suddibindu.in

ಕುಮಟಾ : ಪೊಲೀಸರೆಂದರೆ ಕಾನೂನು ರಕ್ಷಕರು, ನಾಗರಿಕರ ರಕ್ಷಣೆಗಾಗಿಯೇ ಪೊಲೀಸರು ಇರುವ ಕಾರಣ ಅವರನ್ನು ಆರಕ್ಷಕರು ಎಂದೇ ಕರೆಯಲಾಗುತ್ತದೆ. ಆದರೆ ಪೊಲೀಸ್ ಪೇದೆಯೇ ನೀತಿ ನಿಯಮ ಮೀರಿ ನಡುರಸ್ತೆಯಲ್ಲಿ ನಾಗರಿಕರಿಗೆ ಧಮ್ಕಿ ಹಾಕಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವುದಿಲ್ಲವೇ? ಹೀಗೊಂದು ಘಟನೆ ಇಂದು ಸಂಜೆ ಕುಮಟಾದ ರೈಲ್ವೇ ಬ್ರಿಡ್ಜ್ ಬಳಿ ನಡೆದಿರುವುದಾಗಿ ಸಾರ್ವಜನಿಕರು `ಸುದ್ದಿ ಬಿಂದು’ಗೆ ತಿಳಿಸಿದ್ದಾರೆ.

ಪಟ್ಟಣದ ರೈಲ್ವೆ ಬ್ರಿಡ್ಜ್ ಬಳಿ ವಾಹನ ತಪಾಸಣೆಗಾಗಿ ನಿಂತ ಕುಮಟಾ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ವಿಜಯಪುರ ಮೂಲದ ಪೊಲೀಸ್ ಪೇದೆ ವಾಹನ ಸವಾರರಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಸಾರ್ವಜನಿಕರ ಆರೋಪ ಕಳೆದ ಅನೇಕ ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಇವರ ಕಿರುಕುಳಕ್ಕೆ ವಾಹನ ಸವಾರರು ಹೈರಾಣಾಗಿದ್ದು, ಇದೀಗ ಸ್ಥಳೀಯ ನಾಗರಿಕರು ಪೊಲೀಸ್ ಪೇದೆ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ.

ಇಂದು ಸಂಜೆ ಪಟ್ಟಣದ ರೈಲ್ವೇ ಬ್ರಿಡ್ಜ್ ಬಳಿ ವ್ಯಕ್ತಿಯೋರ್ವರು ಹೆಲ್ಮೆಟ್ ಧರಿಸದೇ ತಮ್ಮ ಸ್ಕೂಟರ್ ಓಡಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸ್ ಪೇದೆ ಬಂದು ದಿಢೀರ್ ಸ್ಕೂಟರಿಗೆ ಕೈ ಹಾಕಿ ಕೀ ಕಿತ್ತುಕೊಂಡಿದ್ದಾರೆನ್ನಲಾಗಿದೆ. ಆಗ ಸ್ಕೂಟರ್ ಸವಾರ ಪೇದೆಯನ್ನು ಪ್ರಶ್ನಿಸಿದ್ದು, ಸವಾರ ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿರುವುದರಿಂದ ತನ್ನ ತಪ್ಪಾಗಿದೆ. ಸರಕಾರದ ನಿಯಮದಂತೆ ದಂಡ ಏನಿದೆ ಅದನ್ನು ನಾನು ಕಟ್ಟುತ್ತೇನೆ ಎಂದು ಹೇಳಿದರೂ ಕೂಡ ಪೇದೆ ಬಾಯಿಗೆ ಬಂದ ಹಾಗೆ ಮಾತನಾಡಿ ಸ್ಕೂಟರ್ ಕೀ ನೀಡಲು ಕಿರಿಕಿರಿ ಮಾಡಿದ್ದಾನೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ತಾನು ಬಿಜಾಪುರದವನು, ನಿಮ್ಮಂತವರನ್ನು ಬಹಳ ಜನ ನೋಡಿದ್ದೇನೆ ಎಂದು ಸ್ಕೂಟರ್ ಸವಾರಗೆ ಧಮ್ಕಿ ಹಾಕಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಸ್ಕೂಟರ್ ಸವಾರ ಕಾನೂನಿಗೆ ತಲೆಭಾಗಿ ದಂಡ ತುಂಬಿ ಹೋಗಿದ್ದಾರೆ. ಆದರೆ ಪಿತ್ತ ನೆತ್ತಿಗೆ ಏರಿದಂತೆ ವರ್ತಿಸುತ್ತಿದ್ದ ಪೊಲೀಸ್ ಪೇದೆ “ಹೆಚ್ಚಿಗೆ ಮಾತಾಡಿದರೆ ನಿಮ್ಮ ವಿರುದ್ಧ ಯಾವ್ಯಾವುದೋ ಕೇಸ್ ದಾಖಲಿಸುತ್ತೇನೆ” ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.