ಉದಯ ಬರ್ಗಿ
Karwar:ಕಾರವಾರ :ಅಂದು ಜುಲೈ 16 ಕಾರವಾರ ಸೇರಿದಂತೆ ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಕರಾವಳಿ ತಾಲೂಕಿನ ಬಹುತೇಕ ತಗ್ಗು ಪ್ರದೇಶಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿದ್ದ ಕ್ಷಣವದು. ಅದೇ ಸಂದರ್ಭ ಇಡೀ ಜಿಲ್ಲೆಯೇ ಬೆಚ್ಚಿಬಿದ್ದ ಶಿರೂರು ಗುಡ್ಡ ಕುಸಿತ ಉಂಟಾಯಿತು. ಆ ಕ್ಷಣದಿಂದ ಇದುವರೆಗೆ “ನಾನು” (ಉದಯ ಬರ್ಗಿ) ಕಂಡಿದ್ದನ್ನು ಕಂಡ ಹಾಗೆ ನಿಮ್ಮೆಲ್ಲರ ಮುಂದಿಡುವ ಪುಟ್ಟ ಪ್ರಯತ್ನವಿದು.

ಅಂದು 2024ರ ಜುಲೈ 16, ಬೆಳಿಗ್ಗೆ ಎದ್ದು ಎತ್ತ ಸುದ್ದಿಗೆ ಹೊರಡಬೇಕು ಎನ್ನುವುದೇ ಗೊಂದಲವಾಗಿತ್ತು. ಯಾಕೆಂದ್ರೆ ಅಷ್ಟೊಂದು ಪ್ರವಾಹ ಜಿಲ್ಲೆಯನ್ನು ಆವರಿಸಿಕೊಂಡಿತ್ತು. ಉತ್ತರ ಕನ್ನಡಕ್ಕೆ ಇದೇನು ಹೊಸತಲ್ಲ, ಆದರೆ ಈ ಪರಿಯ ದೋ… ಮಳೆ ನಾನಂತೂ ಹಿಂದೆ ನೋಡಿರಲಿಲ್ಲ. ಹಿಂದಿನ ದಿನ ರಾತ್ರಿ ಕಾರವಾರ ತಾಲೂಕಿನ ಅರ್ಗಾ ಗ್ರಾಮ ಭಾಗಶಃ ಮುಳುಗಡೆಯಾಗಿತ್ತು. ರಾತ್ರಿ ಪೂರ್ತಿ ಪೆÇಲೀಸ್ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇಡಿ ಜಿಲ್ಲಾಡಳಿತವೇ ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವುದರಲ್ಲೇ ರಾತ್ರಿ ಕಳೆಯಬೇಕಾಗಿ ಬಂತು. ಇನ್ನೇನು ಬೆಳಗಾಯಿತು ಎನ್ನುವಷ್ಟರಲ್ಲಿ ಪ್ರವಾಹದಿಂದಾಗಿ ಆ ಭಾಗದ ಮನೆಗಳು ಮುಳುಗಡೆಯಾಗಿದಷ್ಟೇ ಅಲ್ಲದೆ ಜಿಲ್ಲೆಯ ರಾಷ್ಟೀಯ ಹೆದ್ದಾರಿಯಲ್ಲಿನ ಸಂಚಾರವೇ ಬಂದ್ ಆಗಿಬಿಟ್ಟಿತ್ತು. ಈಗ, ಇನ್ನು ಕೆಲವೇ ಕ್ಷಣದಲ್ಲಿ, ಇನ್ನು ಸ್ವಲ್ಲ ಹೊತ್ತಲ್ಲಿ ಮಳೆ ಕಡಿಮೆ ಆಗಬಹುದು ಎಂದು ಜನ ಅಂದುಕೊಂಡಿದ್ದರು. ನನಗೂ ಸಹ ಸುದ್ದಿಯ ಕಾತುರ, ಎಲ್ಲಿ ಹೋಗಬೇಕು? ಏನು ಸುದ್ದಿ ಮಾಡಬೇಕು ಎನ್ನುವ ಧಾವಂತ, ಜೊತೆಗೆ ಈ ಮಳೆ ಯಾಕೆ ಹೀಗೆ? ಇವೆಲ್ಲ ಪ್ರಶ್ನೆಗಳು ಒಂದೇ ಸಮನೆ ಮನದಲ್ಲಿ ರೈಲು ಬೋಗಿಗಳಂತೆ ಓಡುತ್ತಿದ್ದವು.

