ಒಮ್ಮೆ ಅವಕಾಶ ಪಡೆದವರು ಅದೃಷ್ಟವಂತರಾಗಿರಬಹುದು .ಆದರೆ ಮತ್ತೆ ಮತ್ತೆ ಅವಕಾಶ ಪಡೆದವರು ಸಾಮರ್ಥ್ಯ ಉಳ್ಳವರು. ಯಾಕೆಂದರೆ ಪಡೆದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾದವರಿಗೆ ಮಾತ್ರ ಮತ್ತೆ ಮತ್ತೆ ಅವಕಾಶಗಳು ಬರಲು ಸಾಧ್ಯ.

ಹೀಗೆ ತಮ್ಮ ಸುದೀರ್ಘ 30 ವರ್ಷಗಳ ಸೇವಾ ಅವಧಿಯಲ್ಲಿ 17 ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿಯೇ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಾ ಸಿಆರ್ ಪಿ ಯಾಗಿ, ಬಿ ಆರ್ ಪಿ ಯಾಗಿ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಐಇಆರ್ ಟಿ ಯಾಗಿರುವ ಪ್ರಾಮಾಣಿಕ ಕೆಲಸಗಾರ ಶ್ರೀಯುತ ವಿನಾಯಕ್ ಎಲ್ ನಾಯ್ಕ .

ಉತ್ತಮ ಕೆಲಸಕ್ಕೆ ನೀಡುವ ಬಹುಮಾನ ಎಂದರೆ, ಹೆಚ್ಚಿನ ಕೆಲಸ ನೀಡುವುದು “ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲಬಲ್ಲಂಥ ವಿನಾಯಕ ನಾಯ್ಕ ರವರಿಗೆ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ (ರಿ)ಬೆಂಗಳೂರು ಇವರು 2024 ನೇ ಸಾಲಿನ ರಾಜ್ಯ ಮಟ್ಟದ “ಶಿಕ್ಷಣ ನಿರ್ಮಾತೃ ” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನಾರ್ಹ .

1994ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ತಾಲೂಕಾದ ಜೋಯಿಡಾದ ಕುಗ್ರಾಮದಲ್ಲಿ ತಮ್ಮ ಶಿಕ್ಷಕ* *ವೃತ್ತಿ ಪ್ರಾರಂಭಿಸಿದ ಇವರು ಎಂ.ಎ, ಬಿ.ಎಡ್ ಪದವೀಧರರು.ಜೊತೆಗೆ ಸಮನ್ವಯ ಶಿಕ್ಷಣದಲ್ಲಿ ವಿಶೇಷ ಬಿ ಎಡ್ ಪದವಿ ಪಡೆದ ರಾಜ್ಯದ ಕೆಲವೇ ಕೆಲವು ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ.

1998ರಿಂದ 2005 ರವರೆಗೆ.. ಹೊನ್ನಾವರ ತಾಲ್ಲೂಕಿನ ಮಂಕಿ ಯ.. ಸ. ಹಿ. ಪ್ರಾ. ಶಾಲೆಯಲ್ಲಿ.. ಶಿಕ್ಷಕರಾಗಿ.. ಪ್ರಭಾರೆ ಮುಖ್ಯಾಧ್ಯಾ ಧ್ಯಪಕರಾಗಿ.. ಸೇವೆ ಸಲ್ಲಿಸಿದ ಇವರು. ಶಾಲೆಯ ಭೌತಿಕ ಸ್ಥಿತಿ ಸುಧಾರಣೆಗಾಗಿ.. SSA ಅನುದಾನದಿಂದ.. ಶೌಚಾಲಯ.. ಕುಡಿಯುವ ನೀರಿನ ಸೌಲಭ್ಯ.. ತರಗತಿ ಕೊಠಡಿ ನಿರ್ಮಾಣ.. ಶಾಲಾ ಕೈತೋಟ ಇತ್ಯಾದಿ ಸೌಲಭ್ಯ ಗಳನ್ನು.. SDMC.. ಸಮೂದಾಯದ ಸಹಕಾರದಲ್ಲಿ ಒದಗಿಸಿದವರು.. ಅಲ್ಲದೇ ಶಾಲೆಯಲ್ಲಿ ಪ್ರಾರಂಭ ದಲ್ಲಿ ಮಕ್ಕಳ ಸಂಖ್ಯೆ 48 ಇದ್ದು.. 153.ಕ್ಕೆ ಹೆಚ್ಚಿಸಿದ್ದು.. 7ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ. ಸತತವಾಗಿ ಶೇ. 100 ಫಲಿತಾಂಶ ಬಂದಿದ್ದು.. ಇತ್ಯಾದಿ ಗುಣಮಟ್ಟದ ಶಿಕ್ಷಣಕ್ಕೆ ಗರಿಷ್ಠ ಪ್ರಯತ್ನ ಮಾಡಿದ ಸಾಧಕ.

