ಬನವಾಸಿ : ಏಪ್ರಿಲ್ 23: ಬನವಾಸಿ ಕಾಂಗ್ರೆಸ್‌ ಘಟಕ ಅಧ್ಯಕ್ಷರಾದ ದೀಪಕ್‌ ಬೇಂಗ್ಲೆ ಅವರು ಸ್ಥಳೀಯ ಕಾಂಗ್ರೆಸ್‌ ನಾಯಕರ ನಡವಳಿಕೆಗೆ ಬೇಸತ್ತು ನೂರಾರು ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಯುವ ನಾಯಕ ವಿವೇಕ್‌ ಹೆಬ್ಬಾರ್‌ ಅವರು, ಕಾಂಗ್ರೆಸ್ ತೊರೆದ ಕಾರ್ಯಕರ್ತರಿಗೆ ಭಾರತೀಯ ಜನತಾ ಪಕ್ಷದ ಶಾಲು ಹಾಕಿ ಅತ್ಯಂತ ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೀಪಕ್‌ ಬೇಂಗ್ಲೆ ಅವರು, ಕಾಂಗ್ರೆಸ್‌ ನಲ್ಲಿ ನಮ್ಮ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕಡೆಗಣಿಸಲಾಗುತ್ತಿತ್ತು. ಬೇರೆ ಪಕ್ಷದಿಂದ ವಲಸೆ ಬಂದಿರುವ ವಿ ಎಸ್‌ ಪಾಟೀಲ್‌ ಅವರು, ಮೂಲ ಕಾರ್ಯಕರ್ತ ರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಇದರಿಂದ ಬೇಸತ್ತು ಅಪಾರ ಬೆಂಬಲಿಗರೊಂದಿಗೆ ನಾವೆಲ್ಲ ಬಿಜೆಪಿ ಸೇರಿದ್ದೇವೆ ಎಂದು ಹೇಳಿದರು.

ಯುವ ನಾಯಕರಾದ ವಿವೇಕ್‌ ಹೆಬ್ಬಾರ್‌ ಅವರು ಮಾತನಾಡಿ, ” ಭಾರತೀಯ ಜನತಾ ಪಕ್ಷಕ್ಕೆ ಬೇರೆ ಪಕ್ಷಗಳಿಂದ ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರುತ್ತಿದ್ದಾರೆ. ಇದರಿಂದ ಬಿಜೆಪಿ ಮೇಲಿನ ಜನರ ವಿಶ್ವಾಸ ಹೆಚ್ಚುತ್ತಿದೆ. ದೀಪಕ್‌ ಬೇಂಗ್ಲೆ ಅವರು ನಮ್ಮ ಪಕ್ಷಕ್ಕೆ ಬಂದಿರುವುದು ಅಪಾರ ಬಲ ತಂದಿದೆ. ಬನವಾಸಿ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ. ದೀಪಕ್‌ ಬೇಂಗ್ಲೆ ಅವರು ಅತ್ಯಂತ ಪ್ರಾಮಾಣಿಕ ಕಾರ್ಯಕರ್ತರಾಗಿದ್ದು, ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಅವರಿಗೆ ಅಲ್ಲಿ ಬೆಲೆ ನೀಡಿಲ್ಲ. ಸ್ಥಾನ ನೀಡಲಿಲ್ಲ. ಇದರಿಂದ ಆ ಪಕ್ಷದಲ್ಲಿನ ಒಳ ಜಗಳ ತಿಳಿಯುತ್ತದೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿರುವ ವಿ ಎಸ್‌ ಪಾಟೀಲ್‌ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿದ್ಧು ನರೇಗಲ್, ಅರವಿಂದ ತೇಲಗುಂದ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಶಿವಕುಮಾರ ಗೌಡ್ರು, ರಾಜು ಗೌಡ್ರು, ರುದ್ರ ಗೌಡ್ರು, ದತ್ತು ಭಟ್, ವಿನಯ ಗೌಡ್ರು, ಶ್ರೀರಾಮ ನಾಯ್ಕ ಹಾಗೂ ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.