ಆಗ ಬೆಳಿಗ್ಗೆ 8 ಗಂಟೆಯ ಸಮಯ, ಮನೆಯಲ್ಲಿ ಪತ್ನಿ ಮಾಡಿಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಇನ್ನೇನೂ ಸುದ್ದಿಗಾಗಿ ಹೊರಡಲು ಬೈಕ್ ಕಿಕ್ ಹೊಡೆಯಬೇಕು ಎನ್ನುತ್ತಿರುವಾಗಲೇ ನನ್ನ ಮಾಧ್ಯಮದ ಸ್ನೇಹಿತರಾದ ದರ್ಶನ್, ಸಾಯಿಕಿರಣ್ ನೆನಪಾದರು. ಅವರಿಗೆ ಒಮ್ಮೆ ಫೋನ್ ಮಾಡಿ, ಕಾರವಾರ, ಅರ್ಗಾದ ಪರಿಸ್ಥಿತಿ ಹೇಗಿದೆ ಅಂತಾ ಕೇಳೋಣ ಎಂದೆನಿಸಿತು. ಫೋನ್ ಮಾಡಿದ್ದೇ ತಡ ಆ ಕಡೆಯಿಂದ ಅವರು ಹೇಳಿದ್ದು ಒಂದೆ ಮಾತು “ನೀ ಇಲ್ಲಿ ಬರಬೇಡ, ಹೆದ್ದಾರಿ ಸಂಚಾರವೇ ಬಂದ್ ಆಗಿದೆ. ನೀ ಹೇಗೆ ಬರ್ತಿಯಾ?” ಅಂತಾ ಕೇಳಿದ್ರು. ಆ ಕ್ಷಣಕ್ಕೆ ನಾನು ಸಂಪೂರ್ಣ ಬ್ಲ್ಯಾಂಕ್ ಆದೆ. ಏನು ಮಾಡಬೇಕು ಎನ್ನುವುದು ಹೊಳೆಯಲೇ ಇಲ್ಲ. ಅತ್ತ ಅವರು ಕೂಡ ಕಷ್ಟದ ಪರಿಸ್ಥಿತಿಯಲ್ಲಿ ಸುದ್ದಿ ಮಾಡುತ್ತಿದ್ದಾರೆ ಎಂದು ಮನಸ್ಸು ಹೇಳುತ್ತಲೇ ಇತ್ತು. ಆಗ ನಾನು ಹೇಗಾದರೂ ಮಾಡಿ ಅಲ್ಲಿಗೆ ಹೋಗುವುದು ನಿರ್ಧರಿಸಿದೆ ಮತ್ತು ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟೆ…

ನಾನು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬದ್ರೋಣ ಮಳೆ ದೋ… ಎಂದು ಧಾರಾಕಾರ ಸುರಿಯುತ್ತಲೇ ಇದೆ. ಎತ್ತ ನೋಡಿದರು ನೀರಲ್ಲ, ಜಲಪ್ರಳಯವೇ ಕಾಣುತ್ತಿದೆ. ನನ್ನ ಬೈಕ್ ಓಡಿಸಲು ಸಾಧ್ಯವಾಗದ ಪರಿಸ್ಥಿತಿ. ಆದರೂ ಧೈರ್ಯ ಬಿಡಲಿಲ್ಲ, ನಿಧಾನಕ್ಕೆ ಮುಂದೆ ಸಾಗುತ್ತಲೇ ಇದ್ದೆ. ಆಗ ನನ್ನ ಮೊಬೈಲ್ ಯಾರಿಗೆ ಬೇಕು ಈ ಲೋಕ...''ಎಂದು ರಿಂಗಣಿಸಲಾರಂಭಿಸಿತು.ಎಲ್ಲೋ ಏನೋ ಆಗಿದೆ, ಯಾರೋ ಸುದ್ದಿ ತಿಳಿಸುವುದಕ್ಕೆ ಫೋನ್ ಮಾಡಿರಬೇಕು ಎಂದು ಪತ್ರಕರ್ತನ ಒಳ ಮನಸ್ಸು ಹೇಳುತ್ತಲೇ ಇತ್ತು.ಗಡಿಬಿಡಿಯಲ್ಲಿ ಫೋನ್ ತೆಗೆದು ನೋಡಿದೆ. ನಮ್ಮೂರವರೇ,ಈಗ ಶಿರಸಿಯಲ್ಲಿ ವಾಸವಿರುವ ಈಶ್ವರ ನಾಯ್ಕರ ಫೋನ್ ಅದು,ಆತಂಕದಲ್ಲೇ ಹಲೋ ನಾಯ್ಕರೇ ಹೇಳಿ” ಎಂದೆ. ಅವರು ಗಡಿಬಿಡಿಯಲ್ಲಿ “ಶಿರೂರು ಗುಡ್ಡ ಕುಸಿದಿದೆ. ಹತ್ತಕ್ಕೂ ಹೆಚ್ಚು ಮಂದಿ ನಪತ್ತೆಯಾಗಿದ್ದಾರೆ” ಎನ್ನುವ ಘನಘೋರ ಸುದ್ದಿ ಹೇಳಿದರು.ನಾನು ಶಿರೂರು ಗುಡ್ಡದಿಂದ ಎರಡೇ ಕಿಲೋ ಮೀಟರ್ ಅಂತರದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೆ. ಹೌದಾ? ನಾನು ಹತ್ತಿರದಲ್ಲೇ ಇದ್ದೇನೆ,ಇನ್ನೇನು ಐದು ನಿಮಿಷದಲ್ಲಿ ನೀವು ಹೇಳಿದ ದುರಂತ ಸ್ಥಳ ತಲುಪುತ್ತೇನೆ ಅಂತಾ ಹೇಳಿ ಅವರ ಫೋನ್ ಕರೆ ಕಟ್ ಮಾಡಿ, ಮುಂದೆ ಸಮರೋಪಾದಿಯಲ್ಲಿ ಬೈಕ್ ಓಡಿಸಿದೆ.