ಪ್ರಸ್ತುತ ಕುಮಟಾ ತಾಲ್ಲೂಕಿನಲ್ಲಿ BIERT ಯಾಗಿ ತಾದಾತ್ಮ ಭಾವನೆಯಿಂದ ಕಾರ್ಯನಿರ್ವಹಿಸಿ ಮಾದರಿಯಾಗಿ ನಿಂತಿರುವ ಇವರು ಕೇವಲ ಸಮನ್ವಯ ಶಿಕ್ಷಣಕಷ್ಟೇ ಸೀಮಿತವಾದವರಲ್ಲ ; ಸಮರ್ಥ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡವರು. ತಾಲೂಕಿನಲ್ಲಿ ಅಷ್ಟೇ ಏಕೆ ಉತ್ತರ ಕನ್ನಡ ,ಶಿರಸಿ, ಧಾರವಾಡ ಡಯಟ್ ಗಳಲ್ಲಿ ನಡೆದ ಶಿಕ್ಷಕರ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವುದು ಇವರ ಹೆಗ್ಗಳಿಕೆ. ಹೊನ್ನಾವರ ತಾಲೂಕಿನಲ್ಲಿ ಬಿ ಆರ್ ಪಿ ಯಾಗಿ, ಸಿಆರ್ ಪಿ ಯಾಗಿ ಶಿಕ್ಷಕರ ನೂರಾರು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಜ್ಞಾನ ಸಂಪನ್ಮೂಲವನ್ನು ಧಾರೆ ಎರೆದಿದ್ದಾರೆ.
ಶಿಕ್ಷಕರೊಂದಿಗೆ ಆಪ್ತ ಸಂಬಂಧ ಹೊಂದುವುದರ ಜೊತೆಗೆ ಇಲಾಖೆಗೂ ಹೆಸರು ತಂದಿದ್ದಾರೆ.

ಶಿಕ್ಷಕರೊಬ್ಬರು ಬಿ ಆರ್ ಪಿ , ಸಿ ಆರ್ ಪಿ ಹಾಗೂ ಬಿ ಐ ಈ ಆರ್ ಟಿ ಈ ಮೂರೂ ಹುದ್ದೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ರಾಜ್ಯದಲ್ಲಿಯೇ ಇದು ಮೊದಲ ಉದಾಹರಣೆ ಎನ್ನಬಹುದು .ನಲಿ ಕಲಿ ,ನಿಷ್ಠಾ,ಶಾಲಾ ಸಿದ್ಧಿ ,ಕಲಿಕಾ ಚೇತರಿಕೆ,ಮೌಲ್ಯ ಶಿಕ್ಷಣ ಸೇರಿದಂತೆ ಹತ್ತು ಹಲವು ತರಬೇತಿಯನ್ನು ರಾಜ್ಯ ಹಂತದಿಂದ ಪಡೆದು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ನೀಡಿದ ಇವರ ಪಾಂಡಿತ್ಯ ಮೆಚ್ಚುಗೆ ಪಡೆದಿದೆ .ರಾಜ್ಯ ಯೋಜನಾ ನಿರ್ದೇಶಕರಾಗಿದ್ದ ಪಲ್ಲವಿ ಅಕುರಾತಿಯವರಿಂದ ಪ್ರಶಂಸನಾ ಪ್ರಮಾಣ ಪತ್ರ ಪಡೆದ ಧನ್ಯತಾಭಾವ* *ಹೊಂದಿರುವ ಇವರು ಸರಳರೂ ಹೌದು ಸಜ್ಜನರೂ ಹೌದು ಎಂಬುದು ಶಿಕ್ಷಕರ ವಲಯದ ಮಾತಾಗಿದೆ .

