ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಅನೇಕರು ಸಾವನಪ್ಪಿದ್ದು, ಅದರಲ್ಲಿ ಅನೇಕರ ಶವ ಸಿಕ್ಕರೆ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಎನ್ನುವವರ ಶವ ಇನ್ನೂ ಸಿಕ್ಕಿಲ್ಲ. ಹಾಗಾಗಿ ಈ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಆಗ್ರಹಿಸಿ ಕುಮಟಾ ತಾಲೂಕಾ ಯುವ ನಾಮಧಾರಿ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಕುಮಟಾ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಐ.ಆರ್.ಬಿ. ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸುವುದರ ಜೊತೆಗೆ ಈ ದುರ್ಘಟನೆಯಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕರ ಶವ ಹುಡುಕಾಟಕ್ಕೆ ತುರ್ತು ಕ್ರಮಕೈಗೊಂಡು ದುರಂತ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿಸಬೇಕು ಮತ್ತು ನೊಂದವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕುಮಟಾ ತಹಶೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿದ ಸತೀಶ ಗೌಡರು, “ಸರ್ಕಾರಿ ನಿಯಮದಂತೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ” ಎಂದು ತಿಳಿಸಿದರು. ಯುವ ನಾಮಧಾರಿ ಸಂಘದ ನಿರ್ದೇಶಕ ಯೋಗಿ ನಾಯ್ಕ ಮನವಿಯನ್ನು ಓದಿದರು.
ಈ ಸಂದರ್ಭ ಯುವ ನಾಮಧಾರಿ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಮಾತನಾಡಿ, ಸ್ಥಳೀಯರು ಮತ್ತು ನಮ್ಮ ಸಮುದಾಯದವರಾದ ಲೋಕೇಶ ಮತ್ತು ಜಗನ್ನಾಥ ಅವರ ಶವ ಇನ್ನೂ ಸಿಕ್ಕಿಲ್ಲ. ಸರ್ಕಾರ ಈಗಾಗಲೇ ಕಾರ್ಯಾಚರಣೆ ನಿಲ್ಲಿಸಿದ್ದು, ಇದರಿಂದಾಗಿ ನೊಂದ ಮನೆಯವರಿಗೆ ಮತ್ತು ನಮ್ಮ ಸಮುದಾಯದವರಿಗೆ ನೋವಾಗಿದೆ. ಸರ್ಕಾರ ಈ ಕೂಡಲೇ ಪತ್ತೆ ಕಾರ್ಯಾಚರಣೆ ಮುಂದುವರಿಸಬೇಕು ಮತ್ತು ನೊಂದ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು'' ಎಂದು ಆಗ್ರಹಿಸುವುದರ ಜೊತೆಗೆ
ಈ ಕಾರ್ಯ ಬೇಗ ಆಗದಿದ್ದರೆ ನಾವು ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಸಮಾಜದ ಮುಖಂಡ ದಿವಾಕರ ನಾಯ್ಕ, ಬಾಡ ಮಾತನಾಡಿ, ಶಿರೂರು ದುರಂತದಲ್ಲಿ ಮೃತರಾದ ಕೇರಳದ ಚಾಲಕ ಅರ್ಜುನ್ ಅವರ ಶವ ಹೊರ ತೆಗೆಯಲು ಸರ್ಕಾರ ವಿಶೇಷ ಮುತುವರ್ಜಿ ವಹಿಸಿತ್ತು. ಈ ಬಗ್ಗೆ ನಮಗ್ಯಾರಿಗೂ ಬೇಸರವಿಲ್ಲ, ಆದರೆ ಸರ್ಕಾರ ಅದೇ ಮುತುವರ್ಜಿಯನ್ನು ನಮ್ಮ ಸ್ಥಳೀಯರೇ ಆದ ಜಗನ್ನಾಥ ಮತ್ತು ಲೋಕೇಶ ನಾಯ್ಕರ ಶವ ಪತ್ತೆ ಕಾರ್ಯದಲ್ಲೂ ತೋರಿಸಬೇಕು'' ಎಂದು ಆಗ್ರಹಿಸುವುದರ ಜೊತೆಗೆ
ಯಾವುದೇ ಸಾವಿನಲ್ಲಿ ತಾರತಮ್ಯ ಮಾಡಬಾರದು” ಎಂದು ಸರ್ಕಾರಕ್ಕೆ ಮತ್ತು ಆಡಳಿತಕ್ಕೆ ಕಿವಿಮಾತನ್ನು ಹೇಳಿದರು.
ನಾಮಧಾರಿ ಸಮಾಜದ ಯುವ ಮುಖಂಡ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಮಾತನಾಡಿ, “ಶಿರೂರು ಗುಡ್ಡ ಕುಸಿತ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ದುರ್ಘಟನೆಯಾಗಿತ್ತು. ಈ ದುರಂತದಲ್ಲಿ ಜೀವ ಕಳೆದುಕೊಂಡ ಮನೆಯವರು ಈಗಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ನೊಂದವರಿಗೆ ಇನ್ನೂ ಯೋಗ್ಯ ಪರಿಹಾರ ಸಿಕ್ಕಿಲ್ಲ. ಮೃತರ ಮನೆಯವರಲ್ಲಿ ಕೆಲವರು ಮನೆ, ಮಠ ಕಳೆದುಕೊಂಡು ಬೀದಿ ಪಾಲಾದರೆ, ಕೆಲವರು ಇರಲು ಸೂಕ್ತ ಜಾಗವಿಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಅವರೆಲ್ಲರ ಬದುಕು ಅತಂತ್ರವಾಗಿದೆ. ಎಲ್ಲರಿಗೂ ಸರ್ಕಾರ ಯೋಗ್ಯ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ದುರಂತದಲ್ಲಿ ಕಣ್ಮರೆಯಾಗಿರುವ ಲೋಕೇಶ ಮತ್ತು ಜಗನ್ನಾಥ ನಾಯ್ಕರ ಶವದ ಪತ್ತೆ ಕಾರ್ಯಾಚರಣೆ ಮುಂದುವರಿಸಬೇಕು” ಎಂದು ಆಡಳಿತಕ್ಕೆ ಆಗ್ರಹಿಸಿದರು.
ಈ ಸಂದರ್ಭ ಕುಮಟಾ ತಾಲೂಕಾ ಯುವ ನಾಮಧಾರಿ ಸಂಘದ ಉಪಾಧ್ಯಕ್ಷ ವೈಭವ ನಾಯ್ಕ ಕೋನಳ್ಳಿ, ಕಾರ್ಯದರ್ಶಿ ದತ್ತಾತ್ರೇಯ ನಾಯ್ಕ ಹೆಗಡೆ, ಸಚಿನ್ ನಾಯ್ಕ ಬಾಡ, ವಿಷ್ಣು ನಾಯ್ಕ ಅಘನಾಶಿನಿ, ಮಂಜುನಾಥ ನಾಯ್ಕ ಹೆಬೈಲ್ ಹಾಗೂ ಎಲ್ಲಾ ಸದಸ್ಯರು ಹಾಗೂ ನಾಮಧಾರಿ ಸಮಾಜದ ಮುಖಂಡರಾದ ದೇವರಹಕ್ಕಲದ ರಾಜೇಶ ನಾಯ್ಕ, ವಕ್ಕನಹಳ್ಳಿಯ ಅಣ್ಣಪ್ಪ ನಾಯ್ಕ, ಹಳೆಪೈಕರ ಜಾಡು ಬಳಗದ ಸುಕುಮಾರ ನಾಯ್ಕ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
ಗಮನಿಸಿ