ಕೆಲವೇ ನಿಮಿಷದಲ್ಲಿ ದುರಂತದ ಸ್ಥಳ ತಲುಪಿದೆ. ಆದರೆ, ಅಷ್ಟೊತ್ತಿಗೆ ಅಲ್ಲಿ ಯಾರೂ ಉಹಿಸಲು ಸಾಧ್ಯವಾಗದ ಭೀಕರ ದುರಂತ ನಡೆದೇ ಹೋಗಿತ್ತು. ಅಯ್ಯೋ ಇದೆಂತಾ ದುರಂತ, ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆಯಲ್ಲ, ಭೂಕಂಪವೇನಾದರೂ ಆಯ್ತಾ? ಅಂತಾ ನನ್ನಷ್ಟಕ್ಕೆ ನಾನೇ ಅಂದುಕೊಂಡೆ, ಯವುದಕ್ಕೂ ನಿಖರತೆ ಇಲ್ಲ,ಮನಸ್ಸು ಓಡುತ್ತಲೇ ಇದೆ, ಪ್ರಶ್ನೆಗಳು ಸುನಾಮಿಯಂತೆ ಏಳುತ್ತಲೇ ಇದೆ, ಹೆದ್ದಾರಿ ತುಂಬಾ ರಾಶಿ ರಾಶಿ ಕಲ್ಲು, ಮಣ್ಣು ತುಂಬಿ ಹೋಗಿದೆ. ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಹೆದ್ದಾರಿ ಪಕ್ಕದಲ್ಲಿದ್ದ ಲಕ್ಷ್ಮಣ ನಾಯ್ಕರ ಹೋಟೆಲ್ ಕಣುತ್ತಲೇ ಇಲ್ಲ. ಅಲ್ಲಿ ಹೋಟೆಲ್ ಇತ್ತಾ? ನಾನೇ ಬೇರೆ ಜಾಗಕ್ಕೆ ಬಂದೆನಾ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ನನ್ನಲ್ಲಿ ಗೊಂದಲ ಹುಟ್ಟಿಸುತ್ತಲೇ ಇತ್ತು. ಈ ಜನ್ಮದಲ್ಲೇ ನೋಡದ ಆ ಭಯಾನಕ ದೃಶ್ಯ ಕಂಡು ಒಮ್ಮೆ ದಂಗಾಗಿ ಹೋದೆ. ಅಲ್ಲಿಂದ ಹೊರಟು ಬಿಡಲೇ ಅನಿಸುವಷ್ಟು ಭೀಕರ ದೃಶ್ಯ ಅದು. ಮತ್ತೆ ಗುಡ್ಡ ಕುಸಿದರೂ ಕುಸಿಯಬಹುದು ಎಂದು ಒಳ ಮನಸ್ಸು ಹೇಳುತ್ತಲೇ ಇತ್ತು. ಕ್ಷಣಕ್ಷಣಕ್ಕೂ ಕಣ್ಣು ಗುಡ್ಡದತ್ತವೇ ನೋಡುತ್ತಿತ್ತು. ರಾಜ್ಯದ ಪವರ್ ಟಿವಿ'' ಸಂಸ್ಥೆಯವರು ಇಡೀ ಉತ್ತರ ಕನ್ನಡ ಜಿಲ್ಲೆಯ ಸುದ್ದಿಯ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ.ಅದನ್ನು ನಾನು ದಿನದ 24ಗಂಟೆ,ವರ್ಷದ 365 ದಿನವೂ ಮರೆಯುವಂತಿಲ್ಲ.ಕಾಯಕವೇ ಕೈಲಾಸ” ಮೈ ಮರೆಯದೆ ಸುದ್ದಿ ಮಾಡಲೇ ಬೇಕಾದ ಕರ್ತವ್ಯ ನನ್ನದು. ತಕ್ಷಣ ಅಲ್ಲೇ ನಿಂತು ದುರಂತದಲ್ಲಿ ಕಣ್ಮರೆಯಾದ ಲಕ್ಷ್ಮಣ ನಾಯ್ಕ ಮತ್ತು ಅವರ ಕುಟುಂಬದವರ ಮಾಹಿತಿ ಕಲೆ ಹಾಕಿ ಕೈಯಲ್ಲಿ ಪವರ್ ಟಿವಿ''ಯ ಲೋಗೋ ಮೈಕ್ ಹಿಡಿದು ಅಲ್ಲೇ ಇದ್ದ ಯಾರೋ ಅಪರಿಚಿತರೊಬ್ಬರ ಬಳಿ ಮೊಬೈಲ್ ಕೊಟ್ಟು ಘಟನೆಯ ಬಗ್ಗೆ ವಿವರಿಸುತ್ತಾ ಹೋದೆ.ಆಗ ನನ್ನ ಹಿಂಬದಿಯಲ್ಲೇ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಗುಡ್ಡ ಜೋರು ಶಬ್ದ ಮಾಡುತ್ತಲೇ ತೂರಿ ಬಂತು.ಜೀವವೇ ಒಮ್ಮೆ ನಿಂತು ಹೋದ ಅನುಭವವಾಯ್ತು.ಮೊಬೈಲ್ ಹಿಡಿದುಕೊಂಡ ವ್ಯಕ್ತಿ ಸಹ ಭಯದಿಂದ ದೂರ ಓಡಿದ. ಆ ಕ್ಷಣಕ್ಕೆ ನಾನು ಒಂಟಿಯಾದೆ,ಆದರೂ ನನ್ನ ಕಾಯಕ ಮುಂದುವರೆಸಿದೆ.ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ಧೈರ್ಯಬಿಡಲಿಲ್ಲ.

