ಕಾರವಾರ: ಬಿಜೆಪಿ ಸರ್ಕಾರದಿಂದ ದೇಶದ ಮೂಲೆ ಮೂಲೆಗೂ ಯೋಜನೆಗಳು ತಲುಪಿ ನಿರಂತರ ಅಭಿವೃದ್ಧಿಯಾಗಿದೆ.ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರನ್ನು ಗೆಲ್ಲಿಸುವಂತೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ವಿನಂತಿಸಿದರು.

ಕಾರವಾರದ ಬೈತಕೋಲ್‌ದಲ್ಲಿ ಬಿಜೆಪಿ ಅಭ್ಯರ್ಥಿಯಾದ ರೂಪಾಲಿ ನಾಯ್ಕ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.ದೇಶದ ಉನ್ನತಿಗೆ ಬಿಜೆಪಿ ಸರ್ಕಾರ ಭದ್ರ‌ ಬುನಾದಿಯನ್ನು ಹಾಕಿದೆ. ಏಳು ದಶಕಗಳ ಕಾಲ ಕಾಂಗ್ರೆಸ್‌ ಸರ್ಕಾರ ಅಧಿಕಾರ ನಡೆಸಿದರು‌. ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. 2014 ರ ನಂತರ ಪ್ರಧಾನಿ ನರೇಂದ್ರ ಮೋದಿಜೀ ನೇತೃತ್ವದ ಸರ್ಕಾರದ ಸಾಧನೆ ವಿಶ್ವವನ್ನೇ ಮೆಚ್ಚಿಸುವಂತಹ ಕಾರ್ಯಮಾಡುತ್ತಿದೆ ಎಂದರು.

ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.‌ನಾಯ್ಕ ಮಾತನಾಡಿ, ಹಿಂದಿನ ಸರ್ಕಾರಗಳು ಮೀನುಗಾರ, ಹಾಲಕ್ಕಿ ಹೀಗೆ ವಿವಿಧ ಸಮಾಜವನ್ನು ಕಡೆಗಣಿಸಿದೆ. ನಮ್ಮ ಡಬಲ್‌ ಇಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮೀನುಗಾರ ಸಮಾಜದವರಿಗೆ ಕೂಡ ಕೃಷಿಕರ ಮಾದರಿಯಲ್ಲಿ ಕಿಸಾನ್ ಕಾರ್ಡ್‌ನ್ನು ನೀಡಿದ್ದೇವೆ. ಮೀನುಗಾರ ಸಮಾಜದವರಿಗೆ ಯಾವುದೇ ರೀತಿಯ ಅನ್ಯಾಯವನ್ನು ಮಾಡಿಲ್ಲ ಎಂದರು.

ಬಿಜೆಪಿ ಸರ್ಕಾರ ಬಂದಾಗ ಸಾಲಮನ್ನಾ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಲಮನ್ನಾ ಮಾಡಿದರು. ಅಲ್ಲದೇ, ಮೀನುಗಾರ ಸಮಾಜದವರಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ‌ ಎಂದರು.

ಮೀನುಗಾರರಿಗೆ ಅವಶ್ಯಕವಾಗಿರುವ ಮಾಜಾಳಿಯಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಬೆಳಂಬರದಲ್ಲಿ ಬಂದರು ಇದರಿಂದ ವಿವಿಧ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ. ತಾವೆಲ್ಲರೂ ಆರ್ಥಿಕವಾಗಿ ಸದೃಢರಾಗಬಹುದಾಗಿದೆ. ಒಣಮೀನು ಪ್ಯಾಕೆಟ್ ಮಾಡುವುದು. ಸಣ್ಣ ಸಣ್ಣ ಉದ್ಯಮ ಸ್ಥಾಪನೆ, ಮೂಲಭೂತ ಸೌಕರ್ಯಗಳನ್ನು ಮಾಡಲು ಅನುದಾನವನ್ನು ಒದಗಿಸಿದ್ದೇನೆ ಎಂದರು.ಮೀನುಗಾರರ ಪರವಾಗಿಯೇ ಇದ್ದೇನೆ. ನನ್ನ ವಿರುದ್ದ ಅಪಪ್ರಚಾರ ಮಾಡಿದ್ದರು. ಸಾಗರ ಮಾಲಾ ಯೋಜನೆಯಲ್ಲಿ ಅಮಾಯಕರನ್ನು ಬಳಸಿಕೊಂಡರು. ಕಾಂಗ್ರೆಸ್ ಸರ್ಕಾರ ಇದ್ದಾಗ ಅದರ ಅಡಿಪಾಯ ಹಾಕಿದ್ದರು. ನನ್ನ ಕ್ಷೇತ್ರದ ಜನರಿಗೆ ಯಾವುದು ಅವಶ್ಯಕವೋ ಅದರ ಪರವಾಗಿ ನಾನು ಇರುತ್ತೇನೆ. ಅವರಿಗೆ ಬೇಡವಾದಲ್ಲಿ ನಾನು ಅದನ್ನು ವಿರೋಧಿಸುತ್ತೇನೆ ಎಂದರು.
ಮೀನುಗಾರರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರಿಕೆ ಹಾಗೂ ನೀರಾವರಿಗಾಗಿ ಹೊಸ ಸಚಿವಾಲಯವನ್ನು ಪ್ರಾರಂಭಿಸಿದರು. ಕಿಸಾನ್‌ ಕಾರ್ಡ್‌ ಮೂಲಕ ಎರಡು ಲಕ್ಷ ರೂ.ವರೆಗೆ ಸಾಲವನ್ನು ಒದಗಿಸುವ ಯೋಜನೆಯನ್ನು ಮೋದಿ ಅವರು‌‌ ಜಾರಿಗೆ ತಂದಿದ್ದರೆ. ಈ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಆಗುತ್ತಿವೆ. ಜನರಿಗೆ ಅನುಕೂಲವಾಗುವಂತೆ ಅವಶ್ಯ ಕಾಮಗಾರಿಗಳನ್ನು ತಂದಿದ್ದೇನೆ. ಈ ಬಾರಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ನನಗೆ ಸ್ಪರ್ಧಿಸಲು ಅವಕಾಶವನ್ನು ನೀಡಿದೆ. ನೀವೆಲ್ಲರೂ ನನಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಶಾಸಕರಾದ ಗಣಪತಿ ಉಳ್ವೇಕರ್, ಶಾಸಕರಾದ ಪ್ರೇಮೆಂದ್ರ ಶೇಟ್‌, ಮಂಡಲಾಧ್ಯಕ್ಷರಾದ ನಾಗೇಶ ಕುರ್ಡೇಕರ, ನಿತಿನ್ ಪಿಕಳೆ, ಜಿಲ್ಲಾ ವಕ್ತಾರರಾದ ನಾಗರಾಜ ನಾಯಕ, ಪ್ರಮುಖರಾದ ಮನೋಜ ಭಟ್‌, ಪಿ.ಪಿ.ನಾಯ್ಕ ಉಪಸ್ಥಿತರಿದ್ದರು.