ಬೋಧನಾ ಕೌಶಲ್ಯ ವೃದ್ಧಿಗಾಗಿ ಹಲವು ಪ್ರಾತ್ಯಕ್ಷಿಕೆ ನೀಡಿದ ನಿದರ್ಶನಗಳಿವೆ.
ನಲಿ ಕಲಿ ,ಬೆಳ್ಳಿಚುಕ್ಕಿ,ಸಂಭ್ರಮ, ನಲಿಕಲಿ ಸಮಗ್ರ ಮುಂತಾದ ತರಬೇತಿ ಸಾಹಿತ್ಯ ರಚನೆಯಲ್ಲಿ ಹಾಗೂ ಪರಿಷ್ಕರಣೆಯಲ್ಲಿ ಇವರ ಪಾತ್ರವಿದೆ. ಶಿಕ್ಷಣ ಇಲಾಖೆಯ ವಿವಿಧ* *ಕಾರ್ಯಕ್ರಮಗಳಿಗೆ ಬ್ಲಾಕ್ ಹಂತದ ನೋಡೆಲ್ ಅಧಿಕಾರಿಯಾಗಿ ಹಾಗೂ ಸಹಾಯವಾಣಿಯಾಗಿ ಕಾರ್ಯನಿರ್ವಹಿದ್ದಾರೆ. ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಸಮನ್ವಯ ಶಿಕ್ಷಣ ತರಬೇತಿಯನ್ನು ಒಂದು ಸಾವಿರ ಶಿಕ್ಷಕರಿಗೆ ನೀಡಿದ ಹೆಮ್ಮೆ.

ವಿಶೇಷ ಚೇತನರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ದಾನಿಗಳ ನೆರವಿನಿಂದ ಒದಗಿಸಿ ಶಾಲಾ ಸಿದ್ಧತಾ ಕೇಂದ್ರದಲ್ಲಿ ಅವುಗಳ ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ. ಶಿಕ್ಷಣ ಇಲಾಖೆಯಿಂದ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ವಿಶೇಷ ಚೇತನ ಮಕ್ಕಳಿಗೆ ಸಿಗುವ ಎಲ್ಲ ರೀತಿಯ ನೆರವು ಒದಗಿಸಿ ಅಂತಹ ಮಕ್ಕಳ ಪಾಲಿಗೆ ಆಪದ್ಬಾಂಧವರಾಗಿದ್ದಾರೆ.ತೀವ್ರತರ ಅನಾರೋಗ್ಯಕ್ಕೆ ಈಡಾದ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕಂಡುಬಂದಲ್ಲಿ ವೈಯಕ್ತಿಕವಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಸಂಬಂಧಿಸಿದ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಶಸ್ತ್ರ ಚಿಕಿತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಟ್ಟು 87 ದೃಷ್ಟಿ ದೋಷ ಹೊಂದಿದ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕುಮಟಾದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿ ಚಿಕಿತ್ಸೆ ಕೊಡಿಸಿದ ಸಾರ್ಥಕತೆ ಇವರಿಗಿದೆ. ಕುಮಟಾದ ಕಮಲಾ* *ಬಾಳಿಗ ಮಹಾವಿದ್ಯಾಲಯ ಇವರನ್ನು ಉತ್ತಮ ಬಿ ಐ ಇ ಆರ್ ಟಿ ಎಂದು ಗೌರವಿಸಿದೆ.ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ, ಅಜಾತಶತ್ರುವಿಗೆ ಇದೀಗ ಸೂರ್ಯವ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ (ರಿ)ಬೆಂಗಳೂರು ಇವರು 2024 ನೇ ಸಾಲಿನ ” ಶಿಕ್ಷಣ ನಿರ್ಮಾತೃ ” ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಪ್ರಾಮಾಣಿಕ ಕೆಲಸಕ್ಕೆ ಸಂದ ಗೌರವವಾಗಿದೆ.

ಗಮನಿಸಿ