ಹಾಗೆಯೇ ಗಂಗಾವಳಿ ನದಿ ಪಕ್ಕದ ಉಳುವರೆ ಗ್ರಾಮದತ್ತ ಕಣ್ಣು ಹಾಯಿಸಿದರೆ, ಪಕ್ಕಾ ನರಕದ ದರ್ಶನವಾಯಿತು. ನದಿಯ ಪಕ್ಕದಲ್ಲಿದ್ದ ಮನೆಗಳು ಕಣ್ಣಿಗೆ ಕಾಣಲೇ ಇಲ್ಲ, ಮೊದಲು ಮನೆ ಇತ್ತಲ್ವಾ? ಎಂದು ಒಳ ಮನಸ್ಸು ಪ್ರಶ್ನೆ ಕೇಳುತ್ತಲೇ ಇತ್ತು. ನನ್ನ ಕಣ್ಣುಗಳು ಕೂಡ ಅಲ್ಲಿ ಮನೆಗಳು ಇತ್ತು ಎಂದೇ ಹೇಳುತ್ತಿದೆ. ಆದರೆ ಆ ಕ್ಷಣಕ್ಕೆ ಅಲ್ಲಿ ಏನೂ ಕಾಣಿಸುತ್ತಿಲ್ಲ. ನಿತ್ಯ ಅದೇ ಹೆದ್ದಾರಿಯಲ್ಲಿ ಸಂಚರಿಸುವ ನನಗೆ ಅಲ್ಲಿ ಮನೆಗಳು ಇರುವುದು ಪಕ್ಕಾ ಗೊತ್ತಿತ್ತು. ಅಲ್ಲಿದ್ದವರನ್ನು ಕೇಳಿದೆ, ಅಲ್ಲಿನ ಮನೆಗಳು ಕಾಣುತ್ತಿಲ್ಲ ಏನಾಗಿದೆ ಅಂತಾ. “ಗುಡ್ಡ ಕುಸಿತದ ರಭಸಕ್ಕೆ ಅವೆಲ್ಲವೂ ನೆಲಸಮವಾಗಿದೆ” ಎಂದು ಅವರು ಹೇಳಿದರು. ಮನಸ್ಸಿಗೆ ಅಬ್ಬಾ… ಏನಿಸಿತು. ಇಷ್ಟಕ್ಕೇ ಶಿರೂರು ಗುಡ್ಡ ಕುಸಿತದ ಭೀಕರತೆ ಹೇಗಿತ್ತು ಎನ್ನುವುದನ್ನು ನೀವು ಉಹಿಸಬಹುದು.

