ಸುದ್ದಿಬಿಂದು ಬ್ಯೂರೋ
ಶಿರಸಿ :
ಭಾರೀ ಗಾಳಿ ಮಳೆಯಿಂದಾಗಿ ಅಡಿಕೆ,ಬಾಳೆ ತೋಟ ಹಾಗೂ ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿರುವ ಘಟನೆ ಬಿಸಲಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಮುಡೇಬೈಲ್ ನಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ,ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಅಡಿಕೆ, ಬಾಳೆ ತೋಟ ಸೇರಿ ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಕ್ಷ್ಮೀ ಗಣಪತಿ ಗೌಡ ಅವರಿಗೆ ಸೇರಿದ ಅಡಿಕೆ,ಬಾಳೆ ಗಿಡ,ಮರಗಳು ಸಂಪೂರ್ಣವಾಗಿ ನೆಲಕ್ಕುರುಳಿದ್ದು, ಇದರ ಜೊತೆ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಸಹ ಭಾರೀ ಗಾಳಿಯಿಂದ ಹಾರಿಹೋಗಿದ್ದು, ತೋಟ ಹಾಗೂ ಮನೆ ಸೇರಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ‌. ಇನ್ನೂ ಶಂಕುತಲಾ ನಾಯ್ಕ, ಅವರ ಮನೆಯ ಮೇಲ್ಛಾವಣಿ ಹಾರಿ ಹೋದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದರ ಜೊತೆಗೆ ಶಂಕರ ಲಕ್ಷ್ಮಣ ನಾಯ್ಕ ಅವರಿಗೆ ಸೇರಿದ ಬಾಳೆ ಹಾಗೂ ಅಡಿಕೆ ಗಿಡಗಳು ದಾಳಿಯಿಂದಾಗಿ ನೆಲಕ್ಕುರುಳಿದ್ದು, ಲಕ್ಷಾಂತರ ‌ರೂಪಾಯಿ ಹಾನಿ ಆಗಿದೆ.

ಮನೆಯಿಂದಾಗಿ ಹಾನಿ ಉಂಟಾಗಿರುವ ಸುದ್ದಿ ತಿಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.