suddibindu.in
ಕುಮಟಾ : ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದಂಗಡಿಗಳು ನಾಯಿಕೊಡೆಗಳಂತೆ ಉದ್ಬವವಾಗುತ್ತಿದ್ದು, ಕಳಪೆ ಗುಣಮಟ್ಟದ ಮದ್ಯಪಾನದಿಂದ ಬಾಳಿ,ಬದುಕಬೇಕಾಗಿದ್ದ ಯುವಕರು ಪ್ರಾಣಕಳೆದುಕೊಳ್ಳುವಂತಾಗಿದೆ.

ಕೇವಲ 35 ರಿಂದ 40 ವರ್ಷಕ್ಕೆ ಮಸಣದ ಹಾದಿ ಹಿಡಿಯುತ್ತಿರುವುದು ಗ್ರಾಮದಲ್ಲೂ ವರದಿಯಾಗುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾಗಿದ್ದ ಅಬಕಾರಿ ಅಧಿಕಾರಿಗಳು ಕಚೇರಿಯಲ್ಲೇ ಕುರ್ಚಿ ಬಿಸಿಮಾಡಲು ಕುಳಿತ ಪರಿಣಾಮಾಣ ಗ್ರಾಮ ಗ್ರಾಮದ ಗೂಡಂಗಡಿಗಳೆಲ್ಲ ಹೈಟೆಕ್ ಬಾರುಗಳಾಗಿ ಪರಿವರ್ತನೆಯಾಗಿದೆ.ಮೆಡಿಸಿನ್ ತಯಾರಿಕೆಯಲ್ಲಿ ಬಳಸಲಾಗುವ ಕಚ್ಚಾಸ್ಪಿರೀಟ್ ಅನ್ನು ಕಾಳಸಂತೆಯಲ್ಲಿ ಖರಿದಿಸಿ, ಅದಕ್ಕೆ ಸರಾಯಿ ಪ್ಲೇವರ್ ಬರುವ ಕೆಲ ಮಿಶ್ರಣ ಬೆರೆಸಿ,ಈ ಕಚ್ಚಾ ಸರಾಯಿ ತಯಾರು ಮಾಡುವ ಬಹುದೊಡ್ಡ ಜಾಲವೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ದೂರು ಈ ಮೊದಲಿನಿಂದಲೂ ಕೇಳಿಬರುತ್ತಿದೆ.

ಇದನ್ನೂ ಓದಿ

ಇನ್ನೂ ಈ ಕಳಪೆ ಗುಣಮಟ್ಟದ ಮದ್ಯತಯಾರಕರಿಗೆ ಹಳ್ಳಿಗಳಲ್ಲಿನ ಗೂಡಂಗಡಿಗಳೇ ಮೊದಲ ಟಾರ್ಗೇಟ್..! ಗ್ರಾಮೀಣ ಬಾಗದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಯುವಕರು ವೈನ್ ಶಾಪಿಗೆ ಹೋಗಿ ಅಲ್ಲಿನ ದುಬಾರಿ ಬೆಲೆಯ ಮದ್ಯ ಖರಿದೀಸಿ ಕುಡಿಯಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ, ಗೂಡಂಗಡಿಯಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಕಳಪೆ ಗುಣಮಟ್ಟದ ಮದ್ಯವನ್ನೇ ಗಂಟಲು ಪೂರ್ತಿ ಕುಡಿದು ಮಸಣದ ದಾರಿಯತ್ತ ಸಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

ಜಡ್ಡು ಹಿಡಿದ ಅಧಿಕಾರಿ ವರ್ಗದ ನಿಷ್ಕ್ರೀಯತೆಯಿಂದಾಗಿ ಅಕ್ರಮ ಸರಾಯಿ ಮಾರಾಟ ಮಾಡುವ ಗೂಡಂಗಡಿಗಳ ಮಾಲೀಕರು ಮದ್ಯದ ದೊರೆ ಮಲ್ಯನನ್ನೇ ಮೀರಿಸುವ ಕುಬೇರರಂತೆ ಕೊಬ್ಬಿದ್ದಾರೆ.ಗೂಡಂಗಡಿಯಲ್ಲಿ ನಡೆಯುವ ಅವ್ಯವಹಾರದ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೇ ದಾಳಿ ಮಾಡುವ ಬದಲು,ದೂರು ನೀಡಿದವರ ಮಾಹಿತಿ ಸೋರಿಕೆ ಮಾಡಿ ಮತ್ತೆ ದೂರು ನೀಡದಂತೆ ಬೆದರಿಕೆ ಹಾಕಿಸುವ ಕೃತ್ಯಕೂಡ ನಡೆದಿದೆ ಎಂಬ ಮಾತೂ ಕೂಡ ಕೇಳಿಬಂದಿದೆ.

ಇನ್ನೂ ಈ ಗೂಡಂಗಡಿಯ ಮದ್ಯದ ವರ್ತಕರ ಜೊತೆ ಸ್ಥಳಿಯವಾಗಿ ಮದ್ಯಮಾರಾಟ ಮಾಡುವ ಹೋಲ್‌ಸೇಲ್ ಮಾರಾಟಗಾರರೂ ಹಾಗೂ ವೈನ್ ಶಾಪ್ ವರ್ತಕರೂ ಕೂಡ ಶಾಮೀಲಾಗಿದ್ದು, ಓರ್ವ ವ್ಯಕ್ತಿಗೆ ಅಗತ್ಯಕ್ಕೆ ಮೀರಿ ಮದ್ಯ ಸರಬರಾಜು ಮಾಡುತ್ತಿರುವ ಪರಿಣಾಮವೇ ಹಳ್ಳಿ ಹಳ್ಳಿಗಳಲ್ಲಿಯೂ ಮದ್ಯ ಮಾರುವ ಗೂಡಂಗಡಿಗಳು ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ

ಆದ್ದರಿಂದ ಕೂಡಲೇ ಅಬಕಾರಿ ಅಧಿಕಾರಿಗಳು ಈ ಬಗ್ಗೆ ಕಡಿವಾಣ ಹಾಗಕೇ ಬೇಕಾಗಿದೆ.ಒಂದೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಲ್ಲಿ ಕಳಪೆ ಗುಣಮಟ್ಟದ ಸರಾಯಿ ಕುಡಿದು ಪ್ರಾಣ ಕಳೆದುಕೊಳ್ಳುವ ಅಮಾಯಕ ಯುವಕರ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ…