ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರಿ ಯಾವುದೇ ಪಾತ್ರವನ್ನಾದರೂ ನಿಭಾಯಿಸಲು ಸಿದ್ಧರು. 325ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ ಮ ನಟಿ ಉಮಾಶ್ರಿ, ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪುಟ್ಟಕ್ಕನ ಪಾತ್ರದ ಮೂಲಕ ಕಿರುತೆರೆಯನ್ನು ಆಳುತ್ತಿದ್ದಾರೆ. ಪುಟ್ಟಕ್ಕ ನಕ್ಕರಡ ಪ್ರೇಕ್ಷಕರು ನಗುತ್ತಾರೆ, ಪುಟ್ಟಕ್ಕ ಅತ್ತರೆ ಪ್ರೇಕ್ಷಕರು ಅಳುತ್ತಾರೆ. ಉಮಾಶ್ರಿ ಆ ಪಾತ್ರಕ್ಕೆ ಜೀವ ತುಂಬಿದ್ದು, ಯಾವುದೇ ಪಾತ್ರ ಸ್ವೀಕರಿಸಿದರೂ ಅದಕ್ಕೆ ಶತಕೋಟಿ ನ್ಯಾಯ ನೀಡುವ ಹಾದಿಯಲ್ಲಿ ನಿಂತಿದ್ದಾರೆ.
ರಂಗಭೂಮಿ, ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಭಾರೀ ಯಶಸ್ಸು ಸಾಧಿಸಿದ ಉಮಾಶ್ರಿ, ನಟನೆಯತ್ತ ಮತ್ತೊಂದು ಹೆಜ್ಜೆ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಕ್ಷಗಾನ ರಂಗಕ್ಕೆ ಪ್ರವೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರಿ ಮೊದಲ ಬಾರಿಗೆ ಚಂಡೆಯ ಮಾರ್ದನಿಗೆ ಹೆಜ್ಜೆ ಹಾಕಿದ್ದಾರೆ.
ಮಂಥರೆ ಪಾತ್ರದಲ್ಲಿ ಮಿಂಚಿದ ಉಮಾಶ್ರಿ ಅವರ ನಟನೆ, ಕುಣಿತ ಮತ್ತು ಮಾತುಗಳನ್ನು ನೋಡಿ, ಇದು ಅವರ ಮೊದಲ ಯಕ್ಷಗಾನ ಪ್ರದರ್ಶನ ಅಂತಾ ಪ್ರೇಕ್ಷಕರಿಗೆ ಎಲ್ಲೂ ಅನುಮಾನವೇ ಬಂದಿಲ್ಲ.ಮಂಥರೆಯಾಗಿ ರಂಗಮಂಚದಲ್ಲಿರುವ ಉಮಾಶ್ರಿ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಟಿಯು ತನ್ನ ಮೊದಲ ಯಕ್ಷಗಾನ ಪ್ರದರ್ಶನದ ಕುರಿತು ಮಾತನಾಡುತ್ತಾ, ‘ಸುಬ್ರಮಣ್ಯ ಚಿಟ್ಟಾಣಿ ಅವರು ಬಂದು ನನಗೆ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲು ಕೇಳಿದರು. ನಾನು ಇದನ್ನು ಹಿಂದೆ ಎಂದಿಗೂ ಮಾಡಿಲ್ಲ. ಕಷ್ಟವಾಗುತ್ತದೆ, ಹೀಗಾಗಿ ಮಾಡುವುದಿಲ್ಲ ಎಂದೆ. ಆದರೆ ರಾಮಚಂದ್ರ ಚಿಟ್ಟಾಣಿ ಅವರು ಮಂಥರೆಯ ಪಾತ್ರ ನಾನು ಮಾಡಬೇಕು ಎಂದು ಬಯಸಿದ್ದರು. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಆ ಪಾತ್ರ ಮಾಡಿದೆ,’ ಎಂದು ಹೇಳಿದ್ದಾರೆ. ಸದ್ಯ, ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿರುವ ಉಮಾಶ್ರಿ ಅವರನ್ನು ಯಕ್ಷಾಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