ಕುಮಟಾ : ಇತ್ತೀಚೆಗೆ ನಡೆದ ರಾಜ್ಯ ಕಾಂಗ್ರೆಸ್ ಬೆಳವಣಿಗೆಯಲ್ಲಿ ಕುಮಟಾ ಕಾಂಗ್ರೆಸ್ ಟಿಕೆಟಿಗೆ ನಿವೇದಿತ್ ಆಳ್ವಾರ ಹೆಸರು ಅಂತಿಮಗೊಂಡಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದಾಗಿ ಕುಮಟಾ ಕಾಂಗ್ರೆಸ್ಸಲ್ಲಿ ಸ್ಮಶಾನ ಮೌನ ಆವರಿಸಿದೆ.

ರಾಜಧಾನಿ ಬೆಂಗಳೂರಲ್ಲಿ ಕೂತ 11 ಕಾಂಗ್ರೆಸ್ ಮುಖಂಡರಲ್ಲಿ 9 ಮುಖಂಡರು ನಿವೇದಿತ್ ಆಳ್ವಾ ಹೆಸರು ಹೇಳಿದರೆ, ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ಆರ್. ವಿ. ದೇಶಪಾಂಡೆ ಮಾತ್ರ ಮಾಜಿ ಶಾಸಕಿ ಶಾರದಾ ಶೆಟ್ಟಿ ಹೆಸರು ಹೇಳಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಇಲ್ಲಿವರೆಗೆ ಕೆಲ ಟಿಕೆಟ್ ಆಕಾಂಕ್ಷಿಗಳು ತಮಗೇ ಟಿಕೆಟ್ ಸಿಗುತ್ತದೆ ಎಂದು ಭರವಸೆಯಲ್ಲಿದ್ದರು. ಆದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡೆ, ಸೋನಿಯಾ ಗಾಂಧಿಯ ಆಪ್ತೆ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಹೆಸರು ಕುಮಟಾ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಕೇಳಿ ಬಂದ ಕ್ಷಣದಿಂದ ಪಕ್ಷಕ್ಕೆ 2 ಲಕ್ಷ ರೂಪಾಯಿ ಕೊಟ್ಟು ಉಮೇದುವಾರಿಕೆ ಸಲ್ಲಿಸಿದ್ದ ಅನೇಕರು ಮಂಕಾಗಿದ್ದಾರೆ.

ಇಲ್ಲಿವರೆಗೆ ಕುಮಟಾದ ಆಕಾಂಕ್ಷಿಗಳು ಪಕ್ಷದಲ್ಲಿರುವ ತಮ್ಮ ಗಾಡ್ ಫಾದರ್ ನೆರಳಲ್ಲಿ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದರು. ಆದರೆ ಯಾವಾಗ ನಿವೇದಿತ್ ಆಳ್ವಾ ಹೆಸರು ಬಿರುಗಾಳಿಯಂತೆ ನುಸುಳಿತೋ ಉಳಿದ ಆಕಾಂಕ್ಷಿಗಳು ಮೌನಕ್ಕೆ ಶರಣಾಗಿದ್ದಾರೆ. ಯಾಕೆಂದರೆ ಅಮ್ಮ ಮಾರ್ಗರೆಟ್ ಸೋನಿಯಾಗೆ ಆಪ್ತೆಯಾದರೆ, ಮಗ ನಿವೇದಿತ್ ರಾಹುಲ್ ಗಾಂಧಿಗೆ ಆಪ್ತನಾಗಿರುವುದು ಎಲ್ಲರ ಟಿಕೆಟ್ ಆಸೆಗೆ ತಣ್ಣೀರೆರಚಿದಂತಾಗಿದೆ.

ಈಗಲೇ ಟಿಕೆಟ್ ಇಂತವರಿಗೆ ಎಂದು ಹೇಳಲು ಕಾಲ ಪಕ್ವವಾಗಿಲ್ಲ. ಆಕಾಂಕ್ಷಿಗಳ ಹಗ್ಗಜಗ್ಗಾಟ ಈಗಲೂ ಮುಂದುವರಿದೇ ಇದೆ. ಆದರೆ ಕುಮಟಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ ಗೊಂದಲ ತಪ್ಪಿಲ್ಲ.