ಕಾರವಾರ: ಕಟುಕರಿಗೆ ಕೂಡಾ ಹೃದಯ ಎನ್ನುವುದೊಂದು ಇರುತ್ತದೆ, ಆದರೆ ಈ ರಾಜಕಾರಣಿಗಳಿಗೆ ಅದು ಇರುವುದಿಲ್ಲ ಎನ್ನುವುದು ಪದೇಪದೇ ಸಾಬೀತಾಗುತ್ತಿದೆ. ಸೂತಕದ ಮನೆಯಲ್ಲಿಯೂ ಸಂಭ್ರಮಮಾಚರಣೆ ಮಾಡುವ ಖಯಾಲಿ ರಾಜಕೀಯ ವ್ಯಕ್ತಿಗಳಿಗೆ ಸಿದ್ಧಿಸಿರುವಂತಿದೆ. ಶಿರೂರು ದುರಂತ ಘಟನೆಯಲ್ಲಿ ಮನೆ-ಮಠ ತನ್ನವರನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರೆ‌, ಪ್ರಚಾರಗಿಟ್ಟಿಸಿಕೊಳ್ಳಲು ಬರುವ ರಾಜಕಾರಣಿಗಳಿಗೆ ಸನ್ಮಾನ ‌ಮಾಡುವ ಪ್ರವೃತ್ತಿಯಿಂದ‌ ಜನ ಬೇಸರಕ್ಕೆ‌‌ ಒಳಗಾಗಿದ್ದಾರೆ.‌

ಉತ್ತರಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೈಸರ್ಗಿಕ ವಿಕೋಪದಿಂದ ಗುಡ್ಡಕುಸಿತ ಉಂಟಾಗಿ ಅನೇಕ ಸಾವು ನೋವು ಸಂಭವಿಸಿರುವ ಶಿರೂರು ಹಾಗೂ ಉಳುವರೆ ಭಾಗದ ಪ್ರದೇಶವನ್ನು ವೀಕ್ಷಿಸಲು ಬಂದಿದ್ದ ಸಚಿವರು ಹಾಗೂ ಪಕ್ಷದ ರಾಜಕೀಯ ನಾಯಕರಿಗೆ ಶಾಲು, ಹಾರ-ತುರಾಯಿ ಹಾಕಿ, ನೆನಪಿನ ಕಾಣಿಕೆ ನೀಡಿ, ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಕುಣಿದುಕುಪ್ಪಳಿಸಿದ ಜಿಲ್ಲೆಯ ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ವರ್ತನೆಗೆ ಸಂತ್ರಸ್ತರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಇದನ್ನೂ ಓದಿ

ನಿಮ್ಮ ರಾಜಕೀಯ ಮೇಲಾಟಗಳಿಗೆ, ಪಕ್ಷದ ಪರವಾಗಿ ಪ್ರಚಾರ ಗಿಟ್ಟಿಸುವ ಹುಚ್ಚಾಟಗಳಿಗೆ ಅದರದ್ದೇ ಆದ ಸಮಯವಿದೆ. ಪ್ರತ್ಯೇಕ ವೇದಿಕೆಯಿದೆ. ಇಲ್ಲಿ ಗುಡ್ಡಕುಸಿದು ಎಳೆಯ ಮಕ್ಕಳೂ ಸೇರಿದಂತೆ ಹತ್ತಾರುಮಂದಿ ಜೀವಂತ ಸಮಾಧಿಯಾಗಿದ್ದಾರೆ. ಮೃತರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಅಲ್ಲಲ್ಲಿ ಬಿದ್ದಿವೆ. ಗುಡ್ಡಕುಸಿದ ಮಣ್ಣಿನಡಿಯಲ್ಲಿ ಹೂತುಹೋಗಿರುವ ಕೆಲವರಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕುಟುಂಬದ ಸದಸ್ಯರ ಆರ್ತನಾದ ಮುಗಿಲುಮುಟ್ಟಿದೆ.ಕೆಲವರು ಮನೆಯನ್ನು ಕಳೆದುಕೊಂಡು ವಾಸಿಸಲು ಸೂರು ಇಲ್ಲದೆ ಪರಿತಪಿಸುತ್ತಿದ್ದಾರೆ.

ಇಂತಹ ಭೀಬತ್ಸ ಸನ್ನಿವೇಶದಲ್ಲಿ ನಿಮ್ಮ ನಾಯಕರಿಗೆ ಭವ್ಯ ಸ್ವಾಗತಕೋರುವುದು, ನೆನಪಿನ ಕಾಣಿಕೆ ನೀಡುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುವುದು ಇವೆಲ್ಲಾ ಬೇಕಿತ್ತಾ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಅಷ್ಟಕ್ಕೂ ನಿಮ್ಮ ನಾಯಕರು ಬಂದಿರುವುದು ಸೂತಕದ ಕಾರ್ಮೋಡ ಕವಿದು ದುಃಖತಪ್ತರಾಗಿರುವ ಜನರಿಗೆ ಸಾಂತ್ವನ ಹೇಳುವುದಕ್ಕೆ ಹೊರತು ಯಾವುದೋ ಶುಭಕಾರ್ಯಕ್ಕಲ್ಲ. ಹೀಗಿರುವಾಗ ಪಕ್ಷದ ಶಾಲುಧರಿಸಿಕೊಂಡು ನಿಮ್ಮ ಸಂಭ್ರಮ ಯಾಕೆಬೇಕು ಇನ್ನಾದರೂ ಬಡವರ ಸಮಾಧಿಯ ಮೇಲೆ ರಾಜಕೀಯ ಸೌಧವನ್ನು ಕಟ್ಟಿ ಮೆರೆಯಲು ಹವಣಿಸುವ ರಾಜಕಾರಣಿಗಳಿಗೆ ಆ ಭಗವಂತ ಸದ್ಬುದ್ಧಿ ನೀಡಲಿ.