ಹೊನ್ನಾವರ : ಪರೇಶ್ ಮೇಸ್ತ ಮೃತರಾಗಿ ಐದು ವರ್ಷ ಗತಿಸಿದವು. ಆತನ ಸಾವಿನ ನಂತರ ಬಿಜೆಪಿ ಪಾಲಿಗೆ ದೃವತಾರೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಪರೇಶ್ ಮೇಸ್ತ ಹೆಸರು ಹೇಳಿ ಓಟು ಪಡೆದ ಬಿಜೆಪಿಗರು ಶಾಸಕರಾದರು ಎನ್ನುವುದು ಈಗ ಇತಿಹಾಸ.

ಕಳೆದ ಚುನಾವಣೆಯಲ್ಲಿ ಕುಮಟಾ, ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಪರೇಶ್ ಮೇಸ್ತನ ತಂದೆ ಹಾಗೂ ತಾಯಿಯನ್ನು ತಮ್ಮ ಎಸಿ ಕಾರಿನಲ್ಲಿ ಓಡಾಡಿಸಿ ಅವರ ಕಣ್ಣೀರಿನಿಂದಲೇ ಗೆದ್ದು ಬಂದರು. ಆದರೆ ಇಂದು ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತಾ ಹೊಟ್ಟೆ ತುಂಬಿಸಿಕೊಳ್ಳಲು ರಣ ಬಿಸಿಲಿನಲ್ಲಿ ದುಡಿದು ಸಂಸಾರ ನಡೆಸುತ್ತಿದ್ದಾರೆ. ಆದರೆ ಈ ಬಿಜೆಪಿಗರಿಗೆ ಈ ಬಾರಿ ಪರೇಶ ಮೇಸ್ತಾನ ಕುಟುಂಬ ನೆನಪಿಗೆ ಬರದೆ ಇರುವುದು ದುರಂತ‌.

ಪರೇಶ್ ಮೇಸ್ತ ಸಾವಿನ ಲಾಭ ಪಡೆಯಲು ಅವರ ತಂದೆ ಕಮಲಾಕರ ಮೇಸ್ತನನ್ನು ಬಿಜೆಪಿ ಬ್ರ್ಯಾಂಡ್ ಅಂಬಾಸಿಡರ್ ಅಂತೆ ಬಳಸಿಕೊಂಡ ಬಿಜೆಪಿ ನಾಯಕರು ತಾ ಮುಂದು ತಾ ಮುಂದು ಎನ್ನುವಂತೆ ದೇಶದ ಗೃಹ ಸಚಿವ ಅಮಿತ್ ಶಾರಿಂದ ಹಿಡಿದು ಬಿಜೆಪಿಯ ಘಟಾನುಘಟಿ ನಾಯಕರು ತಮ್ಮ ಕಾರಲ್ಲಿ ಕೂರಿಸಿಕೊಂಡು ಹಿಂದುಗಳ ಮತಕ್ಕೆ ಲಗ್ಗೆ ಇಟ್ಟಿದ್ರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಶಾಸಕರ ಆಯ್ಕೆಗೆ ಉದಾತ್ತ ಕೊಡುಗೆ ಕೊಟ್ಟ ಕಮಲಾಕರ ಮೇಸ್ತನ ಅವಶ್ಯಕತೆ 2023ರ ಚುನಾವಣೆಯಲ್ಲಿ ಬೀಳಲಿಲ್ಲ.
ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಬಿಜೆಪಿ ಶಾಸಕರಿಗೂ ಪರೇಶ್ ಮೇಸ್ತ ನೆನಪಾಗಲಿಲ್ಲ. ಅವರ ತಂದೆಯಂತೂ ಅವಶ್ಯಕತೆ ಬೀಳಲಿಲ್ಲ. ಅಮಾಯಕರ ಸಾವನ್ನು ವಿಜೃಂಭಿಸಿ ಓಟು ಪಡೆಯುವ ಬಿಜೆಪಿ ನಾಯಕರ ಕಪಟ ಈಗ ಬಟಾಬಯಲಾಗಿದೆ.

ಬಿಜೆಪಿಗೆ ತನು, ಮನ, ಧನ ಸಹಾಯ ನೀಡಿದ ಇದೇ ಕಮಲಾಕರ ಮೇಸ್ತ ರಣ ಬಿಸಿಲಿನಲ್ಲಿ ಜೀವನ ಸಾಗಿಸಲು ದುಡಿಯುತ್ತಿದ್ದಾರೆ.
ಮಾತೆತ್ತಿದರೆ ಹಿಂದುಗಳ ರಕ್ಷಣೆಗೆಂದೇ ಇದ್ದವರು ಎನ್ನುವ ಬಿಜೆಪಿ ನಾಯಕರಿಗೆ ಈ ಬಾರಿಯ ಚುನಾವಣೆಯಲ್ಲಿ ಪರೇಶ್ ಮೇಸ್ತ ಬೇಕಾಗಲಿಲ್ಲ. ಕಾರಣ ಆತನ ಸಾವಿನ ತನಿಖೆ ಸಿಬಿಐ ವರದಿಯಲ್ಲಿ ಸಹಜ ಸಾವೆಂದು ಬಂದಿರುವುದು ಇವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಡಬಲ್ ಎಂಜಿನ್ ಸರಕಾರ ಇರುವಾಗಲೇ ಸಿಬಿಐ ವರದಿ ಬಂದಿರುವುದರಿಂದ ಈ ವಿಷಯ ಮರೆಮಾಚಿ ಮತ ಬೇಟೆಗೆ ಇಳಿದರು ಮತದಾರರು ಮಾತ್ರ ಪರೇಶ್ ಮೇಸ್ತ ಕೇಸಿನ ಬಗ್ಗೆ ಬಿಜೆಪಿ ನಾಯಕರಿಗೆ ಹೋದಲ್ಲೆಲ್ಲ ಈ ಬಾರಿ ಪರೇಶ್ ಮೇಸ್ತ ಕುಟುಂಬವನ್ನ ನಿರ್ಲಕ್ಷ ಮಾಡಿದ್ದಕ್ಕೆ ಹಿಡಿಶಾಪ ಹಾಕುತ್ತಿದ್ದು, ಕಳೆದ ಬಾರಿ ನಮ್ಮ‌ ಪರೇಶನ ಹೆಸರಲ್ಲಿ ಗೆದ್ದು, ಕೋಟಿ ಕೋಟಿ ಹಣ‌ ಮಾಡಿಕೊಂಡಿರುವ ನಿಮಗೆ ಪರೇಶ ಮೇಸ್ತನ ಕುಟುಂಬದ ಹನಿ ಹನಿ ಕಣ್ಣೀರ ನಿಮ್ಮಗೆಲ್ಲಾ ತಟ್ಟದೆ ಇರದು ಎನ್ನುತ್ತಿದ್ದಾರೆ.

ಮಗನ ಸಾವಿನ ಲಾಭ ಪಡೆದ ಬಿಜೆಪಿ ನಾಯಕರ ವರ್ತನೆ ಬಗ್ಗಂತೂ ಹೆತ್ತ ತಂದೆ ಕಮಲಾಕರ ಮೇಸ್ತ ಸರಿಯಾಗಿ ಬುದ್ದಿ ಕಲಿಸಲು ನಿರ್ಧರಿಸಿದ್ದಾರೆ.