suddibindu.in
ಕಾರವಾರ: ಉತ್ತರಕನ್ನಡ ಜಿಲ್ಲೆಯೂ ಕನ್ನಡ ನಾಡಿನ ಪ್ರಭಾವಾವಳಿಯಂತಿರುವ ಸುಂದರ ಕಡಲ ತೀರ, ದಟ್ಟ ಕಾನನಗಳು, ಸಾವಿರಾರು ಜೀವ ವೈವಿಧ್ಯತೆಯನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಿರುವ ಪಶ್ಚಿಮ ಘಟ್ಟಗಳನ್ನು ಹೊಂದಿದ ಒಂದು ಅಪರೂಪದ ಜಿಲ್ಲೆ. ಇಂತಹ ಸುಸಂಸ್ಕ್ರತ ಜಿಲ್ಲೆಯಲ್ಲಿ ಈಗ ಅಕ್ರಮ ಹೋಮ್ ಸ್ಟೇ ಗಳ ಹಾವಳಿ ಹೆಚ್ಚಾಗಿದ್ದು, ಇದರ ದುಷ್ಪರಿಣಾಮ ಈಗ ಜಿಲ್ಲೆಯ ಪರಿಸರದ ಹಾಗೂ ಜನಜೀವನದ ಮೇಲೂ ಬೀಳುತ್ತಿರುವದು ಆತಂಕದ ಸಂಗತಿಯಾಗಿದೆ.
ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯ ಸಡಿಲಿಕೆ ಮೂಲಕ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ವಸತಿ ಮತ್ತು ಊಟಕ್ಕಾಗಿ ಮನೆಯಲ್ಲಿಯೇ ವ್ಯವಸ್ಥೆ ಮಾಡಬಹುದು ಎಂದು, ಕಾನೂನಿನ ಚೌಕಟ್ಟಿನಲ್ಲಿಯೇ ಹೋಮ್ ಸ್ಟೇ ಹೆಸರಲ್ಲಿ ಪರವಾನಿಗೆ ನೀಡುತ್ತಿದೆ. ಈ ಪರವಾನಿಗೆಯಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಕೇವಲ ನಾಲ್ಕು ಕೋಣೆ ಹಾಗೂ ಒಂದು ಅಡುಗೆ ಕೋಣೆಯನ್ನು ಹೊಂದಿದ ಮನೆಯಿರಬೇಕು. ಈ ಮನೆಯಲ್ಲಿ ಹೋಸ್ಟೇ ನಡೆಸಲು ಸ್ಥಳೀಯ ಸಂಸ್ಥೆಯ ಪರವಾನಿಗೆ ಹೊಂದಿರಬೇಕು. ಮತ್ತು ಹೋಮ್ ಸ್ಟೇ ನಡೆಸುವ ಮಾಲೀಕರ ಮೇಲೆ ಯಾವುದೇ ಪೋಲಿಸ್ ಪ್ರಕರಣ ಇರಬಾರದು ಸೇರಿದಂತೆ ಅನೇಕ ನಿಬಂಧನೆಗಳನ್ನು ಹಾಕಿದೆ.
ಇದನ್ನೂ ಓದಿ
- Fengal Cyclone:ಫೆಂಗಲ್ ಚಂಡಮಾರುತ ಹಿನ್ನಲೆ : ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಡಿಸಿ
- Earthquake Clarification/ಭೂ ಕಂಪನದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ದಾಖಲೆ ಇಲ್ಲ
- ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ : ಮನೆ ಬಿಟ್ಟು ಓಡಿದ ಜನ
ಆದರೆ ಸರ್ಕಾರ ನೀಡಿದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡ ಅನೇಕರು ಹೋಮ್ ಸ್ಟೇ ಪರವಾನಿಗೆ ಪಡೆದು ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಮೂಲಕ ರೆಸಾರ್ಟ್ ಗಳನ್ನೇ ನಿರ್ಮಿಸಿದ್ದಾರೆ. ಅದರಲ್ಲೂ ಜಿಲ್ಲೆಯ ಕರಾವಳಿ ಪ್ರದೇಶಗಳಾದ ಗೋಕರ್ಣ, ಬಾಡ, ಕಾಗಾಲ, ಹೊನ್ನಾವರ, ಭಟ್ಕಳದಲ್ಲಿ ಶೆಕಡಾ 90% ಪ್ರತಿಶತ ಹೋಮ್ ಸ್ಟೇ ಕಟ್ಟಡಗಳು ಸಿ.ಆರ್.ಝಡ್ ನಿಯಮ ಗಾಳಿಗೆ ತೂರಿ, ಸಮುದ್ರ ಅಲೆಯ ಬಿಂದುವಿನಿಂದ ಕೇವಲ 100 ಮೀಟರ್ ಅಂತರದಲ್ಲಿಯೇ ಇವೆ.
ಇನ್ನೂ ದಾಂಡೇಲಿ ಮತ್ತು ಹೊನ್ನಾವರದಲ್ಲಿ ಕಾಳಿ ಹಾಗೂ ಶರಾವತಿ ನದಿ ತೀರಗಳಲ್ಲಿಯೇ ಬೃಹತ್ ಕಟ್ಟಡದ ಹೋಮ್ ಸ್ಟೇ ಹೆಸರಿನ ರೆಸಾರ್ಟ್ ನಿರ್ಮಾಣವಾಗಿದೆ. ಈ ಎಲ್ಲಾ ಕಟ್ಟಡಗಳಿಂದ ಸಿ.ಆರ್.ಝಡ್ ನಿಯಮದ ಸ್ಪಷ್ಟ ಉಲ್ಲಂಘನೆಯಾದರೂ ಸಂಬಂಧಿಸಿದ ಇಲಾಖೆಗಳು ಮಾತ್ರ ಕಣ್ಮಿಚ್ಚಿ ಕುಳಿತಿರುವುದು ವಿಪರ್ಯಾಸ.
