suddibindu.in
ಅಂಕೋಲಾ : ರಾತ್ರಿ ಸಾಕು ಮನೆಯಿಂದ ಹೊರ ಬೀಳಲು ಹೆದರುತ್ತಿರುವ ಜನ. ಊರಿನ ಮುಂದಿನ ಬಾವಿಯ ಸಮೀಪ ಕೇಳಿ ಬರುವ ಗಜ್ಜೆಯ ಝಲಝಲ ಸದ್ದು ಈ ಗ್ರಾಮಸ್ಥರ ನಿದ್ದೆಯನ್ನೆ ನುಂಗಿದೆ. ಇಂತಹ ಒಂದು ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿ ಬಾನಾಮತಿ ಕಾಟಕ್ಕೆ ಒಳಗಾಗಿರೋದು ಪಟ್ಟಣದ ಹುಲಿದೇವರವಾಡಾದ ಗಣಪತಿ ದೇವಸ್ಥಾನದ ಬಾಬಿಮನೆಯ ಪ್ರದೇಶ.

ಪಟ್ಟಣದಿಂದ ಕೇವಲ 2 ಕೀಮಿ ಅಂತರದಲ್ಲಿ ಹುಲಿದೇವರವಾಡಾ ಎಂಬ ಗ್ರಾಮವಿದೆ. ಇಲ್ಲಿ ಹೆಚ್ಚಾಗಿ ದಲಿತ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಭಾಂಧವರು ವಾಸಿಸುತ್ತಾರೆ. ಇಲ್ಲಿಯ ಜನ ಸುಶಿಕ್ಷಿತರು. ಇಷ್ಟು ದಿನ ಊರಲ್ಲಿ ಯಾವುದೇ ತೊಂದರೆ ಇಲ್ಲದೆ ನೆಮ್ಮದಿಯಿಂದ ಜೀವನ ಕಟ್ಟಿಕೊಂಡಿದ್ದ, ಇಲ್ಲಿನ ಜನರು ಕಳೆದ 20 ದಿನಗಳಿಂದ ನಿದ್ದೆ ಬಿಟ್ಟಿದ್ದಾರೆ. ರಾತ್ರಿ 10-30 ರಿಂದ ರಾತ್ರಿ 12 ಗಂಟೆಯ ತನಕ ಇಲ್ಲಿನ ವ್ಯಕ್ತಿಯೊಬ್ಬರ ಮನೆಯ ಮುಂದಿನ ಬಾವಿಯ ಎದುರಿನ ಗೇಟ್ ಬಳಿ ಝಲ್‌ಝಲ್ ಸದ್ದು ಕೇಳಿ ಬರುತ್ತಿದೆ. ಈ ಸದ್ದು ಗ್ರಾಮದ ಎಲ್ಲರ ಜನರ ಕಿವಿಗೆ ಭೀಳುತ್ತಿರುವದು ವಿಶೇಷವೆನಿಸಿದೆ. ಹೀಗಾಗಿ ಇಲ್ಲಿನ ಜನರು ಭಯಭೀತರಾಗಿ ನಿದ್ದೆ ಬಿಟ್ಟು ಅತಂತ್ರರಾಗಿದ್ದಾರೆ.

ಇದನ್ನೂ ಓದಿ

ಹುಲಿದೇವರವಾಡದಲ್ಲಿ ಕಳೆದ ಕೆಲ ವರ್ಷಗಳಿಂದ ಒಂದು ಕುಟುಂಬ ವಾಸ ಮಾಡಿಕೊಂಡು ಬಂದಿದೆ. ಇವರ ವಾಸಿಸುವ ಮನೆಯ ಬಲ ಬದಿಯಲ್ಲಿ ಬಾವಿಯು ಇತ್ತು. ಆದರೆ ಕಳೆದ 40ವರ್ಷಗಳಿಂದ ಈ ಬಾವಿಯನ್ನು ಉಪಯೋಗಿಸುತ್ತಿರಲಿಲ್ಲ, ಕಳೆದ 30 ದಿನದ ಹಿಂದೆ ಈ ಬಾವಿಯನ್ನು ಸ್ವಚ್ಛ ಮಾಡಿ, ಹೋಮ ಹಾಕಿ ಉಪಯೋಗಿಸಲು ಪ್ರಾರಂಬಿಸಿದರಂತೆ.

