ಕಾರವಾರ: ಮರಳಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಇಂದಿನಿಂದ ಸಿವಿಲ್ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ಸಂಘಗಳು ತೆಗೆದುಕೊಂಡಿದ್ದ ನಿರ್ಣಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಎರಡು ದಿನಗಳಲ್ಲಿ ಈ ಬಗ್ಗೆ ಗಣಿ ಇಲಾಖೆಯೊಂದಿಗೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿರುವ ಹಿನ್ನಲೆಯಲ್ಲಿ ಅವರ ಸಭೆಯ ಬಳಿಕ ಸಭೆ ಸೇರಿ ಕಾಮಗಾರಿ ಸ್ಥಗಿತದ ನಿರ್ಧಾರ ಕೈಗೊಳ್ಳುವ ಬಗ್ಗೆ ಗುತ್ತಿಗೆದಾರರು ತೀರ್ಮಾನಿಸಿದ್ದಾರೆ.

ಇಂದಿನಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸುವುದಾಗಿಯೂ ಹಾಗೂ ಮರಳಿನ ಸಮಸ್ಯೆಯ ಬಗೆಗಿನ ಜಿಲ್ಲಾಡಳಿತದ ನಿಲುವಿನ ಬಗ್ಗೆ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಅವರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳನ್ನು ತೆಗೆದರೆ ಅದನ್ನು ಮಾರಾಟ ಮಾಡುವಂತಿಲ್ಲ. ಹೀಗಾಗಿ ತೆಗೆಯುವುದಾದರೆ ತೆಗೆದ ಮರಳನ್ನು ಎಲ್ಲಿ ಸಂಗ್ರಹಿಸುತ್ತೀರಿ ಎಂದು ರಾಜ್ಯ ಸಿಆರ್‌ಝೆಡ್ ಸಮಿತಿಗೆ ಕೇಳಿದ್ದಾರಂತೆ. ನಮಗೆ ಈ ಬಗ್ಗೆ ಕೇಳಿದರೆ ನಾವು ಜಾಗಗಳನ್ನು ತೋರಿಸುತ್ತೇವೆ. ಆದರೆ ಮೊದಲು ಮರಳು ತೆಗೆಯಲು ಅವಕಾಶ ನೀಡಬೇಕಿದೆ. ಒಮ್ಮೆ ತೆಗೆಯಲು ಅವಕಾಶ ನೀಡಿದರೆ ದಾಸ್ತಾನು ಮಾಡಲು ಅನುಕೂಲವಾಗುತ್ತದೆ. ನಂತರ ಬೇಕಿದ್ದರೆ ಅದನ್ನು ಅನುಮತಿ ನೀಡಿದ ಬಳಿಕ ವಿಲೆ ಮಾಡಬಹುದು ಎಂದರು.

ಮರಳು ತೆಗೆಯದಿದ್ದರೆ ದಿಬ್ಬಗಳಾಗಿ ನದಿಯಲ್ಲಿ ಸಂಗ್ರವಾಗುತ್ತದೆ. ಮಳೆಗಾಲದಲ್ಲಿ ನೀರು ಹರಿಯದೆ ದಿಬ್ಬಗಳನ್ನು ಒಡೆದು ಕೊಡುವುದು ಎಲ್ಲೆಡೆ ನಡೆಯುತ್ತದೆ. ಹೀಗಾಗಿ ಮರಳು ತೆಗೆಯಲು ಅವಕಾಶ ನೀಡಬೇಕು. ಇದರಿಂದ ಮುಂದೆ ಪ್ರವಾಹ ಉಂಟಾಗುವ ಸಾಧ್ಯತೆಯೂ ಇದೆ ಎಂದು ಮಾಧವ ನಾಯಕ ಅವರು ಗಮನಕ್ಕೆ ತಂದಾಗ, ನಮ್ಮ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುವುದಿದ್ದರೆ ತೆಗೆದುಕೊಳ್ಳಬಹುದಿತ್ತು.

ಆದರೂ ಮರಳು ತೆಗೆಯುವುದರ ಅನಿವಾರ್ಯತೆಯ ಕುರಿತು ಕಾರಣಗಳನ್ನಿಟ್ಟು ಸಿಆರ್‌ಝೆಡ್ ರಾಜ್ಯ ಸಮಿತಿಗೆ ಸ್ಪಷ್ಟನೆ ಕೊಡಲಿದ್ದೇನೆೆ. ಮತ್ತು ತಾನು ಬೆಂಗಳೂರಿನಲ್ಲಿಯೇ ಇದ್ದೇನೆ ಈ ಬಗ್ಗೆ ನಾಳೆ ಚುನಾವಣಾ ಸಭೆ ಮುಗಿದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭೇಟಿ ನೀಡಿ ಚರ್ಚಿಸಿ ತಿಳಿಸುತ್ತೇನೆ, ಆದರೆ ಈವರೆಗೆ ಸಮಿತಿ ನಮಗೆ ಯಾವುದೇ ಪ್ರತಿಕ್ರಿಯೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎರಡು ದಿನಗಳವರೆಗೆ ತಾಳ್ಮೆಯಿಂದ ಕಾದು ನಂತರ ನಿಮ್ಮ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.