ಸುದ್ದಿಬಿಂದು ಬ್ಯೂರೋ
ಕಾರವಾರ :ಬಡವರಿಗೆ ಅನಾರೋಗ್ಯವಾದರೆ ಯಶಸ್ವಿನಿ ಯೋಜನೆ(yeshaswini scheme)ಮೂಲಕ ಆರೋಗ್ಯ ವಿಮೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸರಕಾರ ಯಶಸ್ವಿನಿ ಯೋಜನೆ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆ ಒಂದರಲ್ಲೇ ವರ್ಷ ಮುಗಿಯುತ್ತಾ ಬಂದರೂ ಸಾವಿರಾರು ಜನರಿಗೆ ಯಶಸ್ವಿನಿ ಕಾರ್ಡ್ ಕೈಗೆ ಸಿಗದೆ ಪರದಾಡುವಂತಾಗಿದೆ.

ಪ್ರತೀ ಗ್ರಾಮೀಣ ಭಾಗದಲ್ಲಿರುವ ಸಹಕಾರಿ ಸಂಘದ ಮೂಲಕ ಸೇವಾ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವವರಿಗೆ ಹಾಗೂ ಅವರ ಕುಟುಂಬಕ್ಕೆ ಅನ್ವಯವಾಗುವಂತೆ ಯಶಸ್ವಿನಿ ವಿಮೆ ಜಾರಿ ಮಾಡಿದೆ. ಆದರೆ ವರ್ಷ ಮುಗಿಯಲು ಇನ್ನು 23ದಿನ ಮಾತ್ರ ಬಾಕಿ ಇದೆ. ಆದರೆ ಈ ಹಿಂದೆ ಯಶಸ್ವಿನಿ ಕಾರ್ಡ್(ವಿಮೆ)ಗಾಗಿ ಹಣ ತುಂಬಿದ್ದರೂ ಕೂಡ ಇದುವರೆಗೆ ಅರ್ಧಕ್ಕರದ ಜನರಿಗೆ ಯಶಸ್ವಿನಿ ಕಾರ್ಡ್ ಕೈಗೆ ಬಂದಿಲ್ಲ.

ಯಶಸ್ವಿನಿ ಕಾರ್ಡಿಗಾಗಿ ಹಣ ತುಂಬಿಸಿಕೊಂಡ ಆಯಾ ಸಹಕಾರಿ ಸಂಘಗಳು ಈಗಾಗಲೇ ಪ್ರತೀ ಫಲಾನುಭವಿಗಳ ಹಣವನ್ನು ಸಂಬಂಧಿಸಿದ ಬ್ಯಾಂಕಿನ ಯಶಸ್ವಿನಿ ಯೋಜನೆ ಖಾತೆಗೆ ಹಣ ಸಹ ಜಮಾ ಮಾಡಿದೆ. ಹಣ ಜಮಾ ಮಾಡಿರುವ ದಾಖಲೆಗಳು ಆಯಾ ಸಹಕಾರಿ ಸಂಘದಲ್ಲಿದೆ. ಎಲ್ಲಾ ಇದ್ದರೂ ಸಹ ಯಶಸ್ವಿನಿ ಯೋಜನೆಗಾಗಿ ಅರ್ಜಿ ಸಲ್ಲಿಸಿದವರಿಗೆ ವರ್ಷ ಪೂರ್ಣವಾಗುತ್ತಾ ಬಂದರೂ ಸಹ ಇನ್ನೂ ಕಾರ್ಡ್ ಕೈಗೆ ಬಂದಿಲ್ಲ. ಹೀಗಾಗಿ ಯಶಸ್ವಿನಿ ಯೋಜನೆಯಡಿ ಸಿಗಬೇಕಾದ ಸವಲತ್ತು ಫಲಾನುಭವಿಗಳಿಗೆ ಸಿಗದಂತಾಗಿದ್ದು,ಅವ್ಯವಹಾರದ ವಾಸನೆ ದಟ್ಟವಾಗುತ್ತಿದೆ.