ಈ ಬಾವಿಯಲ್ಲಿ ಪ್ರೇತಾತ್ಮ ಇದೆ ಎಂದು ಇಲ್ಲಿನ ಜನರು ಅನೇಕ ವರ್ಷಗಳಿಂದ ನಂಬಿಕೊಂಡಿದ್ದರು. ಕಾಕತಾಳೀಯವೆಂಬಂತೆ ಈ ಬಾವಿಯ ಉಪಯೋಗಿಸಲು ಪ್ರಾರಂಬಿಸಿದ್ದ ದಿನದಿಂದಲೆ, ಬಾವಿಯ ಸಮೀಪದಿಂದ ಗೆಜ್ಜೆಯ ಸದ್ದು ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರೇ ಅಭಿಪ್ರಾಯ ಪಡುತ್ತಾರೆ. ಈ ಪ್ರೇತಕ್ಕೆ ಈ ಮನೆಯವರು ಸರಿಯಾಗಿ ದಿಗ್ಭಂಧನ ಹಾಕಿಲ್ಲ. ಹಾಗಾಗಿ ಅದು ಊರಿನ ಜನತೆಗೆ ತೊಂದರೆ ಕೊಡುತ್ತಿದೆ ಎನ್ನುವದು ಗ್ರಾಮಸ್ಥರ ಆರೋಪ. ಹೀಗಾಗಿ ಸುಮಾರು 40ಕ್ಕೂ ಹೆಚ್ಚು ಇಲ್ಲಿನ ಜನರು ಈ ಮನೆಯ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆದಿದೆ. ಆದರೆ ಈ ಮನೆಯವರು ಮಾತ್ರ ಈ ಪ್ರೇತದ ಗೆಜ್ಜೆ ಸದ್ದು ನಮಗೇನು ಕೇಳಿ ಬರುತ್ತಿಲ್ಲ. ನಾವು ಹೋಮ ಹಾಕಿಸಿಕೊಂಡು ನೀರನ್ನು ಉಪಯೋಗಿಸುತ್ತಿದ್ದೇವೆ. ನಿಮಗೆ ಬೇಕಾದರೆ ಸರಿಪಡಿಕೊಳ್ಳಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಮುಸ್ಲಿಂ ಭಾಂದವರು ಈ ಸಮಸ್ಯೆಯ ಕುರಿತು ಖ್ಯಾತ್ ಜ್ಯೋತಿಷಿ ಮೋರೆ ಹೋಗಿದ್ದರು.ಕವಡೆ ಹಾಕಿದ ಜ್ಯೋತಿಷಿ ಇಲ್ಲಿ ದೊಡ್ಡ ಸಮಸ್ಯೆ ಇದೆ.ಎರಡು ಜೀವ ಹೋದರು ಹೋಗಬಹುದು.ಇಲ್ಲಿ ಬಾನಾಮತಿ ಕಾಟ ಇದೆ. ಆದಷ್ಟು ಬೇಗ ಇದನ್ನು ಸರಿ ಪಡಿಸಿಕೊಳ್ಳುವದು ಉತ್ತಮ ಎಂದು ಅಬಿಪ್ರಾಯ ವ್ಯಕ್ತಪಡಿಸಿ ಇದರ ಪರಿಹಾರಕ್ಕೆ 40 ಸಾವಿರ ಹಣ ಖರ್ಚು ಆಗಬಹುದು ಎಂದು ಹೇಳಿದ್ದರಂತೆ. ಏನಾದರೂ ಸರಿ ಊರಿನವರೆಲ್ಲರು ಸೇರಿ 40 ಸಾವಿರ ರೂ ಹೊಂದಿಸಲು ಹೋದರೆ, ಒಬ್ಬರು ಕೊಟ್ಟರೆ, ಇನ್ನೊಬ್ಬರು ತನ್ನ ಬಳಿ ಹಣ ಇಲ್ಲಾ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರಿಂದ ಜ್ಯೋತಿಷಿಯ 40 ಸಾವಿರದ ಪರಿಹಾರದ ಕಥೆ ಅರ್ಧಕ್ಕೆ ನಿಲ್ಲುವಂತಾಗಿದೆ.

ರಾತ್ರಿ 10-30 ಆಯಿಯೆಂದರೆ ಸಾಕು ಇಲ್ಲಿನ ಜನತೆಯ ಎದೆಯ ಬಡಿತ ಹೆಚ್ಚಾಗುತ್ತದೆ.ಇದರ ಉಸಾಬರಿಯೆ ಬೇಡ ಎಂದು ಕೆಲವರು ತಮ್ಮ ನೆಂಟರಿಷ್ಟರೋ, ಪರಿಚರಿಯಸ್ಥರ ಮನೆಗೆ ತೆರಳಿ ರಾತ್ರಿ ಕಳೆಯುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.ಅಷ್ಟೇ ಅಲ್ಲ ಗಜ್ಜೆ ಶಭ್ದದ ಭಯದಿಂದ ಇಬ್ಬರು ತೀವ್ರ ಜ್ವರದಿಂದಲೂ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರೆ ತಿಳಿಸುತ್ತಾರೆ.

ಇಲ್ಲಿ ಗೆಜ್ಜೆ ಸದ್ದು ಕೇಳಿ ಬರುತ್ತಿದೆ. ದಯವಿಟ್ಟು ಬೇಗ ಬನ್ನಿ ಎಂದು 112 ನ ಮೂಲಕ ಪೊಲೀಸ್ ಸಹಾಯವಾಣಿಗೆ ಇಲ್ಲಿನ ಜನರು ಕರೆ ಮಾಡಿದ್ದರಂತೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಈ ಬಾನಾಮತಿ ಕಾಟದ ಬಗ್ಗೆ ಗ್ರಾಮಸ್ಥರು ವಿವರಿಸಿದ್ದಾರೆ. ಆದರೆ ನೀವೆನಾದ್ರೂ ಮನುಷ್ಯರಿಂದ ತೊಂದರೆ ಆದಲ್ಲಿ ಹೇಳಿ, ಈ ಬಾನಾಮತಿಯನ್ನು ನಾವು ಎಲ್ಲಿಂದ ಹಿಡಿದುಕೊಂಡು ಹೋಗೋದು ಎಂದು ಅಸಹಾಯಕರಾಗಿ ಮುಗುಳನಗುತ್ತಲೆ ಜೀಪ್‌ನ್ನೇರಿ ಹೊರಟು ಹೋಗಿದ್ದಾರೆ.

ಬಾನಾಮತಿಯ ಕಾಟಕ್ಕೆ ಇಲ್ಲಿನ ಹುಲಿದೇವರವಾಡಾದ ಜನ ಅತಂತ್ರರಾಗಿದ್ದು, ಯಾವಾಗ ಇಲ್ಲಿನ ಬಾನಾಮತಿಯ ಬಾನಗಡಿ ಹೊರ ಬೀಳುತ್ತದೆಯೋ ಕಾದು ನೋಡಾಬೇಕಾಗಿದೆ.