suddibindu.in
ಹೊನ್ನಾವರ: ತಾಲೂಕಿನ ಹೊದ್ಕೆ ಪ್ರೌಢಶಾಲೆಯ ಉಪಾಧ್ಯಕ್ಷ ನೋರ್ವ ಅದೇ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಬಗ್ಗೆ ಎಫ್ ಐ ಆರ್ ದಾಖಲಾಗಿದೆ.

ಹೊದ್ಕೆ ಪ್ರೌಢಶಾಲೆಯ ಉಪಾಧ್ಯಕ್ಷ, ಕಡ್ನೀರು ನಿವಾಸಿ ಮಾರುತಿ ಪ್ರಭು ಜೀವ ಬೆದರಿಕೆ ಹಾಕಿದ ವ್ಯಕ್ತಿಯಾಗಿದ್ದಾನೆ. ಹೊದ್ಕೆಯ ನಿವಾಸಿ ಜನಾರ್ಧನ ಸತ್ಯಪ್ಪ ನಾಯ್ಕ ಅವರು ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದಾರೆಂದು ದೂರು ನೀಡಿದವರು. ಜನಾರ್ಧನ ನಾಯ್ಕ ಅವರು ಇತ್ತೀಚೆಗೆ ತನ್ನ ಮಗಳಿಗೆ ಶಾಲೆಯಲ್ಲಿ ಮಾನಸಿಕ ಹಿಂಸೆ ಆಗಿದೆ ಎಂದು ಫೆ.20 ರಂದು ಹೊನ್ನಾವರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ

ಈ ಬಗ್ಗೆ ಫೆ.21 ರಂದು ಹೊದ್ಕೆ ಪ್ರೌಢಶಾಲೆಯ ಉಪಾಧ್ಯಕ್ಷ ಮಾರುತಿ ಪ್ರಭು ಬಾಯಿಗೆ ಬಂದಂತೆ ಮಾತಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮಾರುತಿ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೊನ್ನಾವರ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣದ ಕುರಿತು ನ್ಯಾಯ ಒದಗಿಸಿಕೊಡಿ ಎಂದು ಜನಾರ್ಧನ ನಾಯ್ಕ ಅವರು ಉಪಾಧ್ಯಕ್ಷ ಮಾರುತಿ ಪ್ರಭು ಈತನಲ್ಲಿ ಫೋನ್ ಮಾಡಿ ಅಂಗಲಾಚಿದ್ದಾರೆ. ಆದರೆ ಉಪಾಧ್ಯಕ್ಷನಿಗೆ ಜನಾರ್ಧನ ನಾಯ್ಕ ಅವರಿಗೆ ಫೋನ್ ಸಂಭಾಷಣೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತನ್ನ ಮಗಳಿಗಾದ ಅನ್ಯಾಯವನ್ನು ತುಂಬಿಕೊಡುವವರು ಯಾರು? ಈ ಬಗ್ಗೆ ತಾವು ಸಭೆ ಪರಿಹರಿಸಿಕೊಡಿ ಎಂದು ವಿನಂತಿಮಾಡಿಕೊಂಡಿದ್ದಾರೆನ್ನಲಾಗಿದೆ. ಆದರೆ ಮಾತಿನ ಹಿಡಿತ ತಪ್ಪಿದ ಉಪಾಧ್ಯಕ್ಷ `ನಿನಗೆ ತಾಕತ್ತಿದ್ದರೆ ಮುಖ್ಯಾಧ್ಯಾಪಕರನ್ನ ವರ್ಗಾವಣೆ ಮಾಡು. ಎಲ್ಲರ ಹತ್ತಿರ ಮಾತನಾಡಿದ ಹಾಗೆ ಅಲ್ಲ’ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾರುತಿ ಪ್ರಭು ಕಳೆದೆರಡು ವರ್ಷಗಳ ಹಿಂದೆ ಕುಮಟಾದ ಸಾಂತಗಲ್ ಚೆಕ್‍ಪೋಸ್ಟ್ ಬಳಿಯಿರುವ ಅಂಗಡಿಯೊಂದರ ಸಿಸಿ ಕ್ಯಾಮೆರಾ ಧ್ವಂಸಗೊಳಿಸಿದ್ದ. ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಸೇರಿ ಹಲವು ಪ್ರಕರಣಗಳು ಈತನ ಮೇಲಿದ್ದು, ಕಾನೂನು ಮೀರಿ ಮಾತಿಗಿಳಿಯುತ್ತಾನೆ ಎಂಬ ಆರೋಪ ಕೇಳಿಬಂದಿದೆ.

ಪೊಲೀಸ್ ಅಧಿಕಾರಿಗಳಿಗೂ ಕ್ಯಾರೇ ಎನ್ನದ ಈತನ ಮೇಲೆ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹೊನ್ನಾವರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನಾರ್ಧನ ನಾಯ್ಕ ಆಗ್ರಹಿಸಿದ್ದಾರೆ.