ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಶಿರೂರು ಗುಡ್ಡ ಕುಸಿತದಲ್ಲಿ ಲಾರಿ ಸಮೇತ ನಾಪತ್ತೆಯಾಗಿದ್ದ ಅರ್ಜುನ್ ಗಂಗಾವಳಿ ನದಿಯಲ್ಲಿ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ.ಆದರೆ ಅರ್ಜುನ್ ಸಾವಿನಲ್ಲೂ ಅಪ್ಪನ ಪ್ರೀತಿ ತೋರಿದ್ದಾನೆ ಎನ್ನುವುದು ಲಾರಿಯಲ್ಲಿ ಸಿಕ್ಕ ಕೆಲ ಆಟಿಕೆಗಳಿಂದ ಗೊತ್ತಾಗಿದೆ.

ಪತ್ನಿ ಮತ್ತು ಪುಟ್ಟ ಮಗುವೊಂದನ್ನು ಹೊಂದಿರುವ ಅರ್ಜುನ್ ಇನ್ನೇನು ತನ್ನ ಚಾಲನಾ ಕರ್ತವ್ಯ ಮುಗಿಸಿ ತನ್ನ ಮನೆಗೆ ಹೋಗುತ್ತೇನೆಂಬ ಅಗಾಧ ನಂಬಿಕೆಯಿಂದ ತನ್ನ ಪುಟ್ಟ ಮಗುವಿಗೆ ಇರಲಿ ಎಂದು ಕೆಲ ಆಟಿಕೆಗಳನ್ನು ಖರೀದಿಸಿದ್ದಾನೆ. ಅದರಲ್ಲಿ ತಾನು ಓಡಿಸುತ್ತಿರುವ ಲಾರಿ ಮಾದರಿಯನ್ನೇ ಹೋಲುವ ಪುಟ್ಟ ಟ್ರಕ್ ಕೂಡ ಇದೆ. ಇದನ್ನು ನೋಡಿದಾಗ ಎಂತಹ ಕಲ್ಲು ಹೃದಯದಲ್ಲೂ ಒಮ್ಮೆ ಕರುಣೆ ಚಿಮ್ಮದೇ ಇರಲು ಸಾಧ್ಯವೇ ಇಲ್ಲ. ಇದೀಗ ಗಂಗಾವಳಿ ನೀರಿನಡಿ ಸಿಕ್ಕ ಲಾರಿಯಲ್ಲಿ ಅರ್ಜುನ್ ತನ್ನ ಮಗನಿಗಾಗಿ ತಂದಿಟ್ಟುಕೊಂಡಿದ್ದ ಕೆಲ ಆಟಿಕೆಗಳು ಸಿಕ್ಕಿದ್ದು, ಇದು ಅರ್ಜುನ್ ತನ್ನ ಮಗನ ಮೇಲಿಟ್ಟ ಪ್ರೀತಿಯನ್ನು ತೋರಿಸುತ್ತದೆ.

ಅರ್ಜುನ್ ಬಯಸಿದ್ದೇ ಒಂದು, ವಿಧಿ ಆಡಿದ್ದೇ ಮತ್ತೊಂದು. ಅರ್ಜುನನನ್ನು ಕಳೆದುಕೊಂಡ ಅವರ ಮನೆಯವರಿಗೆ ಮತ್ತು ಪುಟ್ಟ ಮಗುವಿಗೆ ಭಗವಂತ ಆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದಷ್ಟೇ ಹೇಳಲು ಸಾಧ್ಯ.

ಗಮನಿಸಿ