suddibindu.in
ಹೊನ್ನಾವರ: ಯಾರೂ ಕೂಡ ಇದೇ ಧರ್ಮ, ಜಾತಿಯಲ್ಲಿ ಹುಟ್ಟಬೇಕೆಂದು ಹುಟ್ಟುವುದಿಲ್ಲ. ಆದರೆ ಕೆಲಸಗಳಿಲ್ಲದ ಬಿಜೆಪಿಗರು ಇದೇ ಜಾತಿ- ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ನಾವೇನು ಹಿಂದು ಅಲ್ವಾ? ಕೇವಲ ಚುನಾವಣೆಗಾಗಿ, ಅಧಿಕಾರಕ್ಕಾಗಿ ಹಿಂದುತ್ವ ಎನ್ನುವ ಅವರಿಗೆ ಯಾರೂ ಮರುಳಾಗಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಹಳಿಯಾಳ ಶಾಸಕರೂ ಆದ ಆರ್.ವಿ.ದೇಶಪಾಂಡೆ ಕರೆನೀಡಿದರು
.

ನಗರಬಸ್ತಿಕೇರಿ ಜಿಲ್ಲಾ ಪಂಚಾಯತ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮತದ ಮಹತ್ವ ಅರಿತಾಗ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ. ಬಿಜೆಪಿಯ ಆಡಳಿತದಲ್ಲಿ ಅಭಿವೃದ್ಧಿ ಆಗಿಲ್ಲ, ಆದರೆ ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿತು. ಬಿಜೆಪಿಗರು ಆಶ್ವಾಸನೆ ನೀಡಿದಂತೆ ಜನಧನ್ ಖಾತೆಗೆ ೧೫ ಲಕ್ಷ ರೂ. ಬಂದಿಲ್ಲ, ಬದಲಾಗಿ ಸೇವಾ ಶುಲ್ಕವನ್ನ ನಮ್ಮದೇ ಖಾತೆಯಿಂದ ಕಡಿತಗೊಳಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಸಂಸದರುಗಳು ಸಂಸತ್‌ನಲ್ಲಿ ಮೌನಿ ಬಾಬಾಗಳಾಗಿದ್ದರು. ಕಾಂಗ್ರೆಸ್ ಯಾವತ್ತೂ ಜಾತಿ- ಧರ್ಮವನ್ನ ನೋಡಿಲ್ಲ. ಆದರೆ ಅದೇ ಜಾತಿ- ಧರ್ಮದ ಹೆಸರಲ್ಲಿ ಕೆಲವು ದೇಶವನ್ನ ಇಬ್ಭಗೆ ಮಾಡ ಹೊರಟಿದ್ದಾರೆ. ಸಂವಿಧಾನ ಬದಲಿಸಲು ಹೊರಟವರು, ಗಾಂಧೀಯನ್ನ ಕೊಂದ ಗೋಡ್ಸೆಯನ್ನ ದೇಶಭಕ್ತ ಎನ್ನುವವರನ್ನು ಈ ಬಾರಿ ಮನೆಗೆ ಕಳುಹಿಸಬೇಕಿದೆ. ಸುಳ್ಳನ್ನ ಕರಗತ ಮಾಡಿಕೊಂಡಿರುವ ಬಿಜೆಪಿಗರು, ಕಪ್ಪು ಹಣ ತರುತ್ತೇವೆಂದು ಚುನಾವಣಾ ಬಾಂಡ್ ಮೂಲಕ ಅಧಿಕೃತವಾಗಿ ಭ್ರಷ್ಟಾಚಾರ ಮಾಡುವುದನ್ನ ಹೇಳಿಕೊಟ್ಟಿದ್ದಾರೆ. ಬಿಜೆಪಿ ವಾಷಿಂಗ್ ಮಶೀನ್ ಆಗಿಬಿಟ್ಟಿದೆ. ಭ್ರಷ್ಟಾಚಾರಿಗಳೆಲ್ಲ ಅವರ ಪಕ್ಷಕ್ಕೆ ಸೇರಿ ಶುದ್ಧರಾಗುತ್ತಿದ್ದಾರೆ. ಡಬಲ್ ಸ್ಟ್ಯಾಂಡರ್ಡ್‌ನ ಬಿಜೆಪಿಗರ ಬಗ್ಗೆ ಜನ ಎಚ್ಚರವಿರಬೇಕು ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯ ಜನ ಮುಗ್ದರು, ಹೇಗೆ ಬೇಕಾದರೂ ವಂಚಿಸಬಹುದೆಂದು ಬಿಜೆಪಿಗರು ಅಂದುಕೊಂಡಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಯನ್ನ ಜಿಲ್ಲೆಯ ಜನರ ಧ್ವನಿಯಾಗಿ ಗೆಲ್ಲಿಸಬೇಕಿದೆ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರಬೇಕಿದೆ. ಬಿಜೆಪಿಯ ಸಂಸದರು ಒಮ್ಮೆಯೂ ಸಂಸತ್‌ನಲ್ಲಿ ಯಾವ ಸಮಸ್ಯೆಯ ಬಗ್ಗೆಯೂ ಮಾತನಾಡಿಲ್ಲ. ಸಮಾನತೆಗಾಗಿ ಕಾಂಗ್ರೆಸ್ ಗೆಲ್ಲಬೇಕಿದೆ. ಬಿಜೆಪಿಯ ಈಗಿನ ಅಭ್ಯರ್ಥಿ ಆರು ಬಾರಿ ಶಾಸಕರಾದರೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಏನಿಲ್ಲ. ಅಂಥವರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವೇ ಎಂಬುದನ್ನ ಜನ ಯೋಚಿಸಿ ಮತ ಚಲಾಯಿಸಬೇಕಿದೆ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ೩೦ ವರ್ಷಗಳಿಂದ ಜಿಲ್ಲೆಯ ಜನಕ್ಕೆ ಒಂದೇ ಒಂದು ಯೋಜನೆ ನೀಡದೆ ಬಹುದೊಡ್ಡ ಮೋಸ ಮಾಡಲಾಗಿದೆ. ಈ ೩೦ ವರ್ಷಗಳ ವನವಾಸ ಕೊನೆಗೊಳ್ಳಬೇಕೆಂದರೆ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಬೇಕಿದೆ. ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ನನಗೂ ಅರಿವಿದೆ. ಬಂದರು, ನೌಕಾನೆಲೆ, ಕೈಗಾದಂಥ ಬೃಹತ್ ಯೋಜನೆಗಳಲ್ಲಿ ಸ್ಥಳೀಯ ಯುವಜನರಿಗೆ ಉದ್ಯೋಗ ಸಿಗಬೇಕಿದೆ. ಬಿಜೆಪಿಗರಿಗೆ ಪಾಠ ಕಲಿಸಲು ಈ ಚುನಾವಣೆಯೊಂದೇ ಅವಕಾಶ ಎಂದರು.