ಅಧಿವೇಶನ ಬಿಟ್ಟು ಓಡಿ ಬಂದ ಸಚಿವರು, ಶಾಸಕರು
ತನ್ನ ಕ್ಷೇತ್ರ ಹಾಗೂ ಜಿಲ್ಲೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಬೆಂಗಳೂರಿಂದ ನೇರವಾಗಿ ಘಟನಾ ಸ್ಥಳಕ್ಕೆ ಬಂದರು. ಆ ಭಯಾನಕ ಘಟನೆ ನೋಡಿದ ಅವರಿಗೂ ಒಮ್ಮೆ ಆಶ್ವರ್ಯ, ಇದೇನಪ್ಪಾ ನಮ್ಮ ಜನರ ಪರಿಸ್ಥಿತಿ. ಮುಂದೇನು ಅಂತಾ ಒಂದು ಕ್ಷಣ ಅವರನ್ನೂ ಮೌನಕ್ಕೆ ಶರಣಾಗುವಂತೆ ಮಾಡಿದ್ದು ಶಿರೂರು ಗುಡ್ಡ ಕುಸಿತ. ತಕ್ಷಣ ಜಿಲ್ಲಾಧಿಕಾರಿ ತಂಡದೊಂದಿಗೆ ಚರ್ಚೆ ನಡೆಸಿದ ಸಚಿವ ಮಂಕಾಳು ವೈದ್ಯ ಹಾಗೂ ಸ್ಥಳೀಯ ಶಾಸಕ ಸತೀಶ ಸೈಲ್, “ಕಾರ್ಯಾಚರಣೆ ಯಾವ ಕಾರಣಕ್ಕೂ ನಿಧಾನವಾಗಬಾರದು,ಎಷ್ಟು ವೇಗವಾಗಿ ಮಾಡೊಕ್ಕೆ ಸಾಧ್ಯವೋ, ಅಷ್ಟು ವೇಗವಾಗಿ ಕಾರ್ಯಾಚರಣೆ ಮಾಡಬೇಕು, ಸರಕಾರದಿಂದ ಏನೆಲ್ಲಾ ಸಹಕಾರ ಬೇಕೋ ಎಲ್ಲವನ್ನು ಕೊಡಿಸುತ್ತೇವೆ” ಎಂದು ತಿಳಿಸಿದರು.

ಏರುತ್ತಲೇ ಹೋದ ನಾಪತ್ತೆ ಸಂಖ್ಯೆ
ಸಮಯ ಕಳೆದಂತೆ ಸಾವಿನ ಸಂಖ್ಯೆ ಏರುತ್ತಲೇ ಹೋಯಿತು. ಮೊದಲು ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರು ಹಾಗೂ ಅವರ ಸಂಬಂಧಿ ಜಗನ್ನಾಥ ನಾಯ್ಕ ಸೇರಿ ಒಟ್ಟು ಐವರು ಮಾತ್ರ ಕಣ್ಮರೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಖಚಿತ ಪಡಿಸಿತ್ತು. ಆದರೆ ನಿಧಾನವಾಗಿ ನಾಪತ್ತೆಯಾದವರ ಸಂಖ್ಯೆ ಒಂದೊಂದೇ ಏರಿಕೆಯಾಗತೊಡಗಿತು. ಆಗ ಒಂದಿಷ್ಟು ಊಹಾಪೆÇೀಹ ದ ಮಾತುಗಳು ಕೇಳಿ ಬರಲಾರಂಭಿಸಿದವು. ಆರಂಭದಲ್ಲಿ ಒಂದು ಕಾರು, ಗ್ಯಾಸ್ ಟ್ಯಾಂಕರ್, ಒಂದಿಷ್ಟು ಬೈಕ್ ಹಾಗೂ ಲಕ್ಷ್ಮಣ ನಾಯ್ಕರ ಹೋಟೆಲಿಗೆ ಬಂದಿದ್ದ ಗ್ರಾಹಕರು ಇದ್ದರು ಎನ್ನುವ ಚರ್ಚೆ ಆರಂಭವಾದವು. ಯಾರಿಗೂ ಸಹ ಘಟನೆಯಲ್ಲಿ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯಲೇ ಇಲ್ಲ. ದಿನ ಕಳೆದಂತೆ ನಾಪತ್ತೆಯಾದವರ ಕುಟುಂಬಸ್ಥರು ದೂರು ಕೊಡೋದಕ್ಕೆ ಬಂದರು. ಹೀಗೆ ಕಣ್ಮರೆಯಾದವರ ಸಂಖ್ಯೆ ಕೊನೆಗೆ ಹನ್ನೊಂದಕ್ಕೆ ಬಂದು ತಲುಪಿತು.

