ಕುಮಟಾ : ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ ಸದಸ್ಯನ ಮೈಮೇಲೆ ಇಬ್ಬರು ಮಹಿಳೆಯರು `ಮಲ’ ಎಸೆದು ಅಪಮಾನ ಮಾಡಿರುವ ಘಟನೆ ಹೊಲನಗದ್ದೆ ಗ್ರಾಮ ಪಂಚಾಯತ್ ಎದುರಿನ ರಸ್ತೆಯಲ್ಲಿ ನಡೆದಿದೆ.
ಹೊಲನಗದ್ದೆ ಗ್ರಾಮ ಪಂಚಾಯತದ ಕಡ್ಲೆ ವ್ಯಾಪ್ತಿಯ ಸದಸ್ಯ, ಕುಮಟಾ ಶಾಸಕರ ಆಪ್ತ ಹಾಗೂ ಖ್ಯಾತ ಉದ್ಯಮಿಯೂ ಆಗಿರುವ ವ್ಯಕ್ತಿಯ ಮೇಲೆ ಈ ಕೃತ್ಯ ಎಸೆಗಲಾಗಿದೆ. ಇಂದು (ಶನಿವಾರ) ಗ್ರಾಮ ಪಂಚಾಯತದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಗೆ ಹಾಜರಾಗಲು ಕಡ್ಲೆ ವಾರ್ಡ್ ಸದಸ್ಯ ತನ್ನ ಕಾರಲ್ಲಿ ಬರುತ್ತಿದ್ದರು.
ಆತ ತನ್ನ ಕಾರನ್ನು ಪಂಚಾಯತ್ ಎದುರು ರಸ್ತೆಯಲ್ಲಿ ನಿಲ್ಲಿಸಿ ಇನ್ನೇನು ಗ್ರಾಮ ಪಂಚಾಯತ್ ಒಳ ಪ್ರವೇಶಿಸಬೇಕು ಎನ್ನುತ್ತಿರುವಾಗ ಅಲ್ಲಿಗೆ ಬಂದ ಮಹಿಳೆಯರು ಪಂಚಾಯತ್ ಸದಸ್ಯನ ಮೈಮೇಲೆ ಮಲ ಎಸೆದಿದ್ದಾರೆ ಎನ್ನಲಾಗಿದೆ. ತಕ್ಷಣ ಸದಸ್ಯ ತನ್ನ ಕಾರಲ್ಲೇ ಕುಮಟಾ ಪೆÇಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮಹಿಳೆಯರ ಪ್ರತಿದೂರು
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಹೊಲನಗದ್ದೆ ಪಂಚಾಯತದ ಕಡ್ಲೆ ವಾರ್ಡಿನ ಸದಸ್ಯ ಏಕಾಏಕಿಯಾಗಿ ನಮ್ಮ ಕೈ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಪಯತ್ನಿಸಿದರೂ ಆಗಿಲ್ಲ. ಆಗ ಕೈಯಿಂದ ಮಣ್ಣನ್ನು ಬಾಚಿ ಹೊಡೆಯಬೇಕು ಎಂದು ಮಣ್ಣನ್ನು ತೆಗೆದುಕೊಂಡು ಅವರ ಮುಖಕ್ಕೆ ಎಸೆಯುವಾಗ ಅದರಲ್ಲಿ ಕೆಸರು ಇದ್ದಿರಬಹುದು ಎಂದು ಮಹಿಳೆಯರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಪಂಚಾಯತ್ ಸದಸ್ಯ ಮತ್ತು ಮಹಿಳೆಯರ ನಡುವಿನ ವೈಯಕ್ತಿಕ ದ್ವೇಷವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಪಂಚಾಯತ್ ಸದಸ್ಯ ಕೂಡ ಸಾಚಾನಲ್ಲ, ಆಗಾಗ ಕಿತಾಪತಿ ಮಾಡುತ್ತಿದ್ದ ಕಾರಣಕ್ಕೆ ಈ `ಮಲ ಎರಚಾಟ’ ಎಂಬ ದುರ್ಘಟನೆ ನಡೆದಿದೆ ಎಂದು ಹೇಳುವುದನ್ನು ಸ್ಥಳೀಯರು ಮರೆಯಲಿಲ್ಲ. ಖುದ್ದು ಶಾಸಕರೇ ಈ ಪ್ರಕರಣದಲ್ಲಿ ಮೂಗು ತೂರಿಸಿದ ಪರಿಣಾಮ ಪೊಲೀಸರು ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಪ್ರಕರಣ ಅಸ್ಪಷ್ಟವಾಗೇ ಉಳಿದಿದೆ.