ಸ್ಥಳೀಯ ಮಹಿಳೆಯರು ಉಡಿ ತುಂಬುವ ಮೂಲಕ ಡಾ‌.ಅಂಜಲಿ ಅವರಿಗೆ ಆಶೀರ್ವದಿಸಿದರು‌‌.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ವೆಂಕಟೇಶ ಹೆಗಡೆ ಹೊಸಬಾಳೆ, ಗಣೇಶ್ ನಾಯ್ಕ ಮುಂತಾದವರಿದ್ದರು.

ಹೆಣದ ಮೇಲೆ ರಾಜಕೀಯ.ಬಿ.ಕೆ.ಹರಿಪ್ರಸಾದ್

ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡುವವರು ಬಿಜೆಪಿಯವರು ಎಂದು ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಪರೇಶ್ ಮೇಸ್ತಾ ಎಂಬ ಯುವಕನ ಸಾವಿನ ಕೇಸನ್ನ ನಾವೇ ಸಿಬಿಐಗೆ ಕೊಟ್ಟೆವು. ಅನ್ಯಧರ್ಮೀಯರೆ ಕೊಲೆ ಮಾಡಿದ್ದರು ಎಂದು ಬೊಬ್ಬೆ ಹೊಡೆದಿದ್ದರು. ಆದರೆ ಅವರದೇ ಕೇಂದ್ರ ಸರ್ಕಾರದಡಿಯ ಸಿಬಿಐ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿತು ಎಂದರು. ಬಿಜೆಪಿ ಮನೆಯವರು ಯಾರೂ ತ್ಯಾಗ- ಬಲಿದಾನ ಮಾಡಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ನವರು ಯಾರಾದರೂ ಒಬ್ಬರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರೆ ಹೇಳಿ. ಇವರಿಂದ ದೇಶಭಕ್ತರೆಂಬ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನರೇಂದ್ರ ಮೋದಿ ಆ್ಯಂಡ್ ಕಂಪನಿ ಪ್ರತಿದಿನವೂ ಸುಳ್ಳು ಹೇಳುವ ಐದು ಯೂನಿವರ್ಸಿಟಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹೆಣ್ಣುಮಕ್ಕಳನ್ನ ತಪ್ಪುದಾರಿಗೆ ಎಳೆಯುತ್ತಿದ್ದಾರೆ
ಕುಮಾರಸ್ವಾಮಿಯವರು, ಕಾಂಗ್ರೆಸ್ ಗ್ಯಾರಂಟಿ ಮೂಲಕ ಹೆಣ್ಣುಮಕ್ಕಳನ್ನ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎನ್ನುತ್ತಾರೆ. ಅವರು ಸ್ಪಷ್ಟಪಡಿಸಬೇಕು, ನಾವು ಹೇಗೆ ತಪ್ಪು ದಾರಿ ತೋರಿಸುತ್ತಿದ್ದೇವೆಂದು. ಹೆಣ್ಣುಮಕ್ಕಳನ್ನ ಸಬಲೀಕರಣಗೊಳಿಸಿದರೆ ಬಿಜೆಪಿ- ಜೆಡಿಎಸ್‌ನವರು ಯಾಕೆ ಬೇಸರವಾಗುತ್ತೆ?

ಡಾ.ಅಂಜಲಿ ನಿಂಬಾಳ್ಕರ್, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