ಇನ್ನೂ ಅನೇಕ ಹೋಮ್ ಸ್ಟೇಗಳು ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸುವ ಹೆಸರಲ್ಲಿ ವ್ಯಭಿಚಾರರಿಗಳ ಕೂಪವಾಗಿದೆ. ಕಳೆದ ವರ್ಷ ಕುಮಟಾ ತಾಲೂಕಿನ ಜೆಷ್ಠಪುರದ ನೇಸರ ಹೋಮ್ ಸ್ಟೇ ನಲ್ಲಿ ನಡೆದ ದಾಳಿಯಿಂದ ಎಂಟು ಯುವತಿಯರ ರಕ್ಷಣೆ ಮಾಡಿರುವ ಪ್ರಕರಣ, ಹೋಮ್ ಸ್ಟೇ ಹೆಸರಲ್ಲಿ ಮಾಂಸದಂದೆ ನಡೆಸುತ್ತಿರುವುದಕ್ಕೆ ಕೈಗನ್ನಡಿಯಂತಿದೆ.
ಎಲ್ಲಾ ಹೋಮ್ ಸ್ಟೇ ಗಳಲ್ಲಿಯೂ ಆಗಮಿಸಿದಂತ ಪ್ರವಾಸಿಗರಿಗೆ ಮದ್ಯಪಾನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.ಅಬಕಾರಿ ನಿಯಮದ ಪ್ರಕಾರ ಪರವಾಹಿಗೆ ಪಡೆದ ವರ್ತಕರು ಮಾತ್ರ ರಾಜ್ಯದಲ್ಲಿ ಮದ್ಯವ್ಯಾಪಾರ ಮಾಡಬೇಕೆಂಬ ನಿಯಮವಿದ್ದರೂ, ಹೋ ಸ್ಟೇ ಮಾಲಿಕರು ಯಾವ ಪರವಾನಿಗೆ ಪಡೆದು ಮದ್ಯ ವ್ಯಾಪಾರ ಮಾಡುತ್ತಿದ್ದಾರೆ ಎಂದು ತನಿಖೆಯಿಂದ ಹೊರಬರಬೇಕಿದೆ. ಇನ್ನೂ ಈ ಹೋಮ್ ಸ್ಟೇ ಹೆಸರಿನ ಅವ್ಯವಹಾರದ ಕೂಪದಲ್ಲಿ ಜಿಲ್ಲೆಯೆ ಪ್ರಖ್ಯಾತ ರಾಜಕಾರಣಿಕಳಿಂದ ಹಿಡಿದು ಮರಿ ಪುಡಾರಿಗಳ ಕೈವಾಡವು ಅಡಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ..
ಇನ್ನೂ ಈ ಅನಾಚಾರಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಕೂಗೂ ಜಿಲ್ಲೆಯೆ ಅನೇಕ ಹೋರಾಟಗಾರರಿಂದ ಕೇಳಿಬಂದಿದೆ. ಅವರ ಪ್ರಕಾರ ” ರಜಾದಿನಗಳಲ್ಲಿ ಮಾಜಾ ಉಡಾಯಿಸಲು ಈ ಅಧಿಕಾರಿಗಳೇ ತಮ್ಮ ಕುಟುಂಬ ಸಮೇತರಾಗಿ ಇದೇ ಅಕ್ರಮ ಹೋಮ್ ಸ್ಟೇಗೆ ಆಗಮಿಸುತ್ತಾರೆ. ಇಂಥಹ ಅಧಿಕಾರಿಗಳು ನಮ್ಮಂಥವರು ನೀಡಿದ ದೂರಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ” ಎಂದು ಪ್ರಶ್ನಿಸುತ್ತಾರೆ.
ಹೋಮ್ ಸ್ಟೇ ಹೆಸರಿನ ಕರಾಳ ರೆಸಾರ್ಟ್ ದಂಧೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದಿರುವುದರಿಂದಲೇ ಇಂದು ಜಿಲ್ಲೆಯಲ್ಲಿ ರೆಸಾರ್ಟ್ ಗಳು ನಾಯಿಕೊಡೆಗಳಂತೆ ಮೇಲೆಳುತ್ತಿವೆ. ತಕ್ಷಣ ಈ ಎಲ್ಲಾ ಕರಾಳ ದಂಧೆಗೆ ಕಡಿವಾಣ ಹಾಕದೇ ಇದ್ದಲ್ಲಿ ಜಿಲ್ಲೆಯ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇವವಿಲ್ಲ. ಈ ವರದಿಗೂ ಎಚ್ಚೆತ್ತುಕೊಳ್ಳದೇ ಅಧಿಕಾರಿಗಳು ಜಾಣ ಕುರುಡುತನ ತೋರಿದ್ದಲ್ಲಿ “ಸುದ್ದಿಬಿಂದು” ಈ ಪ್ರಕರಣವನ್ನೇ ಅಭಿಯಾನವಾಗಿ ಕೈಗೊಳ್ಳಲಿದೆ.