ಹಸಿವು ನೀಗಿಸಿದ ಅನ್ನದಾತರು
ಹೆದ್ದಾರಿ ಬಂದ್ ಆಗಿದ್ದ ಕಾರಣ ಎರಡು ಬದಿಯಲ್ಲಿ ಸುಮಾರು ಅರ್ಧ ತಿಂಗಳುಗಳ ಕಾಲ ಸರಕು ವಾಹನ ಚಾಲಕರು, ಕ್ಲೀನರುಗಳು ನಿಂತಲ್ಲೇ ನಿಲ್ಲಬೇಕಾಗಿ ಬಂತು. ವಿದ್ಯುತ್ ಲೈನುಗಳು ಹರಿದು ಬಿದ್ದ ಕಾರಣ ಸುತ್ತಮುತ್ತ ಇದ್ದ ಒಂದೆರಡು ಹೊಟೇಲ್ ಸಹ ಬಂದ್ ಆಗಿದ್ದವು. ಆರಂಭದ ಒಂದೆರಡು ದಿನ ಹೇಗೋ ಕಳೆದುಹೋಯಿತು. ಕಾಲ ಕಳೆದ ಹಾಗೆ ವಾಹನ ಚಾಲಕರು, ಕ್ಲಿನರುಗಳಿಗೆ ಅತ್ತ ಹೋಗಲಾಗದೆ, ಇತ್ತ ಇರಲೂ ಆಗದೆ, ಹೊಟ್ಟೆಗೆ ಸರಿಯಾಗಿ ಊಟ, ತಿಂಡಿ ಸಿಗದೆ ದಿನ ಕಳೆಯುವುದು ಕಷ್ಟವಾಗಿತ್ತು. ಇವರ ಸಮಸ್ಯೆ ಅರಿತು ಹಸಿವಿನ ಅರಿವಿದ್ದ ಅನೇಕ ಮಹನೀಯರು ನಿತ್ಯ ಬಂದು ಊಟ, ನೀರು ನೀಡುವ ಮೂಲಕ ಹಸಿದವರ ಹೊಟ್ಟೆಗೆ ತಣಿಸುವ ಕಾರ್ಯದ ಮೂಲಕ ಮಾನವೀಯತೆ ಮೆರೆದರು.

ಈಶ್ವರ ಮಲ್ಪೆಯ ಸಾಹಸ
ಮೊದಲ ಹಂತದ ಕಾರ್ಯಾಚರಣೆಯಲ್ಲಿ ಮೂವರ ಶವ ಪತ್ತೆಯಾಗದೆ ಇದ್ದಾಗ ಸ್ಥಳಕ್ಕೆ ಬಂದಿದ್ದೇ ಆಪತ್ಬಾಂಧವ ಎಂದೇ ಕರೆಯಲ್ಪಡುವ ಮುಳುಗು ತಜ್ಞ ಈಶ್ವರ ಮಲ್ಪೆ. ಇವರನ್ನು ಶೋಧ ಕಾರ್ಯಕ್ಕೆ ಇಳಿಸಲಾಗುತ್ತದೆ. ಇವರು ಕಾರ್ಯಾಚರಣೆಯಲ್ಲಿ ಹಲವು ಅವಶೇಷಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ನಾಪತ್ತೆಯಾಗಿದ್ದ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಇರುವ ಸ್ಥಳವನ್ನು ಅವರು ಮೊದಲು ಗುರುತು ಮಾಡುತ್ತಾರೆ. ಕೊನೆ ಕ್ಷಣದಲ್ಲಿ ಕಾರ್ಯಾಚರಣೆಗೆ ಸರಿಯಾಗಿ ಸಹಕರಿಸಿಲ್ಲ ಎಂದು ಈಶ್ವರ ಮಲ್ಪೆ ಸ್ಥಳ ಬಿಟ್ಟುಹೋದ ಪ್ರಸಂಗ ಕೂಡ ನಡೆಯಿತು.

ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದ ಡಿಸಿ, ಎಸ್ಪಿ
ಶಿರೂರು ಗುಡ್ಡ ಕುಸಿತ ಈ ಎರಡು ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ಸವಾಲಾಗಿತ್ತು. ಇಬ್ಬರೂ ಅಧಿಕಾರಿಗಳು ಘಟನೆಯ ಸ್ವಲ್ಪ ದಿನಗಳ ಹಿಂದಷ್ಟೇ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅದರೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಓರ್ವ ಮಹಿಳಾ ಅಧಿಕಾರಿಯಾದರೂ ಸಹ ಸಂಪೂರ್ಣ ಘಟನೆಯನ್ನು ಅತೀ ಜಾಗರೂಕತೆಯಿಂದ ನಿಭಾಯಿಸುವ ಮೂಲಕ ಸರಕಾರದಿಂದ ಮೆಚ್ಚುಗೆ ಪಡೆದುಕೊಂಡರು. ಎಸ್ಪಿ ಎಂ. ನಾರಾಯಣ ಅವರೂ ಕೂಡ ಮಾನವೀಯತೆಯಿಂದ ಕಾರ್ಯ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾದರು.

ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಕಾರ್ಯಾಚರಣೆ
ಘಟನೆ ಬಳಿಕ ಕಾರ್ಯಾಚರಣೆಗಾಗಿ ತಂಡೋಪತಂಡವಾಗಿ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಹಾಗೂ ಮಿಲಿಟರಿ ತಂಡ ಸಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ಎಲ್ಲಾ ತಂಡಗಳು ನಿರಂತರವಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದರು.

ಕೊನೆ ತನಕ “ಪೊಲೀಸ್ ಸರ್ಪಗಾವಲು”
ಗುಡ್ಡ ಕುಸಿತವಾದ ಕ್ಷಣದಿಂದ ಸ್ಥಳೀಯ ಪೆÇಲೀಸರೊಂದಿಗೆ ಜಿಲ್ಲೆಯ ಬಹುತೇಕ ಪೆÇಲೀಸರು ಹಗಲಿರುಳು ಸಹ ಭಾಗಿಯಾಗಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿರುವುದನ್ನು ಮರೆಯಲು ಸಾಧ್ಯವಿಲ್ಲ. ಈ ದುರಂತ ಸುದ್ದಿ ತಿಳಿಯುತ್ತಿದ್ದಂತೆ ನೋಡುವುದಕ್ಕೆ ನಾನಾ ಕಡೆಗಳಿಂದ ನಿತ್ಯವೂ ಜನ ಸ್ಥಳಕ್ಕೆ ಆಗಮಿಸುತ್ತಲೇ ಇದ್ದರು. ಭಾರೀ ಮಳೆ ಸುರಿಯುತ್ತಿರುವ ಕಾರಣ ಯಾವ ಸಮಯದಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗುತ್ತದೆ ಎನ್ನುವುದನ್ನು ಯಾರಿಂದಲೂ ಹೇಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಗರೋಪಾದಿಯಲ್ಲಿ ಬರುವ ಜನರನ್ನು ತಡೆಯುವುದೇ ಪೆÇಲೀಸರಿಗೆ ದೊಡ್ಡ ಸವಾಲಾಗಿತ್ತು. ಇನ್ನೊಂದೆಡೆ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ ಹೀಗೆ ಒಬ್ಬರ ಮೇಲೆ ಒಬ್ಬರಂತೆ ಭೇಟಿ ನೀಡುತ್ತಿದ್ದರಿಂದ ಆ ಕಡೆ ಬಂದೋಬಸ್ತ್ ನೋಡಿಕೊಳ್ಳಬೇಕು. ಹೀಗೆ ಹತ್ತಾರು ಸವಾಲುಗಳ ನಡುವೆ ಪೆÇಲೀಸರ ಕರ್ತವ್ಯ ಜನರ ಮೆಚ್ಚುಗೆ ಪಡೆಯಿತು.

ನುಡಿದಂತೆ ನಡೆದ ಕಾರವಾರದ“ಶಾಸಕ ಸತೀಶ ಸೈಲ್”
ಸ್ಥಳೀಯ ಶಾಸಕರಾಗಿರುವ ಶಾಸಕ ಸತೀಶ್ ಸೈಲ್ ನುಡಿದಂತೆ ನಡೆದಿದ್ದಾರೆ. ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಂಬತ್ತು, ಕೇರಳ ಮೂಲದ ಓರ್ವ ಹಾಗೂ ತಮಿಳುನಾಡಿನ ಓರ್ವ ಚಾಲಕ ಸೇರಿ ಒಟ್ಟು ಹನ್ನೊಂದು ಮಂದಿ ಕಣ್ಮರೆಯಾಗಿದ್ದರು. ಮೊದಲ ಹಂತದಲ್ಲಿ 8 ಮಂದಿಯ ಶವ ಪತ್ತೆಯಾದರೆ ಇನ್ನೂ ಮೂವರ ಪತ್ತೆ ಮಾಡುವುದು ದೊಡ್ಡ ಸವಾಲಾಗಿತ್ತು. ಬೂಮ್ ಹಿಟಾಚಿ ಸೇರಿದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಕಣ್ಮರೆಯಾಗಿದ್ದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಪತ್ತೆಯಾಗಿರಲಿಲ್ಲ. ನಾಪತ್ತೆಯಾಗಿದ್ದವರ ಕುಟುಂಬಸ್ಥರೆಲ್ಲರೂ ಕೊನೆಗೆ ಅವರ ಮೂಳೆಯನ್ನಾದರೂ ಹುಡುಕಿ ಕೊಡಿ ಎಂದು ಶಾಸಕರ ಬಳಿ ಕೇಳಿ ಕೊಂಡಿದ್ದರು.ಎಲ್ಲರಿಗೂ ಧೈರ್ಯ ತುಂಬಿದ ಶಾಸಕ ಸೈಲ್ ಕಾರ್ಯಾಚರಣೆ ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪತ್ತೆ ಹಚ್ಚುವವರೆಗೆ ಕೈ ಬಿಡುವುದಿಲ್ಲ ಎಂದು ಮಾತುಕೊಟ್ಟಿದ್ದರು. ಅದರಂತೆ ಶಾಸಕರೇ ಅತೀ ಹೆಚ್ಚಿನ ಮುತುವರ್ಜಿ ವಹಿಸಿ ಗೋವಾ ರಾಜ್ಯದ ಪಣಜಿಯಿಂದ ಡ್ರೇಜ್ಜಿಂಗ್ ಯಂತ್ರ ತರುವಲ್ಲಿ ಯಶ್ವಸಿಯಾಗಿ ಕಾರ್ಯಾಚರಣೆ ಆರಂಭಿಸಿಯೇ ಬಿಟ್ಟರು. ಈ ವೇಳೆ ಒಂದೊಂದೆ ವಸ್ತುಗಳು ಪತ್ತೆಯಾಗತೊಡಗಿದವು. ಘಟನೆಯ 71ನೇ ದಿನಕ್ಕೆ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಇದ್ದ ಲಾರಿ ಹಾಗೂ ಆತನ ಶವ ಕೂಡ ಪತ್ತೆಯಾಯ್ತು. ಮೂರನೇ ಹಂತದ ಹತ್ತನೇ ದಿನದ ಕಾರ್ಯಾಚರಣೆ ವೇಳೆ ಎರಡು ಮೂಳೆಗಳು ಪತ್ತೆಯಾದವು.