ಉತ್ತರ ಕನ್ನಡ (Utarakannda) ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಸೇವಾ ಸಹಕಾರಿ ಸಂಘದಲ್ಲಿ ಇದುವರೆಗೆ 428 ಮಂದಿ ಯಶಸ್ವಿನಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಂಘದಿಂದ ಎಲ್ಲಾ 428 ಜನರಿಂದ ಪಡೆದಿರುವ ಒಟ್ಟು ಹಣವನ್ನು ಯಶಸ್ವಿನಿ ಯೋಜನೆಯ ಖಾತೆಗೆ ಜಮಾ ಮಾಡಲಾಗಿದೆ. ಈ ಬಗ್ಗೆ ದಾಖಲೆ ಸಹ ಸಹಕಾರಿ ಸಂಘದ ಬಳಿ ಇದೆ. ಆದರೆ ಕೇವಲ 92 ಫಲಾನುಭವಿಗಳಿಗೆ ಮಾತ್ರ ಯಶಸ್ವಿನಿ ಕಾರ್ಡ್ ಲಭ್ಯವಾಗಿದ್ದು, ಉಳಿದ 326ಮಂದಿಗೆ ಇನ್ನೂ ಕಾರ್ಡ್ ಬಂದಿಲ್ಲ.

ಇತ್ತೀಚಿಗೆ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಆಸ್ಪತ್ರೆಗೆ ದಾಖಲೆ ಸಲ್ಲಿಸಿದ್ದಾರೆ.ಆದರೆ ಅದನ್ನು ಪರಿಶೀಲಿಸಿದಾಗ ಸಂಬಂಧಿಸಿದ ಇಲಾಖೆಯಲ್ಲಿ ಅವರ ಹೆಸರು ನಮೂದಾಗಿಲ್ಲ. ಇದರಿಂದಾಗಿ ಕಂಗಾಲದ ಕುಟುಂಬಸ್ಥರು ಸ್ಥಳೀಯ ಸಹಕಾರಿ ಸಂಘದಲ್ಲಿ ವಿಚಾರಿಸಿದಾಗ ಅಲ್ಲಿಂದ ಎಲ್ಲವೂ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪೊರೈಕೆ ಆಗಿರುವುದು ಗೊತ್ತಾಗಿದೆ.

ಈ ಬಗ್ಗೆ ಮೇಲಾಧಿಕಾರಿಗಳನ್ನು ವಿಚಾರಿಸಿದರೆ `ತಪ್ಪಾಗಿದ್ದರೆ ಸರಿ ಪಡಿಸಿಕೊಳ್ಳುತ್ತೇವೆ'' ಎನ್ನುವ ಸಿದ್ಧ ಉತ್ತರ ಬರುತ್ತದೆ. ಕಾರ್ಡ್ ಬಾರದೆ ಇರುವ ಬಗ್ಗೆ ಯಾರಾದರೂ ಏರು ಧ್ವನಿಯಲ್ಲಿ ಮಾತನಾಡಿದರೆ ಅಂತವರಿಗೆ ಮಾತ್ರ ಯಶಸ್ವಿನಿ ಕಾರ್ಡ್ ಮಾಡಿಕೊಡಲಾಗುತ್ತಿದೆ. ಇದನ್ನು ಗಮನಿಸಿದರೆ ಯಶಸ್ವಿನಿ ಕಾರ್ಡ್ ಹೆಸರಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಆಗಿದೆಯಾ ಎಂಬ ಅನುಮಾನ ಫಲಾನುಭವಿಗಳಲ್ಲಿ ಮೂಡುತ್ತಿದೆ.

ಈ ಬಗ್ಗೆ ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸಿ ಯಾರಿಂದ ಈ ಸಮಸ್ಯೆ ಆಗುತ್ತಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಡಜನರಿಗೆ ಆಸರೆಯಾಗಬೇಕಿದೆ. ಸರ್ಕಾರದ ವಿವಿಧ ಯೋಜನೆಗಳು ಯಾರದೋ ಪಾಲಾಗದೆ ಬಡ ಜನರಿಗೆ ಸಿಗಬೇಕು ಎನ್ನುವುದುಸುದ್ದಿಬಿಂದು’ವಿನ ಕಳಕಳಿಯಾಗಿದೆ.