವನ್ನು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ ಗುನಗಿ, ಮಲ್ಲಾಪುರ ಪ್ರಮುಖರಾದ ದತ್ತಾರಾಮ ಬಾಂದೇಕರ, ವಿಕೇಶ ಬಾಂದೇಕರ, ಶಾಂತಾ ಬಾಂದೇಕರ, ಗೋವಿಂದ ಮಿರಾಶಿ, ರಮೇಶ ಗೌಡ, ರಾಜೇಶ ಗಾಂವಕರ, ನರೇಶ್, ಸಂಜಯ, ಸತೀಶ, ವಾರ್ಡ್‌ ಸದಸ್ಯರು, ಪದಾಧಿಕಾರಿಗಳು, ಬೂತ್‌ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.