suddibindu.in
ಕುಮಟಾ: ತಾಲೂಕಿನಾದ್ಯಂತ ಸಾವಿರಾರು ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೋಟಿ ಕೋಟಿ ಹಣ ಖರ್ಜು ಮಾಡಿ ಪೈಪ್ ಲೈನ್ ಮಾಡಿ ಪೈಪ್ ಲೈನ್ ಮಾಡಿ ನಲ್ಲಿ ಅಳವಡಿಸಲಾಗಿದೆ. ಆದರೆ ಇದುವರೆಗೆ ನಲ್ಲಿಯಲ್ಲಿ ಹನಿ..ನೀರು ಬಾರದಂತಾಗಿದೆ.

ಹಿಂದಿನ ಬಿಜೆಪಿ ಸರಕಾರ ಆಡಳಿತದಲ್ಲಿರುವಾಗ ರಾಜ್ಯದಲ್ಲಿ ಈ ಯೋಜನೆಯನ್ನ ಜಾರಿಗೆ ತರಲಾಗಿತ್ತು. ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೊರೈಕೆಗಾಗಿ ಮಾಡುವುದಾಗಿ ಯೋಜನೆ ರೂಪಿಸಲಾಗಿತ್ತು. ದುರಂತ. ನೀರಿನ ಮೂಲವನ್ನೆ ಕಂಡುಕೊಳ್ಳದೆ ಕಂಡ ಕಂಡಲ್ಲಿ ಹಾದಿ ಬೀದಿಯನ್ನ ಅಗೆದು ಪೈಪ್ ಲೈಲ್ ಮಾಡಿ ಮೂರನಾಲ್ಕು ವರ್ಷಗಳೆ ಕಳೆದು ಹೋಗಿದೆ. ಜನ ನೀರು ಯಾವಾಗ ಬರುತ್ತದೆ ಎನ್ನುವುದಕ್ಕಿಂತ ಆ ನಲ್ಲಿಗಳು ಜಟಕ ದೇವರರಂತೆ ಮನೆ ಮನೆಯಂಗಳದಲ್ಲಿ ನನ್ನ ನಿಲ್ಲಿಸಿಟ್ಟು ವರ್ಷಕಳೆದು ಇನ್ನೂ ಹನಿ ನೀರು ಇಲ್ಲ ಎಂದು ಆ ನಲ್ಲಿಗಳು ಪ್ರಶ್ನೆ ಮಾಡುವಂತಾಗಿದೆ.”ಮನೆ ಮನೆಗೆ ಗಂಗೆ” ಎಂದು ನಾಮಕರಣ ಮಾಡುವ ಮೂಲಕ ನೀರು ಸರಬರಾಜು ಮಾಡದೆ “ಗಂಗೆ” ಹೆಸರಿಗೂ ಅವಮಾನ ಮಾಡಿದಂತಾಗಿದೆ.

ಗೋಕರ್ಣ ಕುಡಿಯುವ ನೀರಿನ ಯೋಜನೆಗಾಗಿ ಗಂಗಾವಳಿ ನದಿಯಿಂದ ನೀರನ್ನ ಪೊರೈಸಲು ಯೋಜನೆ ಮಾಡಿ ಉದ್ಘಾಟನೆ ಕೂಡ ಮಾಡಲಾಗಿದೆ. ಇದು ಗೋಕರ್ಣ ಸೇರಿಸದಂತೆ ಬರ್ಗಿ ಗ್ರಾಮದವರೆಗೆ ಯೋಜನೆ ವಿಸ್ತರಿಸಲಾಗಿದೆ. ಇದಕ್ಕೆ ಸರಿ ಸುಮಾರು ಐದರಿಂದ ಹತ್ತುಕೋಟಿ ಹಣ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ಎಲ್ಲಾ ಹಣ ಗಂಗಾವಳಿ ನದಿಯಲ್ಲೇ ಬತ್ತಿ ಹೋದಂತಾಗಿದೆ. ಪ್ರತಿ ಬಾರಿಯೂ ಏಪ್ರಿಲ್‌ನಿಂದ ಮೇ ತಿಂಗಳ ವರೆಗೆ ಗಂಗಾವಳಿ ನದಿಯಲ್ಲಿ ನೀರಿನ ಬರ ಎದುರಾಗುವುದು ಸಾಮಾನ್ಯ ಹೀಗಿರುವಾಗ ಜನರಿಗೆ ಬೇಸಿಗೆಯಲ್ಲಿಯೇ ಅವಶ್ಯವಾಗಿ ಬೇಕಾಗಿರುವಾಗ ನೀರು ಸರಬರಾಜು ಮಾಡುವುದು ಹೇಗೆ ಸಾಧ್ಯ.ಈ ಯೋಜನೆ ರೂಪಿಸುವಾಗ ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲಿನ ನೀರಿನ ಸಮಸ್ಯೆ ಅರಿವಿರಲಿಲ್ಲವೇ.? ಅಥವಾ ಸರಕಾರದ ಕೋಟಿ ಕೋಟಿ ಹಣವನ್ನ ಗುತ್ತಿಗೆದಾರರ ಮೂಲಕ ಕೊಳ್ಳೆಹೊಡೆಯಲು ಯೋಜನೆ ರೂಪಿಸಿದ್ದಾರೆಯೇ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದಾರೆ.

ಈ ಯೋಜನೆ ಇಲ್ಲಷ್ಟೆ ಅಲ್ಲದೇ ಉತ್ತರಕನ್ನಡ ಜಿಲ್ಲಾಧ್ಯಂತ ಹಳ್ಳಹಿಡಿದೆ. ನಲ್ಲಿಯಲ್ಲಿ ನೀರು ಹರಿಯದೆ ಹೋದರು ಕಾಮಗಾರಿ ಗುತ್ತಿಗೆದಾರರಿಗೆ ಎಲ್ಲಾ ಹಣ ಸರಿಯಾಗಿ ಸರಕಾರ ಸರಬರಾಜು ಮಾಡಿದೆ ಎನ್ನಲಾಗಿದೆ. ಹೀಗಾಗಿ ಸರಕಾರ ಈ ಬಗ್ಗೆ ಎಚ್ಚೇತ್ತುಕೊಳ್ಳುವ ಮೂಲಕ ಸಮಗ್ರ ತನಿಖೆ ಮಾಡಿ ಕೋಟಿ ಕೋಟಿ ಲೂಟಿ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.