“ಮಾಧ್ಯಮದವರ ಪರದಾಟ”
ರಾಷ್ಟೀಯ ಹೆದ್ದಾರಿಯಲ್ಲಿ ಸಾವಿರಾರು ಟನ್ ಕಲ್ಲು ಮಣ್ಣು ತುಂಬಿದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚಾರಕ್ಕೆ ಸಾಕಷ್ಟು ಪರದಾಟ ನಡೆಸಬೇಕಾಯಿತು. ಉಳುವರೆ ಗ್ರಾಮದಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಸುದ್ದಿ ಮಾಡೋದಕ್ಕೆ ಹೋಗಬೇಕು ಅಂದರೆ ಮಂಜಗುಣಿ ಸೇತುವೆ ಮೂಲಕ ಗೋಕರ್ಣ ಮಾರ್ಗವಾಗಿ ಬರುವಂತಹ ಪರಿಸ್ಥಿತಿಯಿಂದಾಗಿ ವರದಿಗಾರರು ಹೈರಾಣಾಗಿ ಹೋದರು. ಇನ್ನು ಕೇರಳ ಮೂಲದ ಅರ್ಜುನ್ ನಾಪತ್ತೆಯಾಗಿರೋ ವಿಚಾರ ತಿಳಿಯುತ್ತಿದ್ದಂತೆ ಕೇರಳದ ಬಹುತೇಕ ಮಾಧ್ಯಮಗಳು ಇಲ್ಲಿಯೇ ಬೀಡು ಬಿಡುವಂತಾಯಿತು. ಕರ್ನಾಟಕ ಹಾಗೂ ಕೇಳರ ಮಾಧ್ಯಮಗಳ ಸಂಖ್ಯೆ ಕೂಡ ಹೆಚ್ಚಾದವು. ಇದರಿಂದಾಗಿ ಪೊಲೀಸರು ಸಹ ಮಾಧ್ಯಮದವರಿಗೆ ನಿಗದಿತ ಸಮಯದಲ್ಲಿ ಮಾತ್ರ ಘಟನಾ ಸ್ಥಳಕ್ಕೆ ಬಿಡಬೇಕಾದ ಪರಿಸ್ಥಿತಿ ಉಂಟಾಯಿತು. ಕ್ಷಣ ಕ್ಷಣದ ಸುದ್ದಿ ನೀಡಲೇ ಬೇಕಾಗಿದ್ದರಿಂದ ಒಂದಿಷ್ಟು ದಿನ ಪೊಲೀಸರ ಜೊತೆ ಸುಖಾಸುಮ್ಮನೆ ಮಾಧ್ಯಮದವರು ಮಾತಿಗೆ ಮಾತು ಬೆಳಸಬೇಕಾದ ಪರಿಸ್ಥಿತಿ ಕೂಡ ಉಂಟಾಯಿತು.

(ಇದು ಪತ್ರಕರ್ತನಾದ ನನ್ನ ಅನುಭವ, ನಾನು ಕಂಡದ್ದನ್ನು ಕಂಡ ಹಾಗೆ ಇಲ್ಲಿ ದಾಖಲಿಸಿದ್ದೇನೆ ಎಂದು ಓದುಗರಿಗೆ ತಿಳಿಸುತ್ತೇನೆ).

ಗಮನಿಸಿ